Sunday, 29th December 2024

Manmohan Singh: ʻಕುಟುಂಬ ಸದಸ್ಯರನ್ನು ಕಳೆದುಕೊಂಡಷ್ಟೇ ನೋವಾಗಿದೆʼ ಪಾಕ್‌ನಲ್ಲಿರುವ ಮನಮೋಹನ್‌ ಸಿಂಗ್‌ ಹುಟ್ಟೂರಿನಲ್ಲಿ ಶೋಕಾಚರಣೆ

Manmohan Singh

ನವದೆಹಲಿ: ಭಾರತದ ಮಾಜಿ ಪ್ರಧಾನಿ ಹಾಗೂ ಶ್ರೇಷ್ಠ ಆರ್ಥಿಕ ತಜ್ಞ ಮನಮೋಹನ್‌ ಸಿಂಗ್‌ (Manmohan Singh) ಅವರು ಗುರುವಾರ ರಾತ್ರಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಇವರು ದೆಹಲಿಯ (Delhi) ಏಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ. ಇಡೀ ದೇಶವೇ ಸಿಂಗ್‌ ಅವರ ಸಾವಿಗೆ ಸಂತಾಪ ಸೂಚಿಸಿದೆ. ಪಾಕಿಸ್ತಾನದ (Pakistan) ಗ್ರಾಮವೊಂದು ಮಾಜಿ ಪ್ರಧಾನಿ ಸಾವಿಗೆ ಸಂತಾಪ ಸೂಚಿಸಲು ಸಭೆ ನಡೆಸಿದೆ.

ಮನಮೋಹನ್‌ ಸಿಂಗ್‌ ಅವರು ಈಗಿನ ಪಾಕಿಸ್ತಾನದಲ್ಲಿ ಜನಿಸಿದ್ದರು. ಭಾರತ ಪಾಕಿಸ್ತಾನ ವಿಭಜನೆಯ ನಂತರ ಅವರ ಕುಟುಂಬ ಭಾರತದಲ್ಲಿ ನೆಲೆಸಿತ್ತು. ಮನಮೋಹನ್ ಸಿಂಗ್ 4 ನೇ ತರಗತಿಯವರೆಗೆ ಓದಿದ್ದ ಪಾಕಿಸ್ತಾನದ ಗಾಹ್ ಗ್ರಾಮದ ಶಾಲೆಯಲ್ಲಿ ಅವರ ನಿಧನಕ್ಕೆ ಶ್ರದ್ದಾಂಜಲಿ ಕೋರಲಾಗಿದೆ. ಶಾಲೆಯ ಮುಖ್ಯ ಶಿಕ್ಷಕ ಹುಸೇನ್‌ ಅಲಿ ನೇತೃತ್ವದಲ್ಲಿ ಈ ಸಭೆ ನಡೆದಿದೆ. ನಂತರ ಮಾತನಾಡಿದ ಅವರು ಇಡೀ ಗ್ರಾಮ ದುಃಖದಲ್ಲಿದೆ. ಇಂದು ನಮ್ಮ ಕುಟುಂಬದ ಯಾರೋ ಒಬ್ಬರು ಮೃತಪಟ್ಟಿದ್ದಾರೆ ಎಂದು ಅನಿಸುತ್ತದೆ ಎಂದು ಹೇಳಿದ್ದಾರೆ.

