Friday, 22nd November 2024

ಮಹಾರಾಷ್ಟ್ರ ಸಾರಿಗೆ ನೌಕರರ ಮುಷ್ಕರ 15ನೇ ದಿನಕ್ಕೆ

ಮುಂಬೈ: ಆರ್ಥಿಕವಾಗಿ ನಷ್ಟದಲ್ಲಿರುವ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮ ವನ್ನು ರಾಜ್ಯ ಸರ್ಕಾರದೊಂದಿಗೆ ವಿಲೀನ ಗೊಳಿಸುವಂತೆ ಒತ್ತಾಯಿಸಿ, ನಿಗಮದ ನೌಕರರು ನಡೆಸುತ್ತಿರುವ ಮುಷ್ಕರ 15ನೇ ದಿನಕ್ಕೆ ಕಾಲಿಟ್ಟಿದೆ.

ಸರ್ಕಾರ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಿದೆ. ದಯವಿಟ್ಟು ಸಹಕರಿಸಿ’ ಎಂದು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಮನವಿಗೂ ಸ್ಪಂದಿಸದ ನೌಕರರು ಮುಷ್ಕರ ಮುಂದುವರಿಸಿದ್ದಾರೆ.

ಮುಷ್ಕರದಿಂದಾಗಿ 250 ಬಸ್ ಡಿಪೊಗಳು ಸತತ ಎರಡನೇ ದಿನವೂ ಮುಚ್ಚಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಸ್‌ ಸಂಚಾರ ಸ್ಥಗಿತಗೊಂಡ ಕಾರಣ ರಾಜ್ಯ ದಾದ್ಯಂತ ಲಕ್ಷಾಂತರ ಪ್ರಯಾಣಿಕರು ಪರದಾಡುವಂತಾಗಿದೆ.

ಉದ್ಯೋಗಿಗಳನ್ನು ಅಮಾನತುಗೊಳಿಸಿದ್ದರೂ, ಎಂಎಸ್‌ಆರ್‌ಟಿಸಿ ಕಾರ್ಮಿಕರು ನಿಗಮ ವನ್ನು ರಾಜ್ಯ ಸರ್ಕಾರದೊಂದಿಗೆ ವಿಲೀನಗೊಳಿಸಬೇಕು ಎಂಬ ತಮ್ಮ ಬೇಡಿಕೆಯನ್ನು ಈಡೇರಿಸುವವರೆಗೆ ಮುಷ್ಕರ ಮುಂದುವರಿಸಲು ದೃಢ ನಿರ್ಧಾರ ಮಾಡಿದ್ದಾರೆ.

ಇಲ್ಲಿಯವರೆಗೂ ನೌಕರರ ಬೇಡಿಕೆ ಈಡೇರಿಸುವ ಸಂಬಂಧ ಸರ್ಕಾರದ ಅಧಿಕಾರಿಗಳೊಂದಿಗೆ ಯಾವುದೇ ಸಭೆ ನಿಗದಿಯಾಗಿಲ್ಲ. ನಿಗಮದ ನೌಕರರ ಒಂದು ಗುಂಪು ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್‌ಠಾಕ್ರೆ ಅವರನ್ನು ಭೇಟಿ ಮಾಡಲು ನಿರ್ಧರಿಸಿದೆ.