Sunday, 15th December 2024

ಕೇಂದ್ರ ಗೃಹ ಸಚಿವರ ನಿವಾಸದ ಮುಂದೆ ಕುಕಿ ಬುಡಕಟ್ಟಿನ ಮಹಿಳೆಯರ ಪ್ರತಿಭಟನೆ

ನವದೆಹಲಿ: ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರ ತಡೆಯುವಂತೆ ಕೋರಿ ಭಿತ್ತಿಪತ್ರಗಳು ಹಾಗೂ ಮನವಿಗಳೊಂದಿಗೆ ರಾಜ್ಯದ ಕುಕಿ ಬುಡಕಟ್ಟಿನ ಮಹಿಳೆಯರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಿವಾಸದ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.

“ಶಾಂತಿ ಮರು ಸ್ಥಾಪಿಸಲಾಗುವುದು ಎಂದು ಗೃಹ ಸಚಿವರು ಭರವಸೆ ನೀಡಿದ ಹೊರತಾಗಿಯೂ, ಮಣಿಪುರದಲ್ಲಿ ನಮ್ಮ ಸಮುದಾಯದ ಮೇಲೆ ದಾಳಿ ಗಳು ಮುಂದುವರಿದಿವೆ. ಗೃಹ ಸಚಿವರು ಹಾಗೂ ಪ್ರಧಾನಿ ನರೇಂದ್ರ ಮೋದಿ ಮಾತ್ರ ನಮಗೆ ಸಹಾಯ ಮಾಡಬಹುದು” ಎಂದು ಪ್ರತಿಭಟನಾಕಾರ ರೊಬ್ಬರು ತಿಳಿಸಿದರು.

ಮಣಿಪುರದಲ್ಲಿ ಭದ್ರತಾ ಪಡೆಗಳು ಹಾಗೂ ಬಂಡುಕೋರರ ನಡುವಿನ ಗುಂಡಿನ ಕಾಳಗದಲ್ಲಿ ಮಂಗಳವಾರ ಒಬ್ಬ ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಹಾಗೂ ಇಬ್ಬರು ಗಾಯಗೊಂಡಿದ್ದಾರೆ ಎಂದು ಸೇನೆಯು ಹೇಳಿದೆ, ಕಾರ್ಯಾ ಚರಣೆಯಲ್ಲಿ ಅನೇಕ ಬಂಡುಕೋರರನ್ನು ಕೊಲ್ಲಲಾಯಿತು.

ಮ್ಯಾನ್ಮಾರ್‌ನ ಗಡಿಯಲ್ಲಿರುವ ಈಶಾನ್ಯ ರಾಜ್ಯವು ಕಳೆದ ಕೆಲವು ವಾರಗಳಲ್ಲಿ ಉದ್ವಿಗ್ನವಾಗಿದೆ, ಗಲಭೆಗಳು ಹಾಗೂ ಜನಾಂಗೀಯ ಘರ್ಷಣೆಗಳು ಕನಿಷ್ಠ 80 ಜನರನ್ನು ಬಲಿ ಪಡೆದಿದೆ ಹಾಗೂ 35,000 ಜನರನ್ನು ಸ್ಥಳಾಂತರಿಸ ಲಾಗಿದೆ.