Wednesday, 1st January 2025

Manmohan Singh: ಪವಿತ್ರ ಯಮುನಾ ನದಿಯಲ್ಲಿ ಮನಮೋಹನ್‌ ಸಿಂಗ್‌ ಅಸ್ಥಿ ವಿಸರ್ಜನೆ

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ (Manmohan Singh) ಅವರ ಅಸ್ಥಿಯನ್ನು (Ashes) ಮಜ್‌ನೂ ಕ ತಿಲಾ ಗುರುದ್ವಾರದ ಬಳಿ ಪವಿತ್ರ ಯುಮುನಾ ನದಿಯಲ್ಲಿ ಭಾನುವಾರ (ಡಿ. 29) ವಿಸರ್ಜನೆ ಮಾಡಲಾಯಿತು. ಸಿಂಗ್‌ ಅವರ ಅಂತ್ಯಕ್ರಿಯೆ ನಡೆದಿದ್ದ ನಿಗಮ್‌ ಭೋದ್‌ ಘಾಟ್‌ನಿಂದ ಇಂದು ಬೆಳಗ್ಗೆ ಅಸ್ಥಿಯನ್ನು ಸಂಗ್ರಹಿಸಿದ ಅವರ ಕುಟುಂಬಸ್ಥರು ಬಳಿಕ ಅದನ್ನು ಯುಮುನಾ ನದಿ ದಂಡೆಯಲ್ಲಿನ ‘ಅಸ್ಥ್ ಘಾಟ್‌’ಗೆ ತಂದರು. ನಂತರ ಸಿಖ್‌ ಧರ್ಮದ ಪ್ರಕಾರ ವಿಧಿವಿಧಾನಗಳನ್ನು ನಡೆಸಿ ಚಿತಾಭಸ್ಮವನ್ನು ವಿಸರ್ಜಿಸಲಾಯಿತು.

ಚಿತಾಭಸ್ಮ ವಿಸರ್ಜನೆ ವೇಳೆ ಮನಮೋಹನ್ ಸಿಂಗ್‌ ಅವರ ಪತ್ನಿ ಗುರುಶರಣ್‌ ಕೌರ್‌ ಮತ್ತು ಪುತ್ರಿಯರಾದ ಉಪಿಂದರ್‌ ಸಿಂಗ್‌, ದಮನ್‌ ಸಿಂಗ್‌ ಮತ್ತು ಅಮೃತ್‌ ಸಿಂಗ್‌ ಉಪಸ್ಥಿತರಿದ್ದರು. ಮೋತಿಲಾಲ್‌ ನೆಹರೂ ಮಾರ್ಗದಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಸಿಂಗ್‌ ಕುಟುಂಬಸ್ಥರು, ಸಿಖ್ ವಿಧಿವಿಧಾನಗಳ ಅನ್ವಯ ಜನವರಿ 1ರಂದು ‘ಅಖಂಡ ಪಥ್‌’ ನಡೆಸಲಿದ್ದಾರೆ. ಸಂಸತ್ತಿನ ಬಳಿಯಿರುವ ರಖಬ್‌ ಗಂಜ್‌ ಗುರುದ್ವಾರದ ಬಳಿ ಜನವರಿ 3ರಂದು ‘ಭೋಗ್‌’ ಕಾರ್ಯಕ್ರಮ, ‘ಅಂತಿಮ್ ಆರ್ದಾಸ್‌’ ಮತ್ತು ‘ಕೀರ್ತನ್‌’ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

92 ವರ್ಷದ ಮನಮೋಹನ್ ಸಿಂಗ್‌ ಅವರು ತಮ್ಮ ಇಳಿ ವಯಸ್ಸಿನಲ್ಲಿ ತೀವ್ರ ಉಸಿರಾಟದ ಸಮಸ್ಯೆಯನ್ನು ಎದುರಿಸುತ್ತಿದ್ದರು. ದೆಹಲಿಯ ಏಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಡಿ. 26ರಂದು ನಿಧನ ಹೊಂದಿದ್ದರು. ದೆಹಲಿಯ ನಿಗಮ್‌ ಭೋದ್‌ ಘಾಟ್‌ನಲ್ಲಿ ಶನಿವಾರ ಅವರ ಅಂತ್ಯಕ್ರಿಯೆ ನಡೆದಿತ್ತು.

