Saturday, 16th November 2024

Maharashtra High drama: ಮೂರನೇ ಮಹಡಿಯಿಂದ ಸೇಫ್ಟಿ ನೆಟ್‌ ಮೇಲೆ ಹಾರಿದ ಡೆಪ್ಯೂಟಿ ಸ್ಪೀಕರ್, ಶಾಸಕರು-ಇಲ್ಲಿದೆ ವಿಡಿಯೋ

maha high drama

ಮುಂಬೈ: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮಹಾರಾಷ್ಟ್ರ(Maharashtra High drama)ದಲ್ಲಿ ಉಪ ಸಭಾಪತಿ ನೇತೃತ್ವದಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಹೈಡ್ರಾಮಾಕ್ಕೆ ತಿರುಗಿದೆ. ಪ್ರತಿಭಟನಾ ನಿರತ ವಿಧಾನಸಭೆಯ ಉಪ ಸ್ಪೀಕರ್ ನರಹರಿ ಜೀರ್ವಾಲ್(Narhari Jhirwal) ಮತ್ತು ಕೆಲವು ಶಾಸಕರು ಮಂತ್ರಾಲಯದ ಮೂರನೇ ಮಹಡಿಯಿಂದ ಕೆಳಗೆ ಹಾರಿದ್ದು, ಸೇಫ್ಟಿ ನೆಟ್‌ನಿಂದಾಗಿ ಬಚಾವಾಗಿದ್ದಾರೆ.

ಧನಗರ್ ಸಮುದಾಯದ ಪರಿಶಿಷ್ಟ ಜಾತಿಗೆ ಸೇರಿಸುವ ಬೇಡಿಕೆಯನ್ನು ವಿರೋಧಿಸಿ ಜೀರ್ವಾಲ್‌ ಮತ್ತು ಬುಡಗಟ್ಟು ಸಮುದಾಯದ ಶಾಸಕರು ಇಂದು ಮಹಾರಾಷ್ಟ್ರದ ಮಂತ್ರಾಲಯದ ಎದುರು ಪ್ರತಿಭಟನೆ ನಡೆಸುತ್ತಿದ್ದರು. ತಮ್ಮ ದೀರ್ಘಕಾಲದ ಸಮಸ್ಯೆಗಳನ್ನು ಬಗೆಹರಿಸಲು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಭೇಟಿ ಮಾಡಬೇಕೆಂದು ಶಾಸಕರು ಒತ್ತಾಯಿಸಿದ್ದರು. ಹೆಚ್ಚುವರಿ ಪೊಲೀಸ್ ಕಮಿಷನರ್ (ದಕ್ಷಿಣ) ಅಭಿನವ್ ದೇಶಮುಖ್, ಪೊಲೀಸ್ ವಲಯ 1 ರ ಉಪ ಆಯುಕ್ತ ಪ್ರವೀಣ್ ಮುಂಢೆ ಮತ್ತು ಮಂತ್ರಾಲಯ ಭದ್ರತಾ ವಿಭಾಗದ ಉಪ ಆಯುಕ್ತ ಪ್ರಶಾಂತ್ ಪರದೇಶಿ ಸೇರಿದಂತೆ ಪೊಲೀಸ್ ತುಕಡಿ ಪ್ರತಿಭಟನಾ ನಿರತರನ್ನು ಸ್ಥಳದಿಂದ ತೆರವುಗೊಳಿಸಲು ಮುಂದಾಯಿತು.

ಆದರೂ ಉದ್ರಿಕ್ತ ಗುಂಪು ಕ್ಯಾಬಿನೆಟ್ ಸಭೆಯಲ್ಲಿದ್ದ ಮುಖ್ಯಮಂತ್ರಿ ಶಿಂಧೆ ಅವರಿಂದ ತಕ್ಷಣ ಗಮನಹರಿಸಬೇಕು ಎಂದು ಶಾಸಕರು ಒತ್ತಾಯಿಸಿತ್ತು. ಕೊನೆಗೆ ಜೀರ್ವಾಲ್‌ ಮತ್ತು ಇತರ ಶಾಸಕರು ಮೂರನೇ ಮಹಡಿಯಿಂದ ಸೇಫ್ಟಿ ನೆಟ್‌ ಮೇಲೆ ಹಾರಿ ಕೆಲಹೊತ್ತು ಆತಂಕ ಸೃಷ್ಟಿಸಿದ್ದಾರೆ. ತಕ್ಷಣ ಪೊಲೀಸರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿ ಅವರನ್ನು ಸುರಕ್ಷಿತವಾಗಿ ಮೇಲೆ ಕರೆತಂದಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ಶಿಂಧೆ ಸರ್ಕಾರಕ್ಕೆ ಮೀಸಲಾತಿ ಕಗ್ಗಂಟು

