ನವದೆಹಲಿ: ಮಾಜಿ ಪ್ರಧಾನಿ(Former Prime Minister) ಮನಮೋಹನ್ ಸಿಂಗ್(Manmohan Singh) ಅವರು ಇಂದು(ಡಿ.26) ರಾತ್ರಿ 10.15ರ ವೇಳೆಗೆ ವಿಧಿವಶರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ತಮ್ಮ ಇಳಿ ವಯಸ್ಸಿನಲ್ಲಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ದಿಲ್ಲಿಯ ಏಮ್ಸ್‌ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ವಿನಮ್ರತೆ, ಅಪಾರ ಪಾಂಡಿತ್ಯದಿಂದ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದ ಮತ್ತು ಮಿತಭಾಷಿಯೂ ಆಗಿದ್ದ ಡಾ.ಮನಮೋಹನ್ ಸಿಂಗ್ ಅವರು 2004ರಿಂದ 2014ರವರೆಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ಈ ವರ್ಷದ ಆರಂಭದಲ್ಲಿ ರಾಜ್ಯಸಭೆಯಿಂದ ನಿವೃತ್ತರಾಗಿದ್ದರು.
ಮನಮೋಹನ್ ಸಿಂಗ್ ಕುರಿತ ಕುತೂಹಲ ಸಂಗತಿಗಳು
- ಮನಮೋಹನ್ ಸಿಂಗ್ ಅವರು ಸೆಪ್ಟೆಂಬರ್ 26, 1932 ರಂದು ಪಂಜಾಬ್‌ನ ಗಾಹ್‌ನಲ್ಲಿ (ಈಗಿನ ಪಾಕಿಸ್ತಾನ) ಜನಿಸಿದರು. ದೇಶ ವಿಭಜನೆಯ ನಂತರ, ಅವರು ತಮ್ಮ ಕುಟುಂಬದೊಂದಿಗೆ ಭಾರತಕ್ಕೆ ವಲಸೆ ಬಂದರು.
- ಸಿಂಗ್ ಚಿಕ್ಕ ವಯಸ್ಸಿನಲ್ಲೇ ತಮ್ಮ ತಾಯಿಯನ್ನು ಕಳೆದುಕೊಂಡು ಅವರ ಅಜ್ಜಿಯ ಆಶ್ರಯದಲ್ಲಿ ಬೆಳೆದರು.
- ಅವರ ಗ್ರಾಮದಲ್ಲಿ ಆ ಕಾಲಕ್ಕೆ ವಿದ್ಯುತ್ ಇರಲಿಲ್ಲ. ಸೀಮೆಎಣ್ಣೆ ದೀಪದ ಕೆಳಗೆ ಕೂತು ರಾತ್ರಿಯಿಡೀ ಓದುತ್ತಿದ್ದರು.
- ಮನಮೋಹನ್ ಸಿಂಗ್ ಓದಿದ್ದು ಅಮೃತಸರದ ಹಿಂದೂ ಕಾಲೇಜಿನಲ್ಲಿ. ನಂತರ ಅವರು ಪಂಜಾಬ್ ವಿಶ್ವವಿದ್ಯಾನಿಲಯದಿಂದ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದರು.
- ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಿಂದ ತಮ್ಮ ಅರ್ಥಶಾಸ್ತ್ರ ವಿಷಯದಲ್ಲಿ ಟ್ರಿಪೋಸ್ ಮಾಡಿದ್ದಲ್ಲದೇ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಆ ಕಾಲಕ್ಕೆ ಡಿಫಿಲ್ ಪದವಿ ಪಡೆದರು.
- ಸಿಂಗ್ 1966 ರಿಂದ 1969 ರವರೆಗೆ ಟ್ರೇಡ್ & ಡೆವಲಪ್‌ಮೆಂಟ್ ನ ವಿಶ್ವಸಂಸ್ಥೆಯ ಸಮ್ಮೇಳನಕ್ಕಾಗಿ (UNCTAD) ಕೆಲಸ ಮಾಡಿದರು.
- ಸಿಂಗ್ ವಿದೇಶಾಂಗ ವ್ಯಾಪಾರ ಸಚಿವಾಲಯದ ಸಲಹೆಗಾರರಾಗಿ ಕೆಲಸ ಮಾಡಿದರು. ಅವರನ್ನು ಲಲಿತ್ ನಾರಾಯಣ ಮಿಶ್ರಾ ಅವರು ನೇಮಕ ಮಾಡಿದ್ದರು.
- 1972 ರಲ್ಲಿ, ಮನಮೋಹನ್ ಸಿಂಗ್ ಅವರು ಹಣಕಾಸು ಸಚಿವಾಲಯದ ಮುಖ್ಯ ಸಲಹೆಗಾರರಾದರು.
- 1976 ರಲ್ಲಿ ಸಿಂಗ್ ಹಣಕಾಸು ಸಚಿವಾಲಯದ ಕಾರ್ಯದರ್ಶಿಯಾದರು.
- 1982 ರಲ್ಲಿ ಮನಮೋಹನ್ ಸಿಂಗ್ ಅವರನ್ನು ಪ್ರತಿಷ್ಠಿತ ಆರ್‌ಬಿಐ(RBI) ಗವರ್ನರ್ ಆಗಿ ನೇಮಿಸಲಾಯಿತು.
