Thursday, 21st November 2024

ರಾಜಧಾನಿಯ ಏಳು ಆಸ್ಪತ್ರೆಗಳು, ತಿಹಾರ್ ಜೈಲಿಗೆ ಇ-ಮೇಲ್ ಬಾಂಬ್ ಬೆದರಿಕೆ

ವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಏಳು ಆಸ್ಪತ್ರೆಗಳು ಮತ್ತು ತಿಹಾರ್ ಜೈಲಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ಭಯದ ವಾತಾವರಣ ಸೃಷ್ಟಿಸುವ ದುಷ್ಕರ್ಮಿಗಳ ಅಟ್ಟಹಾಸ ಮುಂದುವರಿದಿದೆ.

ಹುಸಿ ಬಾಂಬ್ ಬೆದರಿಕೆ ಹಾಕುತ್ತಿರುವ ಅಪರಿಚಿತರು ತಿಹಾರ್ ಜೈಲು ಹಾಗೂ ದೆಹಲಿಯ ಜಿಟಿವಿ ಆಸ್ಪತ್ರೆ, ದಾದಾ ದೇವ್ ಆಸ್ಪತ್ರೆ, ಹೆಡ್ಡೆವಾರ್ ಆಸ್ಪತ್ರೆ, ದೀಪ್ ಚಂದ್‌ ಬಂಧು ಆಸ್ಪತ್ರೆ, ಕೇಶವಪುರಂನ ಅತ್ತ‌ರ್ ಸೈನ್ ಜೈನ್ ಮತ್ತು ಗೀತಾ ಕಾಲನಿಯಲ್ಲಿರುವ ಚಾಚಾ ನೆಹರು ಆಸ್ಪತ್ರೆಗಳಿಗೆ ಇ-ಮೇಲ್ ಕಳುಹಿಸಿ ಭಯ ಸೃಷ್ಟಿಸಿದ್ದಾರೆ.

ದೇಶಾದ್ಯಂತ ಶಾಲೆಗಳು, ವಿಮಾನ ಮತ್ತು ರೈಲು ನಿಲ್ದಾಣಗಳು ಸೇರಿ ಸಾರ್ವಜನಿಕ ಸ್ಥಳಗಳನ್ನು ಗುರಿಯಾಗಿಸಿಕೊಂಡು ಬೆದರಿಕೆ ಹಾಕಲಾಗುತ್ತಿದ್ದು, ವಿದೇಶಿ ಮೇಲಿಂಗ್ ಸೇವಾ ಕಂಪನಿಗಳ ಮೂಲಕ ಇ-ಮೇಲ್ ‌ ಬರುತ್ತಿವೆ.

ಎಲ್ಲ ಆಸ್ಪತ್ರೆಗಳಿಗೂ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ, ಅಗ್ನಿಶಾಮಕ ದಳ ಮತ್ತು ಬಾಂಬ್ ಪತ್ತೆ ದಳ ಧಾವಿಸಿ ಶೋಧ ಕಾರ್ಯಾಚರಣೆ ನಡೆಸಿದ್ದು, ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ. ಈ ಹಿಂದಿನಂತೆಯೇ ಇವು ಸಹ ಹುಸಿ ಬೆದರಿಕೆ ಆಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.