Saturday, 4th January 2025

Mamata Banerjee: ಗಡಿಯೊಳಗೆ ನುಸುಳಲು ಬಾಂಗ್ಲಾದವರಿಗೆ BSF ಸಹಾಯ ಮಾಡುತ್ತಿದೆ; ಮಮತಾ ಬ್ಯಾನರ್ಜಿ ಗಂಭೀರ ಆರೋಪ

Mamata Banerjee

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರು ಭದ್ರತಾ ಪಡೆಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.  ರಾಜ್ಯವನ್ನು ಅಸ್ಥಿರಗೊಳಿಸಲು ಭದ್ರತಾ ಪಡೆಗಳು (BSF) ಬಾಂಗ್ಲಾದೇಶದಿಂದ ಒಳನುಸುಳುವಿಕೆ ನೆರವು ನೀಡುತ್ತಿದ್ದಾರೆ ಎಂಬ ಆರೋಪವನ್ನು ಮಾಡಿದ್ದಾರೆ. ಸಾರ್ವಜನಿಕ ಸಮಾರಂಭವೊಂದರಲ್ಲಿ ಮಾತನಾಡಿದ ಬ್ಯಾನರ್ಜಿ, ಇಸ್ಲಾಂಪುರ, ಸೀತಾಯ್ ಮತ್ತು ಚೋಪ್ರಾದಂತಹ ಹಲವಾರು ಗಡಿ ಪ್ರದೇಶಗಳಲ್ಲಿ ಬಾಂಗ್ಲಾ ಪ್ರಜೆಗಳಿಗೆ ಒಳನುಸುಳಲು ಬಿಎಸ್‌ಎಫ್‌ನವರು ಸಹಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರದ (Central Government) ಮೇಲೆ ಕಿಡಿ ಕಾರಿದ ಮಮತಾ , ಭದ್ರತಾ ಪಡೆಗಳು ಕೇಂದ್ರ ಸರ್ಕಾರದ ಅಡಿಯಾಳಾಗಿವೆ ಎಂದು ಹೇಳಿದ್ದಾರೆ. ನುಸುಳುಕೋರರಿಗೆ ಗಡಿ ಒಳಗೆ ಬರಲು ನೆರವಾಗಿ, ತೃಣಮೂಲ ಕಾಂಗ್ರೆಸ್‌ ಮೇಲೆ ಆರೋಪ ಮಾಡಿದರೆ ಸಹಿಸುವುದಿಲ್ಲ ಎಂದು ಹೇಳಿದ್ದಾರೆ. ಬಿಎಸ್ಎಫ್‌ ಮಾಡುವ ತಪ್ಪನ್ನು TMC ಮೇಲೆ ಹೊರಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಗಡಿ ಕಾಯುತ್ತಿರುವವರು ಬಿಎಸ್‌ಎಫ್‌ ಯೋಧರೇ ಹೊರೆತು ಟಿಎಮ್‌ಸಿ ಪಕ್ಷ ಅಲ್ಲ. ಬಾಂಗ್ಲಾದಿಂದ ರೌಡಿಗಳು ಒಳ ಬರುತ್ತಿದ್ದಾರೆ. ಗಡಿಯುದ್ದಕ್ಕೂ ಕೊಲೆ ಪ್ರಕರಣ ಜಾಸ್ತಿ ಆಗುತ್ತಿದೆ. ಇವೆಲ್ಲವೂ ಬಿಎಸ್‌ಎಫ್‌ ಮಾಡುತ್ತಿದೆ ಎಂದು ತಿಳಿದಿದೆ. ಕೇಂದ್ರ ಸರ್ಕಾರದ ಕುಮ್ಮಕ್ಕಿನಿಂದ ಇಷ್ಟೆಲ್ಲಾ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಇಷ್ಟೇ ಅಲ್ಲದೆ ಗಡಿಯುದ್ದಕ್ಕೂ ಬಂಗಾಳದ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಈ ಕುರಿತು ಕೇಂದ್ರಕ್ಕೆ ದೂರು ನೀಡಿದ್ದೇವೆ. ಆದರೆ ಇದುವರೆಗೂ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಬ್ಯಾನರ್ಜಿಗೆ ತಿರುಗೇಟು ನೀಡಿದ ಕೇಂದ್ರ ಸಚಿವ ಗಿರಿರಾಜ್ ಸಿಂಗ್, ಬಾಂಗ್ಲಾದೇಶದ ಒಳನುಸುಳುವಿಕೆಗೆ ಬಂಗಾಳ ನರ್ಸರಿಯಾಗಿದೆ ಎಂದು ಹೇಳಿದರು. ಯಾರು ಸಿಕ್ಕಿಬೀಳುತ್ತಾರೋ ಅವರು ಬಾಂಗ್ಲಾದೇಶೀಯರು. ಆದರೆ ಅವರ ವಿಳಾಸ ಮಾತ್ರ ಬಂಗಾಳದಲ್ಲಿರುತ್ತದೆ. ಮಮತಾ ಬ್ಯಾನರ್ಜಿ ವೋಟ್‌ಗಾಗಿ ಇದೆಲ್ಲಾ ಮಾಡಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಈ ಸುದ್ದಿಯನ್ನೂ ಓದಿ : Kolkata Doctor Murder: ಕೆಲವೇ ಕ್ಷಣದಲ್ಲಿ ಪ್ರತಿಭಟನಾ ನಿರತ ವೈದ್ಯರ ಜತೆ ಮಮತಾ ಬ್ಯಾನರ್ಜಿ ಮಹತ್ವದ ಸಭೆ