Friday, 27th December 2024

Manmohan Singh: ಇತಿಹಾಸವು ನನಗೆ ಹೆಚ್ಚು ಕರುಣೆ ತೋರುತ್ತದೆ… ಪ್ರಧಾನಿಯಾಗಿ ಮನಮೋಹನ್‌ ಸಿಂಗ್‌ ಕೊನೆಯ ಭಾಷಣ

Manmohan Singh

ನವದೆಹಲಿ: ಭಾರತದ ಮಾಜಿ ಪ್ರಧಾನಿ ಹಾಗೂ ಆರ್ಥಿಕ ತಜ್ಞ ಮನಮೋಹನ್‌ ಸಿಂಗ್‌ ಬುಧವಾರ ರಾತ್ರಿ ನಿಧನರಾಗಿದ್ದಾರೆ. ಅವರ ನಿಧಿನಕ್ಕೆ ಇಡೀ ದೇಶವೇ ಸಂತಾಪ ಸೂಚಿಸಿದೆ. ಮನಮೋಹನ್‌ ಸಿಂಗ್‌ (Manmohan Singh) ಅವರು ಪ್ರಧಾನಿಯಾಗಿ (Former Prime Minister) ಆಡಿದ್ದ ಕೊನೆಯ ಮಾತಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. (Viral Video)

2004ರಿಂದ 2014ರ ವರೆಗೆ ಪ್ರಧಾನಿಯಾಗಿದ್ದ ಮನಮೋಹನ್‌ ಸಿಂಗ್‌ ಅವರು 2014ರ ಜನವರಿ 3ರಂದು ಪ್ರಧಾನಿಯಾಗಿ ತಮ್ಮ ಕೊನೆಯ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದರು. ಅಂದು ಪತ್ರಕರ್ತರೊಬ್ಬರು ಅವರ ಆಡಳಿತವದ ಬಗ್ಗೆ ಹಾಗೂ ತಮ್ಮ ಸಚಿವರನ್ನು ಹಿಡಿತದಲ್ಲಿಟ್ಟುಕೊಳ್ಳಲು ತೋರಿದ ಅಸಮರ್ಥತೆಯ ಬಗ್ಗೆ ಪ್ರಶ್ನೆ ಎತ್ತಿದ್ದರು. ಆಗ ಇದಕ್ಕೆ ನಗುತ್ತಲೇ ಉತ್ತರಿಸಿದ ಸಿಂಗ್‌ ಅವರು , ಸಮಕಾಲೀನ ಮಾಧ್ಯಮಗಳಿಗಿಂತ ಅಥವಾ ಸಂಸತ್ತಿನಲ್ಲಿ ವಿಪಕ್ಷಗಳಿಗಿಂತ ಇತಿಹಾಸವು ನನಗೆ ಹೆಚ್ಚು ಕರುಣೆ ತೋರುತ್ತದೆ ಎಂದು ಪ್ರಾಮಾಣಿಕವಾಗಿ ನಂಬುತ್ತೇನೆ ಎಂದು ಹೇಳಿದ್ದರು.

ಸರ್ಕಾರಿ ವ್ಯವಸ್ಥೆಯಲ್ಲಿ ಹಾಗೂ ಕ್ಯಾಬಿನೆಟ್‌ನಲ್ಲಿ ನಡೆಯುವ ಎಲ್ಲಾ ವಿಷಯಗಳನ್ನು ನಾನು ಬಹಿರಂಗಪಡಿಸಲು ಸಾಧ್ಯವಿಲ್ಲ. ಸಮ್ಮಿಶ್ರ ರಾಜಕೀಯ ಸಂದರ್ಭಗಳನ್ನೂ ಗಣನೆಗೆ ತೆಗೆದುಕೊಂಡು ಒತ್ತಡದ ಪರಿಸ್ಥಿತಿಯಲ್ಲೂ ಸಾಧ್ಯವಾದಷ್ಟು ಉತ್ತಮ ಕೆಲಸಗಳನ್ನು ಮಾಡಿದ್ದೇನೆ ಎಂದು ಹೇಳಿದ್ದರು. ಆ ಸಮಯದಲ್ಲಿ, ಯುಪಿಎ ಸರ್ಕಾರವು ತನ್ನ ಹಲವಾರು ಸಚಿವಾಲಯಗಳಲ್ಲಿನ ಭ್ರಷ್ಟಾಚಾರದ ಆರೋಪವನ್ನು ಎದುರಿಸುತ್ತಿತ್ತು. 2014 ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಮತ್ತು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬರಲು ಈ ಆರೋಪಗಳು ಮುಖ್ಯ ಕಾರಣವಾಗಿದ್ದವು.

92 ವರ್ಷದ ಮನಮೋಹನ್‌ ಸಿಂಗ್‌ ಅವರು ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ನಿಧನರಾದರು. ಆರೋಗ್ಯ ಹದಗೆಟ್ಟಿದ್ದ ಹಿನ್ನೆಲೆಯಲ್ಲಿ ಗುರುವಾರ ಸಂಜೆ ಸಿಂಗ್‌ ಅವರನ್ನು ತುರ್ತು ಚಿಕಿತ್ಸಾ ಘಟಕಕ್ಕೆ ಕರೆತರಲಾಗಿತ್ತು. ಆದರೆ, ರಾತ್ರಿ ಹೊತ್ತಿಗೆ ಅವರು ವಿಧಿವಶರಾಗಿದ್ದಾರೆ. ಮನಮೋಹನ್ ಸಿಂಗ್ ಅವರು 1991-96ರ ಅವಧಿಯಲ್ಲಿ ಪಿವಿ ನರಸಿಂಹರಾವ್ ನೇತೃತ್ವದ ಸರ್ಕಾರದಲ್ಲಿ ದೇಶದ ಹಣಕಾಸು ಸಚಿವರಾಗಿ ದೇಶದ ಆರ್ಥಿಕತೆಯ ದಿಕ್ಕನ್ನೇ ಬದಲಿಸಿದ್ದರು.

ಈ ಸುದ್ದಿಯನ್ನೂ ಓದಿ : Manmohan Singh: ಮನಮೋಹನ್ ಸಿಂಗ್‌ ಕುರಿತ ಕುತೂಹಲಕರ ಸಂಗತಿಗಳಿವು!