Wednesday, 23rd October 2024

Mallikarjun Kharge: ಬಿಜೆಪಿ ಭಯೋತ್ಪಾದಕರ ಪಕ್ಷ; ಮೋದಿಯ ಅರ್ಬನ್‌ ನಕ್ಸಲ್‌ ಹೇಳಿಕೆಗೆ ಖರ್ಗೆ ಖಡಕ್‌ ತಿರುಗೇಟು

Mallikarjun Kharge

ನವದೆಹಲಿ: ಬಿಜೆಪಿ ಭಯೋತ್ಪಾದಕರ ಪಕ್ಷ ಎಂದು AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ವಿವಾದದ ಕಿಡಿ ಹೊತ್ತಿದ್ದಾರೆ. ಕಾಂಗ್ರೆಸ್ ನಗರ ನಕ್ಸಲ್ ಪಕ್ಷವನ್ನು ನಡೆಸುತ್ತಿದೆ ಎಂಬ ಪ್ರಧಾನಿ ನರೇಂದ್ರ ಮೋದಿ(PM Narendra Modi)ಯವರ ಹೇಳಿಕೆಗೆ ಬಹಳ ತೀಕ್ಷ್ಣವಾಗಿ ಟಾಂಗ್‌ ಕೊಟ್ಟ ಖರ್ಗೆ, ಬಿಜೆಪಿಯನ್ನು ಭಯೋತ್ಪಾದಕರ ಪಕ್ಷ ಎಂದು ಕರೆದಿದ್ದಾರೆ.

ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ. “ಮೋದಿ ಯಾವಾಗಲೂ ಕಾಂಗ್ರೆಸ್ ಅನ್ನು ನಗರ ನಕ್ಸಲ್ ಪಕ್ಷ ಎಂದು ಲೇಬಲ್ ಮಾಡುತ್ತಾರೆ. ಅದು ಅವರ ಅಭ್ಯಾಸ. ಆದರೆ ಅವರ ಸ್ವಂತ ಪಕ್ಷದ ಬಗ್ಗೆ ಏನು ಹೇಳುತ್ತಾರೆ? ಬಿಜೆಪಿ ಭಯೋತ್ಪಾದಕರ ಪಕ್ಷವಾಗಿದ್ದು, ಹತ್ಯೆಯಲ್ಲಿ ತೊಡಗಿದೆ. ಇಂತಹ ಆರೋಪ ಮಾಡುವ ಹಕ್ಕು ಮೋದಿಯವರಿಗಿಲ್ಲ ಎಂದು ಬಹಳ ಖಾರವಾಗಿ ತಿರುಗೇಟು ಕೊಟ್ಟಿದ್ದಾರೆ.

ಮೋದಿ ಹೇಳಿದ್ದೇನು?

ನಗರ ನಕ್ಸಲರು ಕಾಂಗ್ರೆಸ್ ಅನ್ನು ನಡೆಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಎರಡು ಬಾರಿ, ವಿವಿಧ ಸಂದರ್ಭಗಳಲ್ಲಿ ಹೇಳಿದ್ದಾರೆ. ಅಕ್ಟೋಬರ್ 5 ರಂದು, ಪಿಎಂ ನರೇಂದ್ರ ಮೋದಿ ಅವರು ಕಾಂಗ್ರೆಸ್ ಅನ್ನು ನಗರ ನಕ್ಸಲರ ಗುಂಪು ನಿಯಂತ್ರಿಸುತ್ತಿದೆ. ಅಲ್ಲದೇ ಕಾಂಗ್ರೆಸ್‌ ಪಕ್ಷದ “ಅಪಾಯಕಾರಿ ಅಜೆಂಡಾ” ವನ್ನು ಸೋಲಿಸಲು ಜನರು ಒಗ್ಗೂಡಬೇಕೆಂದು ಒತ್ತಾಯಿಸಿದ್ದರು. ವಿಧಾನಸಭೆ ಚುನಾವಣೆಗೆ ಮುನ್ನ ಮಹಾರಾಷ್ಟ್ರದ ವಿದರ್ಭ ಪ್ರದೇಶದ ವಾಶಿಮ್ ಬಳಿ ಸಭೆಯನ್ನುದ್ದೇಶಿಸಿ ಮಾತನಾಡುವಾಗಲೂ ಪ್ರಧಾನಿ ಮೋದಿ ಈ ವಿಷಯ ಪ್ರಸ್ತಾಪಿಸಿದ್ದರು.

