Friday, 27th December 2024

Manmohan Singh: ದೇಶದ ಇತಿಹಾಸವನ್ನೇ ಬದಲಿಸಿದ ಆ ಒಂದು ಫೋನ್‌ ಕರೆ!

manmohan singh and pv narasimha rao

ನವದೆಹಲಿ: ಅದು 1991ರ ಜೂನ್‌ ತಿಂಗಳು. ಮನಮೋಹನ್‌ ಸಿಂಗ್‌ (Manmohan Singh) ಆಗ ಯುಜಿಸಿ ಅಧಿಕಾರಿ. ನೆದರ್ಲೆಂಡ್ಸ್‌ನಲ್ಲಿ ನಡೆದ ಸಮ್ಮೇಳನದಲ್ಲಿ ಭಾಗವಹಿಸಿದ ನಂತರ ದೆಹಲಿಗೆ ಹಿಂತಿರುಗಿ ಬಂದು ಮಲಗಿದ್ದರು. ತಡರಾತ್ರಿ ಸಿಂಗ್ ಅವರ ಅಳಿಯ ವಿಜಯ್ ತಂಖಾ ಒಂದು ಅವಸರ ಫೋನ್‌ ಕರೆ ಬಂತು. ಆ ಕಡೆಯ ಧ್ವನಿ ಪ್ರಧಾನಿ ಪಿ .ವಿ ನರಸಿಂಹರಾವ್ (PV Narasimha Rao) ಅವರ ಆಪ್ತರಾಗಿದ್ದ ಪಿಸಿ ಅಲೆಕ್ಸಾಂಡರ್ ಅವರದಾಗಿತ್ತು ಅಲೆಕ್ಸಾಂಡರ್, ಸಿಂಗ್‌ ಅವರನ್ನು ಎಬ್ಬಿಸುವಂತೆ ಒತ್ತಾಯಿಸಿದರು.

ಸಿಂಗ್ ಮತ್ತು ಅಲೆಕ್ಸಾಂಡರ್ ಕೆಲವು ಗಂಟೆಗಳ ನಂತರ ಭೇಟಿಯಾದರು. ಪ್ರಧಾನಿ ಪಿವಿ ನರಸಿಂಹರಾವ್ ಅವರ ಸೂಚನೆಯನ್ನು ಅಲೆಕ್ಸಾಂಡರ್‌ ಅವರು ಸಿಂಗ್ ಅವರಿಗೆ ತಿಳಿಸಿದರು. ಸಿಂಗ್‌ ಅವರನ್ನು ವಿತ್ತ ಸಚಿವರಾಗಿ ನೇಮಿಸಲು ಯೋಜಿಸಿದೆ. ಸಿಂಗ್ ಆಗ ಯುಜಿಸಿ ಅಧ್ಯಕ್ಷರಾಗಿದ್ದರು. ಅವರು ಎಂದಿಗೂ ರಾಜಕಾರಣಿ ಆಗಿರಲಿಲ್ಲ. ಹೀಗಾಗಿ ಅಲೆಕ್ಸಾಂಡರ್ ಮಾತನ್ನು ಅವರು ಗಂಭೀರವಾಗಿ ಪರಿಗಣಿಸಲಿಲ್ಲ.

ಆದರೆ ನರಸಿಂಹ ರಾವ್ ನಿರ್ಧಾರ ಗಂಭೀರವಾಗಿತ್ತು. ಜೂನ್ 21ರಂದು ಸಿಂಗ್ ತಮ್ಮ ಯುಜಿಸಿ ಕಚೇರಿಯಲ್ಲಿದ್ದಾಗಲೇ ಅವರನ್ನು ಪ್ರಮಾಣ ವಚನ ಸಮಾರಂಭಕ್ಕೆ ಕರೆಯಲಾಯಿತು. ಸಿಂಗ್‌ ಮನೆಗೆ ಬಂದು ಬೇರೆ ಬಟ್ಟೆ ಧರಿಸಿ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಿದರು. “ಎಲ್ಲರಿಗೂ ಆಶ್ಚರ್ಯವಾಯಿತು. ಹೊಸ ಸಚಿವ ಸಂಪುಟದ ಸದಸ್ಯನಾಗಿ ನನ್ನನ್ನು ನೋಡುವುದು ಎಲ್ಲರಿಗೂ ಅಚ್ಚರಿ. ನನ್ನ ಪೋರ್ಟ್‌ಫೋಲಿಯೊವನ್ನು ನಂತರ ಹಂಚಲಾಯಿತು. ಆದರೆ ರಾವ್‌ ಅವರು ನನಗೆ ನೇರವಾಗಿ ನೀನು ಹಣಕಾಸು ಸಚಿವನಾಗಲಿದ್ದಿ ಎಂದು ಹೇಳಿದ್ದರು” ಎಂದು ಸಿಂಗ್‌ ಅವರು ನಂತರ ಹೇಳಿದರು. ಇದೆಲ್ಲ ಅವರ ಮಗಳು ದಮನ್ ಸಿಂಗ್ ಅವರ ಪುಸ್ತಕ ʼಸ್ಟ್ರಿಕ್ಟ್‌ಲೀ ಪರ್ಸನಲ್:‌ ಮನಮೋಹನ್ & ಗುರುಶರಣ್’ ಕೃತಿಯಲ್ಲಿದೆ.