ಸಿಂಗ್‌ ಅವರ ತಂದೆ ರುಮುಖ್ ಸಿಂಗ್ ಬಟ್ಟೆ ವ್ಯಾಪಾರಿ ಮತ್ತು ಅವರ ತಾಯಿ ಅಮರತ್ ಕೌರ್ ಗೃಹಿಣಿ. ಅವನ ಗೆಳೆಯರು ಅವನನ್ನು ‘ಮೋಹನ’ ಎಂದು ಕರೆಯುತ್ತಿದ್ದರಂತೆ . ಎಲ್ಲಾ ಗ್ರಾಮಸ್ಥರು ಭಾವೋದ್ವೇಗಕ್ಕೆ ಒಳಗಾಗಿದ್ದಾರೆ. ಅವರು ಭಾರತದಲ್ಲಿ ಸಿಂಗ್‌ ಅವರ ಅಂತಿಮ ವಿಧಿಗಳಲ್ಲಿ ಪಾಲ್ಗೊಳ್ಳಲು ಉತ್ಸುಕರಾಗಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಹೀಗಾಗಿ ಸಂತಾಪ ಸೂಚಿಸಲು ಇಲ್ಲಿಗೆ ಬಂದಿದ್ದಾರೆ ಎಂದು  ರಾಜಾ ಆಶಿಕ್ ಅಲಿ  ಹೇಳಿದ್ದಾರೆ. ನಮ್ಮ ಹಳ್ಳಿಯ ಹುಡುಗನೊಬ್ಬ ಭಾರತದ ಪ್ರಧಾನಿಯಾಗಿದ್ದಾನೆ ಎಂದು ಹಳ್ಳಿಯ ಪ್ರತಿಯೊಬ್ಬರೂ ಹೆಮ್ಮೆ ಪಟ್ಟಿದ್ದರು. ಇಂದಿಗೂ ಆ ನನೆಪು ಸದಾ ಅಚ್ಚಳಿಯದಂತಿರುತ್ತದೆ ಎಂದು ಅವರು ಹೇಳಿದ್ದಾರೆ.

ಗಾಹ್ ಗ್ರಾಮವು ರಾಜಧಾನಿ ಇಸ್ಲಾಮಾಬಾದ್‌ನಿಂದ ನೈಋತ್ಯಕ್ಕೆ 100 ಕಿಮೀ ದೂರದಲ್ಲಿದೆ. ಸಿಂಗ್ ಅವರು ಜನಿಸಿದಾಗ ಝೀಲಂ ಜಿಲ್ಲೆಯ ಭಾಗವಾಗಿತ್ತು. ಆದರೆ 1986ರಲ್ಲಿ ಜಿಲ್ಲೆಯಾಗಿ ರೂಪುಗೊಂಡಾಗ ಚಕ್ವಾಲ್‌ಗೆ ಸೇರಿಸಲಾಯಿತು.

ಶಾಲೆಯಲ್ಲಿ ಇದೆ ರಿಜಿಸ್ಟರ್‌ ನಂಬರ್‌ !

ಮನಮೋಹನ್‌ ಸಿಂಗ್‌ ಅವರು ಶಾಲೆಗೆ ಸೇರಿದ ದಿನಾಂಕವನ್ನು ನಮೂಸಿದ ದಾಖಲೆ ಇನ್ನೂ ಶಾಲೆಯಲ್ಲಿದೆ. ರಿಜಿಸ್ಟರ್‌ನಲ್ಲಿ ಅವರ ಪ್ರವೇಶ ಸಂಖ್ಯೆ 187, ಮತ್ತು ಪ್ರವೇಶದ ದಿನಾಂಕ ಏಪ್ರಿಲ್ 17, 1937. ಅವರ ಜನ್ಮ ದಿನಾಂಕವನ್ನು ಫೆಬ್ರವರಿ 4, 1932 ಎಂದು ನಮೂದಿಸಲಾಗಿದೆ, ಅವರ ಜಾತಿಯನ್ನು ‘ಕೊಹ್ಲಿ’ ಎಂದು ನಮೂದಿಸಲಾಗಿದೆ. 2008 ರಲ್ಲಿ ದೆಹಲಿಯಲ್ಲಿ ತನ್ನನ್ನು ಭೇಟಿ ಮಾಡಲು ಸಿಂಗ್ ತನ್ನ ಸ್ನೇಹಿತರಲ್ಲೊಬ್ಬರಾದ ಗ್ರಾಮದ ರಾಜಾ ಮುಹಮ್ಮದ್ ಅಲಿ ಅವರನ್ನು ಆಹ್ವಾನಿಸಿದ್ದರು.

ಈ ಸುದ್ದಿಯನ್ನೂ ಓದಿ : Manmohan Singh : ಮನಮೋಹನ್‌ ಸಿಂಗ್‌ ಸ್ಮಾರಕಕ್ಕೆ ಜಾಗ ನೀಡಲು ಕೇಂದ್ರ ಸರ್ಕಾರ ಗ್ರೀನ್‌ ಸಿಗ್ನಲ್‌