Saturday, 28th December 2024

Manmohan Singh: ಇಂಡೋ-ಪಾಕ್‌ ಕ್ರಿಕೆಟ್ ನಂಟು ಪುನರ್ ಸ್ಥಾಪಿಸಿದ್ದ ಮನಮೋಹನ್‌ ಸಿಂಗ್‌!

ಬೆಂಗಳೂರು: 2008ರಲ್ಲಿ ಮುಂಬೈ ದಾಳಿ ಬಳಿಕ ಭಾರತ-ಪಾಕ್ ಕ್ರಿಕೆಟ್ ಸಂಬಂಧ ಹಳಸಿತ್ತು. ಇದನ್ನು ಪುನರ್‌ಸ್ಥಾಪಿಸಿದ ಕೀರ್ತಿ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ಗೆ(Manmohan Singh) ಸಲ್ಲುತ್ತದೆ. 2011ರ ಏಕದಿನ ಕ್ರಿಕೆಟ್ ವಿಶ್ವಕಪ್ ಭಾರತ, ಶ್ರೀಲಂಕಾ, ಬಾಂಗ್ಲಾದೇಶದಲ್ಲಿ ಆಯೋಜನೆಗೊಂಡಿತ್ತು. ಪಾಕ್ ತಂಡ ಗುಂಪು ಹಂತ, ಕ್ವಾಟರ್ರ್‌ ಫೈನಲ್ ಪಂದ್ಯಗಳನ್ನು ಶ್ರೀಲಂಕಾ, ಬಾಂಗ್ಲಾದಲ್ಲಿ ಆಡಿದರೂ, ಭಾರತ ವಿರುದ್ಧ ಸೆಮಿಫೈನಲ್‌ ಪಂದ್ಯ ಆಡಲು ಭಾರತಕ್ಕೆ ಆಗಮಿಸಬೇಕಿತ್ತು.

ಎಲ್ಲರಲ್ಲೂ ಪಾಕಿಸ್ತಾನ ತಂಡ ಭಾರತಕ್ಕೆ ಬರಲಿದೆಯೇ ಎಂದು ಕುತೂಹಲದ ಕಣ್ಣಿನಿಂದ ನೋಡುತ್ತಿದ್ದರು. ಈ ವೇಳೆ ದಿಟ್ಟ ನಿರ್ಧಾರ ಕೈಗೊಂಡ ಸಿಂಗ್‌ ಅವರು ಐತಿಹಾಸಿಕ ಹೆಜ್ಜೆ ಎಂಬಂತೆ ಪಾಕಿಸ್ತಾನ ತಂಡವನ್ನು ಮಾತ್ರವಲ್ಲದೆ ಪಾಕ್‌ ಪ್ರಧಾನಿ ಯೂಸುಫ್ ಗಿಲಾನಿಯನ್ನೂ ಭಾರತಕ್ಕೆ ಆಹ್ವಾನಿಸಿದರು. ಮೊಹಾಲಿಯಲ್ಲಿ ನಡೆದ ಈ ಐತಿಹಾಸಿಕ ಪಂದ್ಯವನ್ನು ಸಿಂಗ್ ಮತ್ತು ಯೂಸುಫ್ ಗಿಲಾನಿ ಜತೆಯಾಗಿ ವೀಕ್ಷಿಸಿದರು. ಬಳಿಕ 2012ರಲ್ಲಿ ಭಾರತ-ಪಾಕ್ ನಡುವೆ ಭಾರತದಲ್ಲಿ ದ್ವಿಪಕ್ಷೀಯ ಸರಣಿ ನಡೆಯಿತು. ಆದರೆ ಇತ್ತಂಡಗಳ ನಡುವೆ ದ್ವಿಪಕ್ಷೀಯ ಸರಣಿ ನಡೆದಿದ್ದು ಅದೇ ಕೊನೆ ಬಾರಿ. ಇದಾದ ಬಳಿಕ ಕೇವಲ ಐಸಿಸಿ ಟೂರ್ನಿಯಲ್ಲಷ್ಟೇ ಇಂಡೋ-ಪಾಕ್‌ ತಂಡಗಳು ಮುಖಾಮುಖಿಯಾಗುತ್ತಿವೆ.

ಪಾಕ್‌ನಲ್ಲಿ ಜನನ

ಡಾ.ಮನಮೋಹನ ಸಿಂಗ್ ಹುಟ್ಟಿದ್ದು ಈಗಿನ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಗಾಹ್ ಗ್ರಾಮದಲ್ಲಿ. ಆಗ ಅಖಂಡ ಭಾರತವಾಗಿತ್ತು. ಪಾಕ್‌ನಲ್ಲಿ ಮನಮೋಹನ ಸಿಂಗ್ ಹೆಸರಲ್ಲಿ ಒಂದು ಶಾಲೆಯೂ ಇದೆ. ಮನಮೋಹನ ಸಿಂಗ್ ಪ್ರಾಥಮಿಕ ಶಿಕ್ಷಣ ಪಡೆದದ್ದು ಇದೇ ಶಾಲೆಯಲ್ಲಿ. 2007ರಲ್ಲಿ ಪಂಜಾಬ್ ಪ್ರಾಂತ್ಯದ ಸರ್ಕಾರ ಮನಮೋಹನ ಸಿಂಗ್ ಅವರ ಗೌರವಾರ್ಥವಾಗಿ ಗಹ್ ಗ್ರಾಮದಲ್ಲಿರುವ ಬಾಲಕರ ಶಾಲೆಯನ್ನು ಮನಮೋಹನ ಸಿಂಗ್ ಬಾಲಕರ ಶಾಲೆ ಎಂದು ಮರುನಾಮಕರಣ ಮಾಡಿತ್ತು.

ಭಾರತ ಹಾಗೂ ಆಸ್ಟ್ರೇಲಿಯಾ (IND vs AUS) ನಡುವಿನ ಮೆಲ್ಬರ್ನ್‌ ಟೆಸ್ಟ್ ಪಂದ್ಯದ ಬಾಕ್ಸಿಂಗ್ ಡೇ ಟೆಸ್ಟ್‌ನ ಎರಡನೇ ದಿನದಾಟ ಆರಂಭವಾಗಿದೆ. ಗುರುವಾರ ಭಾರತದ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ (Manmohan Singh) ಅವರು ನಿಧನರಾಗಿದ್ದು, ಸಿಂಗ್ ಅವರ ಗೌರವಾರ್ಥವಾಗಿ ಶುಕ್ರವಾರ ಭಾರತೀಯ ಆಟಗಾರರು (Team India) ಕಪ್ಪು ಪಟ್ಟಿಯನ್ನು ಧರಿಸಿ ಅಖಾಡಕ್ಕಿಳಿದು ಗೌರವ ಸೂಚಿಸಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ 92 ವರ್ಷದ ಮನಮೋಹನ್ ಸಿಂಗ್ ಅವರನ್ನು ಗುರುವಾರ ರಾತ್ರಿ ದೆಹಲಿಯ ಏಮ್ಸ್‌ಗೆ ದಾಖಲಿಸಲಾಗಿತ್ತು, ನಂತರ ಚಿಕಿತ್ಸೆ ಫಲಕಾರಿಯಾಗಿದೆ ಕೊನೆಯುಸಿರೆಳೆದಿದ್ದರು.