ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್(Manmohan Singh) ಅವರು ನಿನ್ನೆ(ಡಿ.26) ರಾತ್ರಿ 10.15ರ ವೇಳೆಗೆ ವಿಧಿವಶರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ತಮ್ಮ ಇಳಿ ವಯಸ್ಸಿನಲ್ಲಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ದಿಲ್ಲಿಯ ಏಮ್ಸ್‌ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಸಿಂಗ್ ಮಿತಭಾಷಿಯಾಗಿದ್ದರು. ತಮ್ಮ ವಿನಮ್ರತೆ ಮತ್ತು ಅಗಾಧವಾದ ಪಾಂಡಿತ್ಯದಿಂದ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದರು.
ಇದೀಗ ಮಾಜಿ ಪ್ರಧಾನಿ,ಆರ್ಥಿಕತೆಯ ಹರಿಕಾರ ಮತ್ತು ಮೌನ ಸಾಧಕ ಮನಮೋಹನ್ ಸಿಂಗ್ ಅವರ ಕುರಿತಾದ ಹತ್ತು ಹಲವು ಕುತೂಹಲಕರ ಸಂಗತಿಗಳು ಮುನ್ನೆಲೆಗೆ ಬರುತ್ತಿವೆ. ಅವರನ್ನು ತೀರಾ ಹತ್ತಿರದಿಂದ ಕಂಡವರು,ಅವರೊಂದಿಗೆ ಒಡನಾಡಿದವರು ಮತ್ತು ಅವರ ಸಚಿವ ಸಂಪುಟದಲ್ಲಿದ್ದವರು ಸಾಕಷ್ಟು ಸ್ವಾರಸ್ಯಕರ ವಿಷಯಗಳನ್ನು ತೆರೆದಿಡುತ್ತಿದ್ದಾರೆ.
ಮಾರುತಿ-800 ಇಷ್ಟಪಡುತ್ತಿದ್ದ ಸಿಂಗ್!
ಮನಮೋಹನ್ ಸಿಂಗ್ ಆಡಂಬರದ ಬದುಕಿಗೆ ಹಾತೊರೆಯದೆ ಶಿಸ್ತು, ಸರಳತೆ ಮತ್ತು ಸಾಧಾರಣವಾಗಿ ಬದುಕು ನಡೆಸುತ್ತಿದ್ದವರು. ಅವರು ಉನ್ನತ ಹುದ್ದೆಯಲ್ಲಿದ್ದಾಗಲೂ ಐಷಾರಾಮಿ ಬದುಕು ನಡೆಸಿದವರಲ್ಲ. ಮನಮೋಹನ್ ಸಿಂಗ್ ಅವರ ಸರಳ ಬದುಕಿನ ಕುರಿತು ಬಹುಕಾಲ ಅವರ ಅಂಗರಕ್ಷಕರಾಗಿದ್ದ ಅಸಿಮ್ ಅರುಣ್ ಅವರು ಇಂದು ಮಾತನಾಡಿದ್ದಾರೆ.
ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಅವರ ಅಂಗರಕ್ಷಕರಾಗಿದ್ದ ಭಾರತೀಯ ಪೊಲೀಸ್ ಸೇವೆಯ ಮಾಜಿ ಅಧಿಕಾರಿ ಮತ್ತು ವಿಶೇಷ ರಕ್ಷಣಾ ಗುಂಪಿನ (SPG) ಮಾಜಿ ಮುಖ್ಯಸ್ಥ ಅಸಿಮ್ ಅರುಣ್, ತಮ್ಮ ಮಾರುತಿ 800 ಕಾರಿನೊಂದಿಗೆ ಸಿಂಗ್ ಅವರ ಬಾಂಧವ್ಯ ಹೇಗಿತ್ತು ಎಂಬುದನ್ನು ನೆನಪು ಮಾಡಿಕೊಂಡಿದ್ದಾರೆ. “ಮನಮೋಹನ್ ಸಿಂಗ್ ಅವರ ಬಳಿ ಬಿಎಂಡಬ್ಲು ಕಾರಿದ್ದರೂ ಅವರು ಯಾವಾಗಲೂ ಮಾರುತಿ 800 ಕಾರನ್ನು ಇಷ್ಟಪಡುತ್ತಿದ್ದರು. ಆ ಕಾರು ನಿಮ್ಮ ಹುದ್ದೆಗೆ ತಕ್ಕುದಾದುದಲ್ಲ ಸರ್ ಎಂದು ನಾನು ಹೇಳಿದರೂ ಅವರು ಕೇಳುತ್ತಿರಲಿಲ್ಲ. ಅವರಿಗೆ ಐಷಾರಾಮಿ ಕಾರುಗಳ ಬಗ್ಗೆ ಒಲವಿರಲಿಲ್ಲ.ಐಷಾರಾಮಿ ಕಾರು ರಸ್ತೆಯಲ್ಲಿ ಹಾದು ಹೋದರೆ ಅದು ಪ್ರಧಾನಿ ಕಾರು ಎಂದು ಗೊತ್ತಾಗಿ ಬಿಡುತ್ತದೆ. ಆಗ ಅದಕ್ಕೆ ಸೆಕ್ಯುರಿಟಿ ಒದಗಿಸಬೇಕಾಗುತ್ತದೆ. ಜನರು ಪ್ರಧಾನಿಗಳು ದುಬಾರಿ ಕಾರಿನಲ್ಲಿ ಹೋಗುತ್ತಿದ್ದಾರೆ ಎಂದು ಭಾವಿಸುತ್ತಾರೆ. ಬೆಂಗಾವಲು ಪಡೆಯಿಂದ ಜನ ಸಾಮಾನ್ಯರಿಗೆ ತೊಂದರೆಯಾಗುವುದು ಬೇಡ. ಮಾರುತಿ 800 ಕಾರಿನಲ್ಲಿ ಪ್ರಯಾಣಿಸಿದರೆ ಒಳಗೆ ನಾನಿದ್ದೇನೆ ಎಂದು ಯಾರಿಗೂ ಗೊತ್ತಾಗುವುದಿಲ್ಲ ಎನ್ನುತ್ತಿದ್ದರು.
