ನವದೆಹಲಿ: ಮಾಜಿ ಪ್ರಧಾನಿ(Former Prime Minister) ಮನಮೋಹನ್ ಸಿಂಗ್(Manmohan Singh) ಅವರು ನಿನ್ನೆ(ಡಿ.26) ರಾತ್ರಿ 10.15ರ ವೇಳೆಗೆ ವಿಧಿವಶರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ತಮ್ಮ ಇಳಿ ವಯಸ್ಸಿನಲ್ಲಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ದಿಲ್ಲಿಯ ಏಮ್ಸ್‌ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಸಿಂಗ್ ಮಿತಭಾಷಿ. ಅವರು ತಮ್ಮ ವಿನಮ್ರತೆ ಮತ್ತು ಅಗಾಧವಾದ ಪಾಂಡಿತ್ಯದಿಂದ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದರು.
ಮನಮೋಹನ್ ಸಿಂಗ್ 2004ರಿಂದ 2014ರವರೆಗೆ ದೇಶದ ಪ್ರಧಾನಮಂತ್ರಿ ಹುದ್ದೆಯಲ್ಲಿದ್ದವರು. ಅದಕ್ಕೂ ಮೊದಲು ಹಣಕಾಸು ಮಂತ್ರಿ, ಆರ್‌ಬಿಐ ಗವರ್ನರ್ ಆಗಿ ಹಾಗೂ ಪ್ರತಿಷ್ಠಿತ ಯೂನಿವರ್ಸಿಟಿಗಳಲ್ಲಿ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿದ್ದರು. ಸರಿ ಸುಮಾರು ನಾಲ್ಕು ದಶಕಗಳು ಉನ್ನತ ಅಧಿಕಾರದಲ್ಲಿದ್ದ ಮನಮೋಹನ್ ಸಿಂಗ್ ಅವರ ಒಟ್ಟು ಆಸ್ತಿಯ ಮೌಲ್ಯ ಎಷ್ಟಿರಬಹುದು? ಒಬ್ಬ ಗ್ರಾಮ ಪಂಚಾಯಿತಿ ಸದಸ್ಯನ ಬ್ಯಾಂಕ್ ಖಾತೆಯಲ್ಲಿಯೇ ಹತ್ತಾರು ಕೋಟಿ ರೂಪಾಯಿಗಳಿರುತ್ತವೆ. ಹೀಗಿರುವಾಗ ಎರಡು ಅವಧಿಗೆ ಪ್ರಧಾನಮಂತ್ರಿ ಹುದ್ದೆಯನ್ನು ಅಲಂಕರಿಸಿದ್ದ ಸಿಂಗ್ ಅವರ ಖಾತೆಯಲ್ಲಿ ಎಷ್ಟು ಹಣವಿತ್ತು? ಅವರ ಹೆಸರಿನಲ್ಲಿ ಎಷ್ಟು ಬಂಗಲೆಗಳಿದ್ದವು? ಎಷ್ಟು ಕೆಜಿ ಚಿನ್ನಾಭರಣಗಳಿದ್ದವು? ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ.
ಅಷ್ಟಾಗಿ ಐಷಾರಾಮಿ ಬದುಕನ್ನು ಇಷ್ಟಪಡದ ಸರಳ ಮತ್ತು ಸಾಧಾರಣವಾಗಿ ಜೀವನ ನಡೆಸುತ್ತಿದ್ದ ಮನಮೋಹನ್ ಸಿಂಗ್ ಅವರ ಬಳಿ ನಾವು ಭಾವಿಸಿದಂತೆ ಸಾವಿರಾರು ಕೋಟಿ ಆಸ್ತಿ ಇರಲಿಲ್ಲ. ಸಾವಿರಾರು ಕೋಟಿ ಇರಲಿ ನೂರಾರು ಕೋಟಿ ರೂಪಾಯಿ ಆಸ್ತಿಯನ್ನೂ ಅವರು ಗಳಿಸಿರಲಿಲ್ಲ. ಕೆಲವೇ ಕೋಟಿಗಳ ಆಸ್ತಿ ಮಾತ್ರ ಅವರ ಹೆಸರಿನಲ್ಲಿತ್ತು. ಹಲವರಿಗೆ ತಿಳಿದಿರುವಂತೆ ಲಕ್ಷ ಮತ್ತು ಕೋಟಿ ಎಂಬುದು ರಾಜಕಾರಣಿಗಳಿಗೆ ಅಲಕ್ಷ್ಯವಾಗಿದೆ. ಸಾಮಾನ್ಯ ಎಂಎಲ್‌ಎ ಕೆಲವೇ ವರ್ಷಗಳಲ್ಲಿ ನೂರಾರು ಕೋಟಿ ರೂಪಾಯಿ ಆಸ್ತಿ ಮಾಡುತ್ತಾನೆ. ಹೀಗಿರುವಾಗ ಉನ್ನತ ಹುದ್ದೆಗಳಲ್ಲಿದ್ದ ಮನಮೋಹನ್ ಸಿಂಗ್ ಹೆಚ್ಚು ಆಸ್ತಿ ಮಾಡದೆ ಇರುವುದು ಅವರ ಸರಳತೆ ಮತ್ತು ಪ್ರಾಮಾಣಿಕತೆಗೆ ಸಾಕ್ಷಿ.
