Thursday, 26th December 2024

Mamata Banerjee: ಬಂಗಾಳ ಆಕ್ರಮಿಸುವವರೆಗೆ ಲಾಲಿಪಾಪ್‌ ತಿನ್ನುತ್ತಾ ಕೂರುತ್ತೇವೆಯೇ? ಬಾಂಗ್ಲಾದೇಶಕ್ಕೆ ದೀದಿ ಖಡಕ್‌ ಟಾಂಗ್‌

Mamata Banerjee

ಕೋಲ್ಕತ್ತಾ: ನೆರೆಯ ರಾಷ್ಟ್ರ ಬಾಂಗ್ಲಾದೇಶ ಮತ್ತು ಭಾರತ ನಡುವೆ ಭುಗಿಲೆದ್ದಿರುವ ಪ್ರಕ್ಷುಬ್ದತೆ(Bangladesh Unrest) ನಡುವೆಯೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ಬಾಂಗ್ಲಾದೇಶಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಬಂಗಾಳ, ಬಿಹಾರ ಮತ್ತು ಒಡಿಶಾವನ್ನೂ ಆಕ್ರಮಿಸಿಕೊ‍ಳ್ಳುತ್ತೇವೆ ಎಂದು ನಾಲಿಗೆ ಹರಿಬಿಟ್ಟಿದ್ದ ಬಾಂಗ್ಲಾದೇಶ ನ್ಯಾಷನಲ್‌ ಪಕ್ಷದ ನಾಯಕನಿಗೆ ತಿರುಗೇಟು ಕೊಟ್ಟಿದ್ದಾರೆ.

ವಿಧಾನಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನೀವು ಬಂಗಾಳ, ಬಿಹಾರ, ಒಡಿಶಾ ಆಕ್ರಮಿಸುವವರೆಗೆ ನಾವು ಲಾಲಿಪಾಪ್‌ ತಿಂದುಕೊಂಡು ಕೂರುತ್ತೇವೆಯೇ? ಅದು ನಡೆಯುತ್ತದೆ ಎಂದು ಯಾವತ್ತೂ ಯೋಚಿಸಬೇಡಿ ಎಂದು ಖಡಕ್‌ ಟಾಂಗ್‌ ಕೊಟ್ಟಿದ್ದಾರೆ. ಇಂದು ಮಾಧ್ಯಮಗಳು ಮತ್ತು ರಾಜಕೀಯ ನಾಯಕರನ್ನು ಶಾಂತವಾಗಿರುವಂತೆ ಮತ್ತು ಪ್ರಚೋದನಕಾರಿ ಹೇಳಿಕೆಗಳಿಂದ ಗಡಿ ರಾಜ್ಯಗಳಲ್ಲಿ ಶಾಂತಿ ಸುವ್ಯವಸ್ಥೆ ಹದಗೆಡದಂತೆ ನೋಡಿಕೊಳ್ಳುವಂತೆ ಮನವಿ ಮಾಡಿದ್ದಾರೆ.

ನೆರೆಯ ದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದ ಬಗ್ಗೆ ಪ್ರತಿಯೊಬ್ಬರೂ ಕಳವಳ ವ್ಯಕ್ತಪಡಿಸಿದ್ದಾರೆ. “ಹಿಂದೂಗಳು, ಮುಸ್ಲಿಮರು, ಸಿಖ್ಖರು ಅಥವಾ ಕ್ರಿಶ್ಚಿಯನ್ನರು ಗಲಭೆಗಳನ್ನು ಪ್ರಾರಂಭಿಸುವುದಿಲ್ಲ, ಸಮಾಜ ವಿರೋಧಿಗಳು ಗಲಭೆಗಳನ್ನು ಪ್ರಾರಂಭಿಸುತ್ತಾರೆ, ಬಂಗಾಳದಲ್ಲಿ ಕೆಟ್ಟ ಪರಿಸ್ಥಿತಿಯನ್ನು ಸೃಷ್ಟಿಸುವ ಯಾವುದೇ ಹೇಳಿಕೆಯನ್ನು ನಾವು ನೀಡಬಾರದು. ಬಾಂಗ್ಲಾದೇಶ ಹಿಂಸಾಚಾರವನ್ನು ಇಲ್ಲಿ ಹಿಂದೂಗಳು ಮತ್ತು ಮುಸ್ಲಿಂ ಅಲ್ಪಸಂಖ್ಯಾತರು ಪ್ರತಿಭಟನೆ ನಡೆಸುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ. ಇದು ನಮ್ಮ ಜಾತ್ಯತೀತ ಸ್ವರೂಪವನ್ನು ತೋರಿಸುತ್ತದೆ ಎಂದು ಅವರು ಹೇಳಿದರು.

ಅಲ್ಪಸಂಖ್ಯಾತ ಮುಖಂಡರು ರ್ಯಾಲಿ ನಡೆಸಲು ಬಯಸಿದ್ದಾರೆ. ನಾನು ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಅನೇಕ ಜನರು ಇದನ್ನು ತಮ್ಮ ಲಾಭಕ್ಕಾಗಿ ಬಳಸುತ್ತಾರೆ. ಅವರು ಮತ್ತೊಂದು ಗಲಭೆಯನ್ನು ಪ್ರಾರಂಭಿಸುತ್ತಾರೆ. ನಮಗೆ ಗಲಭೆಗಳು ಬೇಡ, ನಮಗೆ ಶಾಂತಿ ಬೇಕು. ಹಿಂದೂಗಳು ಮತ್ತು ಮುಸ್ಲಿಮರು, ಸಿಖ್ ಮತ್ತು ಕ್ರಿಶ್ಚಿಯನ್ನರು ಒಂದೇ ರಕ್ತವನ್ನು ಹೊಂದಿದ್ದಾರೆ ಎಂದು ಬ್ಯಾನರ್ಜಿ ಹೇಳಿದರು.

ಬಾಂಗ್ಲಾದೇಶದಿಂದ ಅನೇಕ ಜನರು ಗಡಿ ರಾಜ್ಯವನ್ನು ದಾಟಲು ಯತ್ನಿಸುತ್ತಿದ್ದಾರೆ. ಬಿಎಸ್‌ಎಫ್ ಗಮನಿಸುತ್ತಿದೆ. ನಾವು ಈ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಇದು ಕೇಂದ್ರಕ್ಕೆ ಸಂಬಂಧಿಸಿದ ವಿಚಾರ. ಅದನ್ನು ಅವರು ನೋಡಿಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Illegal Bangladeshi immigrants: ಮಲ್ಪೆಯಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶದ 7 ಮಂದಿ ವಶ