- ಅವರು 1985 ರಿಂದ 1987 ರವರೆಗೆ ಭಾರತದ ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದರು.
- 1991 ರಲ್ಲಿ, ಅವರು ವಿಶ್ವವಿದ್ಯಾಲಯ ಅನುದಾನ ಆಯೋಗದ (UGC) ಅಧ್ಯಕ್ಷರಾಗಿ ನೇಮಕಗೊಂಡರು.
- ಜೂನ್ 1991 ರಲ್ಲಿ, ಅವರು ಪಿವಿ ನರಸಿಂಹರಾವ್ ಅವರ ಸಂಪುಟದಲ್ಲಿ ಹಣಕಾಸು ಸಚಿವರಾಗಿ ನೇಮಕಗೊಂಡರು.
- ಉದಾರೀಕರಣದ ನಂತರದ ಭಾರತದ ಅಭಿವೃದ್ಧಿಗೆ ಕಾರಣರಾದ ಪ್ರಮುಖ ವ್ಯಕ್ತಿಗಳಲ್ಲಿ ಮನಮೋಹನ್ ಸಿಂಗ್ ಒಬ್ಬರು.
- ಮನಮೋಹನ್ ಸಿಂಗ್ ಅವರು 1991 ರಲ್ಲಿ ರಾಜ್ಯಸಭೆಗೆ ಆಯ್ಕೆಯಾದರು ಮತ್ತು 1995, 2001, 2007 ಮತ್ತು 2013 ರಲ್ಲಿ ಮರು ಆಯ್ಕೆಯಾದರು.
- ಮನಮೋಹನ್ ಸಿಂಗ್ ಅವರು ಮೇ 22, 2004 ರಂದು ಭಾರತದ 14 ನೇ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.
- 1987ರಲ್ಲಿ ಸಿಂಗ್ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಲಾಯಿತು.
- 1993 ರಲ್ಲಿ, ಯುರೋಮನಿ ಮತ್ತು ಏಷ್ಯಾಮನಿ ಅವರನ್ನು ವರ್ಷದ ಹಣಕಾಸು ಮಂತ್ರಿ ಎಂದು ಹೆಸರಿಸಿ ಗೌರವಿಸಿತು.
- 2002 ರಲ್ಲಿ, ಅವರಿಗೆ ಅತ್ಯುತ್ತಮ ಸಂಸದೀಯಪಟು ಪ್ರಶಸ್ತಿಯನ್ನು ನೀಡಲಾಯಿತು
- 2005 ರಲ್ಲಿ, ದಿ ಟೈಮ್ ಮನಮೋಹನ್ ಸಿಂಗ್ ಅವರನ್ನು ‘ವಿಶ್ವದ ಟಾಪ್ 100 ಪ್ರಭಾವಿ ವ್ಯಕ್ತಿಗಳಲ್ಲಿ’ ಒಬ್ಬರೆಂದು ಹೆಸರಿಸಿತು.
ಹತ್ತು ಹಲವು ದೇಶಗಳು ಆರ್ಥಿಕತೆಗೆ ಸಂಬಂಧಪಟ್ಟಂತೆ ಮನಮೋಹನ್ ಸಿಂಗ್ ಅವರಿಂದ ಸಲಹೆ ಸೂಚನೆಗಳನ್ನು ಪಡೆದಿವೆ. ಅಮೆರಿಕ ದೇಶದಲ್ಲಿ ಆರ್ಥಿಕ ಕುಸಿತವಾದಾಗ ಮನಮೋಹನ್ ಸಿಂಗ್ ಅವರು ಪರಿಹಾರ ನೀಡಿದ್ದರು. ಅಮೆರಿಕ ಮತ್ತೆ ಆರ್ಥಿಕತೆಯಲ್ಲಿ ಚೇತರಿಸಿಕೊಳ್ಳಲು ಮನಮೋಮಹನ್ ಸಿಂಗ್ ಕೂಡ ಕಾರಣ ಎಂಬ ಮಾತಿದೆ. ಅವರು ಆರ್ಥಿಕ ಸುಧಾರಣೆಯ ಹರಿಕಾರ. ಸಿಂಗ್ ಹೆಚ್ಚು ಮಾತನಾಡದ ಮೌನ ಸಾಧಕ. ಅವರದ್ದು ಮಾಸ್ಟರ್ ಮೈಂಡ್! ಪ್ರಧಾನಿ ಮೋದಿ ಕೂಡ ತಮ್ಮ ಆಡಳಿತದ ಆರಂಭದ ವರ್ಷಗಳಲ್ಲಿ ಮನಮೋಹನ್ ಸಿಂಗ್ ಅವರಿಂದ ಸಲಹೆ ಪಡೆದಿದ್ದರು. ಭಾರತ ಒಬ್ಬ ನಿಜ ನಾಯಕನನ್ನು ಕಳೆದುಕೊಂಡಿದೆ. ಮನಮೋಹನ್ ಸಿಂಗ್ ಬದುಕಿನಿಂದ ಎದ್ದು ನಡೆದಿದ್ದಾರೆ.
ಈ ಸುದ್ದಿಯನ್ನೂ ಓದಿ:Dr Manmohan Singh: ಮನಮೋಹನ್ ಸಿಂಗ್; ಭಾರತದ ಆರ್ಥಿಕ ಸುಧಾರಣೆಯ ಹರಿಕಾರ