ಮನಮೋಹನ್ ಸಿಂಗ್ ಆಸ್ತಿ ಮೌಲ್ಯ ಎಷ್ಟು?
2018ರಲ್ಲಿ ರಾಜ್ಯಸಭಾ ಸಂಸದ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವಾಗ ಮನಮೋಹನ್ ಸಿಂಗ್ ತಮ್ಮ ಒಟ್ಟು ಆಸ್ತಿ 15 ಕೋಟಿ 77 ಲಕ್ಷ 52 ಸಾವಿರದ 837 ರೂಪಾಯಿ ಎಂದು ಘೋಷಿಸಿದ್ದರು. ಇದಾದ ಬಳಿಕ ರಾಜ್ಯಸಭಾ ಚುನಾವಣೆಗೆ ನಾಮನಿರ್ದೇಶನ ಮಾಡುವಾಗ ಅಂದರೆ, 2018-19ರಲ್ಲಿ ಅವರ ಒಟ್ಟು ಗಳಿಕೆ 89 ಲಕ್ಷ 42 ಸಾವಿರ 390 ರೂಪಾಯಿಗೆ ಏರಿಕೆಯಾಗಿತ್ತು. ಮನಮೋಹನ್ ಸಿಂಗ್ ಅವರ ನಿವ್ವಳ ಮೌಲ್ಯಕ್ಕೆ ಸಂಬಂಧಿಸಿದ ಈ ಮಾಹಿತಿಯನ್ನು ಅವರು ನೀಡಿದ ಅಫಿಡವಿಟ್ ಆಧಾರದ ಮೇಲೆ ವರದಿ ಮಾಡಲಾಗಿತ್ತು.
ಇದಕ್ಕೂ ಮೊದಲು 2013ರಲ್ಲಿ ಪ್ರಧಾನಿಯಾಗಿದ್ದ ವೇಳೆ ತಮ್ಮ ಆಸ್ತಿಯನ್ನು ಮನಮೋಹನ್ ಸಿಂಗ್ ಬಹಿರಂಗಪಡಿಸಿದ್ದರು. ಅಂದಿನ ಅಫಿಡವಿಟ್ ಪ್ರಕಾರ, ಒಟ್ಟು ನಿವ್ವಳ ಮೌಲ್ಯ 10.73 ಕೋಟಿ ರೂಪಾಯಿ. ಚಂಡೀಗಢ ಮತ್ತು ದೆಹಲಿಯಲ್ಲಿ ಎರಡು ಮನೆಗಳನ್ನು ಹೊಂದಿದ್ದು, ಸಾಧಾರಣ ಮಾರುತಿ 800 ಕಾರ್ ಇದೆ ಎಂದು ಅಫಿಡವಿಟ್‌ನಲ್ಲಿ ನಮೂದಿಸಿದ್ದರು. 2012ರಲ್ಲಿ 150.80 ಗ್ರಾಂ ಚಿನ್ನಾಭರಣವಿದೆ ಎಂದೂ ಸಿಂಗ್ ಮಾಹಿತಿ ನೀಡಿದ್ದರು.
ಈ ಸುದ್ದಿಯನ್ನೂ ಓದಿ:Manmohan Singh: ಮನಮೋಹನ್ ಸಿಂಗ್ BMW ಇಷ್ಟಪಟ್ಟವರಲ್ಲ-ಮಾರುತಿ 800 ಅವರ ಆಲ್‌ಟೈಮ್ ಫೇವರಿಟ್ ಕಾರು!