“ನಾವೆಲ್ಲರೂ ಒಂದಾದರೆ ದೇಶವನ್ನು ವಿಭಜಿಸುವ ಅವರ ಕಾರ್ಯಸೂಚಿ ವಿಫಲವಾಗುತ್ತದೆ ಎಂದು ಅವರು ಭಾವಿಸುತ್ತಾರೆ. ಭಾರತಕ್ಕಾಗಿ ಒಳ್ಳೆಯ ಉದ್ದೇಶವನ್ನು ಹೊಂದಿರದ ಜನರೊಂದಿಗೆ ಕಾಂಗ್ರೆಸ್ ಎಷ್ಟು ನಿಕಟವಾಗಿ ನಿಂತಿದೆ ಎಂಬುದನ್ನು ಪ್ರತಿಯೊಬ್ಬರೂ ನೋಡಬಹುದು. ದಲಿತರನ್ನು ದಲಿತರು, ಬಡವರನ್ನು ಬಡವರು ಎಂದು ಉಳಿಸಿಕೊಳ್ಳಲು ಕಾಂಗ್ರೆಸ್ ಬಯಸುತ್ತಿದೆ. ಹಾಗಾಗಿ ಕಾಂಗ್ರೆಸ್ ಬಗ್ಗೆ ಎಚ್ಚರದಿಂದಿರಿ. ಅರ್ಬನ್ ನಕ್ಸಲರು ಕಾಂಗ್ರೆಸ್ ಆಡಳಿತ ನಡೆಸುತ್ತಿದ್ದಾರೆ. ಪಕ್ಷವು ದೇಶವನ್ನು ವಿಭಜಿಸಲು ಬಯಸುತ್ತದೆ, ಆದ್ದರಿಂದ ಅದು ನಮ್ಮನ್ನು ಒಡೆಯಲು ಪ್ರಯತ್ನಿಸುತ್ತಿದೆ. ಹಾಗಾಗಿ ಕಾಂಗ್ರೆಸ್ ಪಕ್ಷದ ಕುತಂತ್ರವನ್ನು ವಿಫಲಗೊಳಿಸಲು ಒಗ್ಗಟ್ಟಾಗಿರಿ. ಇದು ಒಗ್ಗಟ್ಟಾಗಿ ಇರಬೇಕಾದ ಸಮಯ ಎಂದು ಅವರು ರ್ಯಾಲಿಯಲ್ಲಿ ಹೇಳಿದ್ದರು.

ಅಕ್ಟೋಬರ್ 9 ರಂದು ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದ ನಂತರ ಅವರು ಮತ್ತೆ “ನಗರ ನಕ್ಸಲರ” ಬಗ್ಗೆ ಪ್ರಸ್ತಾಪಿಸಿದರು. ಅಕ್ಟೋಬರ್ 9 ರಂದು ಮಹಾರಾಷ್ಟ್ರದಲ್ಲಿ ವಾಸ್ತವಿಕವಾಗಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ನಂತರ, ಹರಿಯಾಣ ಚುನಾವಣೆಯಲ್ಲಿ ಬಿಜೆಪಿಯ ಗೆಲುವು ದೇಶದ ಮನಸ್ಥಿತಿಯನ್ನು ತೋರಿಸುತ್ತದೆ ಮತ್ತು ಜನರು ಕಾಂಗ್ರೆಸ್ ಮತ್ತು “ನಗರ ನಕ್ಸಲರ” ದ್ವೇಷದ ಪಿತೂರಿಗಳಿಗೆ ಬಲಿಯಾಗುವುದಿಲ್ಲ ಎಂದು ತೋರಿಸಿದ್ದಾರೆ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ: Pralhad Joshi: ಖರ್ಗೆಯವರು ಆಯುರಾರೋಗ್ಯವಂತರಾಗಿ ವಿಕಸಿತ ಭಾರತಕ್ಕೆ ಸಾಕ್ಷಿಯಾಗಲಿ ಎಂದ ಜೋಶಿ