ರಾಜ್ಯ ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ, ಮೀಸಲಾತಿಯಲ್ಲಿ ವರ್ಗ ಬದಲಾವಣೆಗಾಗಿ ಧನ್‌ಗರ್‌ (ಕುರುಬ) ಸಮುದಾಯದ ಬೇಡಿಕೆಯು ವೇಗ ಪಡೆಯುತ್ತಿದ್ದು, ಏಕನಾಥ್ ಶಿಂಧೆ ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ಪ್ರಸ್ತುತ, ಸಮುದಾಯವು ಅಲೆಮಾರಿ ಬುಡಕಟ್ಟುಗಳ (NT) ವರ್ಗದ ಭಾಗವಾಗಿದೆ, ಅದರ ಅಡಿಯಲ್ಲಿ ಅವರು ಸರ್ಕಾರಿ ಉದ್ಯೋಗಗಳು ಮತ್ತು ಶಿಕ್ಷಣದಲ್ಲಿ 3.5% ವರೆಗೆ ಮೀಸಲಾತಿ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಎಸ್ಟಿ ವರ್ಗಕ್ಕೆ ಸೇರಿಸುವುದರಿಂದ ಅವರ ಮೀಸಲಾತಿ ಕೋಟಾವು 7% ಕ್ಕೆ ಹೆಚ್ಚಾಗುತ್ತದೆ.

ಆಗಸ್ಟ್‌ನಲ್ಲಿ, ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಎಸ್‌ಸಿ ಪೀಠವು ಈ ವರ್ಗಗಳೊಳಗಿನ ಅತ್ಯಂತ ಹಿಂದುಳಿದ ಸಮುದಾಯಗಳನ್ನು ರಕ್ಷಿಸುವ ಉದ್ದೇಶಕ್ಕಾಗಿ ಎಸ್‌ಸಿ ಮತ್ತು ಎಸ್‌ಟಿ ವರ್ಗಗಳಲ್ಲಿ ಉಪ-ವರ್ಗೀಕರಣಗಳನ್ನು ರಚಿಸಲು ರಾಜ್ಯಗಳಿಗೆ ಅನುಮತಿ ನೀಡಿತ್ತು. ಮತ್ತೊಂದೆಡೆ ಧನಗರ್ ಸಮುದಾಯದ ಆರು ಜನರು-ದೀಪಕ್ ಬೋರಾಟೆ, ಯೋಗೇಶ್ ಧರಮ್, ವಿಜಯ್ ತಮ್ನಾರ್, ಮೌಲಿ ಹರ್ನಾವಾಲ್, ಗಣೇಶ್ ಕೇಸ್ಕರ್ ಮತ್ತು ಯಶವಂತ ಗೇಕೆ ಸೆಪ್ಟೆಂಬರ್ 9 ರಿಂದ ಪಂಢರಪುರದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಮಹಾರಾಷ್ಟ್ರ ಪ್ರವಾಸದಲ್ಲಿದ್ದ ವೇಳೆ, ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ತಮ್ಮ ಆಪ್ತ ಸಹಾಯಕ, ಅಬಕಾರಿ ಸಚಿವ ಶಂಭುರಾಜ್ ದೇಸಾಯಿ ಅವರನ್ನು ಮೂರು ಸಮುದಾಯಗಳ ನಿಯೋಗಗಳನ್ನು ಭೇಟಿ ಮಾಡಿ ಅವರ ಬೇಡಿಕೆಗಳನ್ನು ಆಲಿಸುವಂತೆ ಕೇಳಿಕೊಂಡಿದ್ದರು.

ಈ ಸುದ್ದಿಯನ್ನೂ ಓದಿ: Maharashtra government: ಮಹಾರಾಷ್ಟ್ರದಲ್ಲಿ ʻಗೋವು ರಾಜ್ಯಮಾತೆʼ; ಚುನಾವಣೆಗೂ ಮುನ್ನ ಸರ್ಕಾರದಿಂದ ಮಹತ್ವದ ಘೋಷಣೆ