ಸಿಂಗ್‌ ಅವರ ಆ ನೇಮಕಾತಿ ಭಾರತದ ಆರ್ಥಿಕತೆಯ ದಿಕ್ಕನ್ನೇ ಬದಲಿಸಿತು. ಭಾರಿ ನಿಯಂತ್ರಣಗಳನ್ನು ಹೊಂದಿದ್ದ ಕಡಿಮೆ ಬೆಳವಣಿಗೆಯ ಆರ್ಥಿಕತೆಯು ಇಂದು ವಿಶ್ವದ ಅತ್ಯಂತ ವೇಗದ ಆರ್ಥಿಕತೆಯಾಗಿದೆ. ರಾವ್ ಜೊತೆಗೆ ಸಿಂಗ್ ಅವರು 1991ರ ಸುಧಾರಣೆಗಳ ವಾಸ್ತುಶಿಲ್ಪಿಯಾಗಿದ್ದರು. ಇವರಿಬ್ಬರೂ ಕಾಂಗ್ರೆಸ್ ಒಳಗೆ ಮತ್ತು ಹೊರಗಿನಿಂದಲೂ ಭಾರಿ ಟೀಕೆಗಳನ್ನು ಎದುರಿಸಿದರು. ಆಗ ವಿದೇಶೀ ವಿನಿಮಯ ಮೀಸಲು 2,500 ಕೋಟಿಗೆ ಇಳಿದಿತ್ತು. ಇದು 2 ವಾರಗಳ ಆಮದು ಸರಿದೂಗಿಸಲು ಸಾಕಾಗುತ್ತಿತ್ತು. ಜಾಗತಿಕ ಬ್ಯಾಂಕುಗಳು ಸಾಲಗಳನ್ನು ನೀಡಲು ನಿರಾಕರಿಸಿದ್ದವು. ವಿದೇಶೀ ವಿನಿಮಯ ಹೊರಹರಿವು ದೊಡ್ಡದಾಗಿತ್ತು. ಹಣದುಬ್ಬರವಿತ್ತು.

ಭಾರತವು ʼಲೈಸೆನ್ಸ್‌ ರಾಜ್‌ʼಗೆ ವಿದಾಯ ಹೇಳಲು ಸಿಂಗ್ ಸಹಾಯ ಮಾಡಿದರು. ಸಿಂಗ್ ಈ ಎಲ್ಲ ಸಮಸ್ಯೆಗಳನ್ನು ಮೊದಲೇ ತಿಳಿದಿದ್ದರು. ಪರಿಹಾರಗಳನ್ನೂ ಅವರು ತಿಳಿದಿದ್ದರು. ಒಂದು ತಿಂಗಳ ನಂತರ ತಮ್ಮ ಬಜೆಟ್ ಭಾಷಣದಲ್ಲಿ ಅವರು ಮುಂದಿನ ಯೋಜನೆ ವಿವರಿಸಿದರು. ಅವರು ಆಗಿನ ಆರ್‌ಬಿಐ ಡೆಪ್ಯುಟಿ ಗವರ್ನರ್ ಸಿ. ರಂಗರಾಜನ್ ಅವರನ್ನು ಜತೆ ಸೇರಿಸಿಕೊಂಡು ನಿಕಟವಾಗಿ ಕೆಲಸ ಮಾಡಿದರು. ರೂಪಾಯಿಯನ್ನು ಅಪಮೌಲ್ಯಗೊಳಿಸಿ ಪಾಲುದಾರಿಕೆಯಲ್ಲಿ ರಫ್ತು ನಿಯಂತ್ರಣಗಳನ್ನು ತೆಗೆದುಹಾಕಿದರು. ಜುಲೈ 24 ಸಿಂಗ್ ಮೊದಲ ಬಜೆಟ್ ಮಂಡಿಸಿದರು.