ಇದು ಮನಮೋಹನ್ ಸಿಂಗ್ ಅವರ ಸರಳತೆ ಮತ್ತು ಸಾಮಾನ್ಯ ಜನರ ಬಗ್ಗೆ ಅವರಿಗಿದ್ದ ಕಾಳಜಿ” ಎಂದು ಅಸಿಮ್ ಅರುಣ್ ಹೇಳಿದ್ದಾರೆ. ಅವರು ತಮ್ಮ ಎಕ್ಸ್ ಖಾತೆಯಲ್ಲಿ ಮನಮೋಹನ್ ಸಿಂಗ್ ಅವರೊಂದಿಗಿನ ಒಡನಾಟ ಮತ್ತು ಅವರ ಬದುಕಿನ ಹಲವು ಕುತೂಹಲಕರ ಸಂಗತಿಗಳ ಬಗ್ಗೆ ವಿವರವಾಗಿ ಹಂಚಿಕೊಂಡಿದ್ದಾರೆ.
मैं 2004 से लगभग तीन साल उनका बॉडी गार्ड रहा। एसपीजी में पीएम की सुरक्षा का सबसे अंदरुनी घेरा होता है – क्लोज़ प्रोटेक्शन टीम जिसका नेतृत्व करने का अवसर मुझे मिला था। एआईजी सीपीटी वो व्यक्ति है जो पीएम से कभी भी दूर नहीं रह सकता। यदि एक ही बॉडी गार्ड रह सकता है तो साथ यह बंदा… pic.twitter.com/468MO2Flxe
— Asim Arun (@asim_arun) December 26, 2024
ಈಗ ಉತ್ತರ ಪ್ರದೇಶದ ಕನ್ನೌಜ್ ಸದರ್‌ನಿಂದ ಶಾಸಕರಾಗಿ ಸೇವೆ ಸಲ್ಲಿಸುತ್ತಿರುವ ಅಸಿಮ್ ಅರುಣ್ ಅವರು ಗುರುವಾರ ರಾತ್ರಿ ತಮ್ಮ 92 ನೇ ವಯಸ್ಸಿನಲ್ಲಿ ವಿಧಿವಶರಾದ ಮನಮೋಹನ್ ಸಿಂಗ್ ಅವರ ಜೊತೆಗಿನ ತಮ್ಮ ನೆನಪುಗಳನ್ನು ಮೆಲುಕು ಹಾಕಿದ್ದಾರೆ. “ನಾನು 2004 ರಿಂದ ಸುಮಾರು ಮೂರು ವರ್ಷಗಳ ಕಾಲ ಅವರ ಅಂಗರಕ್ಷಕನಾಗಿ ಸೇವೆ ಸಲ್ಲಿಸಿದ್ದೇನೆ. ವಿಶೇಷ ರಕ್ಷಣಾ ಗುಂಪು (SPG) ಪ್ರಧಾನ ಮಂತ್ರಿಗೆ ಸುರಕ್ಷತೆಯ ಭದ್ರತೆಯನ್ನು ಒದಗಿಸುತ್ತದೆ. ರಕ್ಷಣಾ ತಂಡವನ್ನು ಮುನ್ನಡೆಸಲು ನನಗೆ ಅವಕಾಶವಿತ್ತು. ಅಂಗ ರಕ್ಷಕನಾಗಿ ಅವರ ನೆರಳಿನಂತೆ ಇದ್ದ ಸೌಭಾಗ್ಯ ನನ್ನದು. ನನಗೆ ಸಿಕ್ಕ ಅಪರೂಪದ ಅವಕಾಶವದು” ಎಂದು ಅಸಿಮ್ ತಮ್ಮ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Manmohan Singh: ಮನಮೋಹನ್ ಸಿಂಗ್‌ಗೆ ರಾಷ್ಟ್ರಪತಿ ಮುರ್ಮು ಗೌರವ ನಮನ; ಸಚಿವ ಸಂಪುಟದಿಂದ ಸಂತಾಪ!