ಲೈಸೆನ್ಸ್‌ ರಾಜ್‌ಗೆ ವಿಮೋಚನೆ ನೀಡಲಾಯಿತು. ಬಜೆಟ್‌ಗೆ ಗಂಟೆಗಳ ಮೊದಲು ರಾವ್ ಸರ್ಕಾರ ಹೊಸ ಕೈಗಾರಿಕಾ ನೀತಿಯನ್ನು ಸಂಸತ್ತಿನಲ್ಲಿ ಮಂಡಿಸಿತು. 1990-91ರಲ್ಲಿ ಚಂದ್ರಶೇಖರ್‌ ದುರ್ಬಲ ಒಕ್ಕೂಟದ ಪ್ರಧಾನಿಯಾಗಿದ್ದಾಗ ಸಿಂಗ್‌ ಅವರಿಗೆ ಆರ್ಥಿಕ ಸಲಹೆಗಾರರಾಗಿ ಅಲ್ಪಾವಧಿ ಮುನ್ನಡೆಸಿದ ಅನುಭವ ಸಿಂಗ್‌ ಅವರಿಗೆ ಇತ್ತು. ಆರ್ಥಿಕ ಸಲಹೆಗಾರ ರಾಕೇಶ್ ಮೋಹನ್ ಸಿದ್ಧಪಡಿಸಿದ ದಾಖಲೆ ಆಧರಿಸಿ, 18 ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದೆಲ್ಲ ಕೈಗಾರಿಕಾ ಕ್ಷೇತ್ರಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಕೈಗೆತ್ತಿಕೊಳ್ಳಲಾಯಿತು. 34 ಕೈಗಾರಿಕೆಗಳಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಹಲವಾರು ಕ್ಷೇತ್ರಗಳಲ್ಲಿ ಸಾರ್ವಜನಿಕ ವಲಯದ ಏಕಸ್ವಾಮ್ಯ
ಕೊನೆಗೊಂಡಿತು ಮತ್ತು ಸರ್ಕಾರಿ ಕಂಪನಿಗಳಲ್ಲಿ ಸರ್ಕಾರದ ಷೇರುಗಳ ಹಿಂತೆಗೆದುಕೊಳ್ಳುವಿಕೆ ಅನುಮತಿ ನೀಡಲಾಯಿತು. ಅವರ ಬಜೆಟ್ ಸೆಬಿಯನ್ನು ಸ್ಥಾಪಿಸುವ ಮೂಲಕ ಭಾರತೀಯ ಕಂಪನಿಗಳಿಂದ ನಿಧಿಸಂಗ್ರಹವನ್ನು ಮುಕ್ತಗೊಳಿಸಿತು. ಆರ್‌ಬಿಐ ಗವರ್ನರ್ ಎಂ ನರಸಿಂಹನ್ ಅವರ ನೇತೃತ್ವದಲ್ಲಿ ಹೊಸ ಸಮಿತಿಯನ್ನು ರಚಿಸಲಾಯಿತು. ಹಣಕಾಸು ವಲಯಕ್ಕೆ ಹೊಸ ವಾಸ್ತುಶಿಲ್ಪವನ್ನು ರಾವ್ ಸರ್ಕಾರ ಜಾರಿಗೆ ತಂದಿತು. ಬಜೆಟ್ ಅನ್ನು ಕಡಿತಗೊಳಿಸುವ ಮೂಲಕ ಹಣಕಾಸಿನ ಬಲವರ್ಧನೆಯ ಮೇಲೆ ಕೇಂದ್ರೀಕರಿಸಿತು.

ಈ ಎಲ್ಲ ಸುಧಾರಣೆಗಳು ಆರ್ಥಿಕತೆಯನ್ನು ಮತ್ತೆ ಟ್ರ್ಯಾಕ್‌ಗೆ ತಂದವು. ಮತ್ತು ಆಶಾವಾದವನ್ನು ಪ್ರಚೋದಿಸಿದವು. ಜಾಗತಿಕವಾಗಿ ಭಾರತ ಒಂದೊಂದೇ ಹೆಜ್ಜೆ ಮೇಲೇರತೊಡಗಿತು. ವಿದೇಶಿ ಸ್ಪರ್ಧೆಯನ್ನು ಎದುರಿಸಲು ಸಿದ್ಧರಿಲ್ಲದ ಕಾರ್ಪೊರೇಟ್ ಮುಖ್ಯಸ್ಥರ ಗುಂಪಿಗೆ ಈ ಬದಲಾವಣೆಗಳಿಂದ ಸಂತೋಷವಾಗಲಿಲ್ಲ. ಆದರೆ ದೀರ್ಘಕಾಲಿಕವಾಗಿ ನೋಡಿದರೆ, ಭಾರತಕ್ಕೆ ಒಳ್ಳೆಯದೇ ಆಯಿತು.

ಇದನ್ನೂ ಓದಿ: Manmohan Singh: ಮನಮೋಹನ್ ಸಿಂಗ್‌ ಕುರಿತ ಕುತೂಹಲಕರ ಸಂಗತಿಗಳಿವು!