ಮನಮೋಹನ್‌ ಸಿಂಗ್‌ ಕುರಿತ ಕುತೂಹಲ ಸಂಗತಿಗಳು

  • ಮನಮೋಹನ್ ಸಿಂಗ್ ಅವರು 1932ರ ಸೆಪ್ಟೆಂಬರ್ 26ರಂದು ಪಂಜಾಬ್‌ನ ಗಾಹ್‌ನಲ್ಲಿ (ಈಗಿನ ಪಾಕಿಸ್ತಾನ) ಜನಿಸಿದರು. ದೇಶ ವಿಭಜನೆಯ ನಂತರ, ಅವರು ತಮ್ಮ ಕುಟುಂಬದೊಂದಿಗೆ ಭಾರತಕ್ಕೆ ವಲಸೆ ಬಂದರು.
  • ಸಿಂಗ್ ಚಿಕ್ಕ ವಯಸ್ಸಿನಲ್ಲೇ ತಮ್ಮ ತಾಯಿಯನ್ನು ಕಳೆದುಕೊಂಡು ಅವರ ಅಜ್ಜಿಯ ಆಶ್ರಯದಲ್ಲಿ ಬೆಳೆದರು.
  • ಅವರ ಗ್ರಾಮದಲ್ಲಿ ಆ ಕಾಲಕ್ಕೆ ವಿದ್ಯುತ್ ಇರಲಿಲ್ಲ. ಸೀಮೆಎಣ್ಣೆ ದೀಪದ ಕೆಳಗೆ ಕೂತು ರಾತ್ರಿಯಿಡೀ ಓದುತ್ತಿದ್ದರು.
  • ಮನಮೋಹನ್ ಸಿಂಗ್ ಓದಿದ್ದು ಅಮೃತಸರದ ಹಿಂದೂ ಕಾಲೇಜಿನಲ್ಲಿ. ನಂತರ ಅವರು ಪಂಜಾಬ್ ವಿಶ್ವವಿದ್ಯಾನಿಲಯದಿಂದ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದರು.
  • ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಿಂದ ತಮ್ಮ ಅರ್ಥಶಾಸ್ತ್ರ ವಿಷಯದಲ್ಲಿ ಟ್ರಿಪೋಸ್ ಮಾಡಿದ್ದಲ್ಲದೇ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಆ ಕಾಲಕ್ಕೆ ಡಿಫಿಲ್ ಪದವಿ ಪಡೆದರು.
  • ಸಿಂಗ್ 1966ರಿಂದ 1969ರವರೆಗೆ ಟ್ರೇಡ್ & ಡೆವಲಪ್‌ಮೆಂಟ್ ನ ವಿಶ್ವಸಂಸ್ಥೆಯ ಸಮ್ಮೇಳನಕ್ಕಾಗಿ (UNCTAD) ಕೆಲಸ ಮಾಡಿದರು.
  • ಸಿಂಗ್ ವಿದೇಶಾಂಗ ವ್ಯಾಪಾರ ಸಚಿವಾಲಯದ ಸಲಹೆಗಾರರಾಗಿ ಕೆಲಸ ಮಾಡಿದರು. ಅವರನ್ನು ಲಲಿತ್ ನಾರಾಯಣ ಮಿಶ್ರಾ ಅವರು ನೇಮಕ ಮಾಡಿದ್ದರು.
  • 1972ರಲ್ಲಿ, ಮನಮೋಹನ್ ಸಿಂಗ್ ಅವರು ಹಣಕಾಸು ಸಚಿವಾಲಯದ ಮುಖ್ಯ ಸಲಹೆಗಾರರಾದರು.
  • 1976ರಲ್ಲಿ ಸಿಂಗ್ ಹಣಕಾಸು ಸಚಿವಾಲಯದ ಕಾರ್ಯದರ್ಶಿಯಾದರು.
  • 1982ರಲ್ಲಿ ಮನಮೋಹನ್ ಸಿಂಗ್ ಅವರನ್ನು ಪ್ರತಿಷ್ಠಿತ ಆರ್‌ಬಿಐ(‌RBI) ಗವರ್ನರ್ ಆಗಿ ನೇಮಿಸಲಾಯಿತು.
  • ಅವರು 1985ರಿಂದ 1987ರವರೆಗೆ ಭಾರತದ ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದರು.
  • 1991ರಲ್ಲಿ ಅವರು ವಿಶ್ವವಿದ್ಯಾಲಯ ಅನುದಾನ ಆಯೋಗದ (UGC) ಅಧ್ಯಕ್ಷರಾಗಿ ನೇಮಕಗೊಂಡರು.
  • 1991ರ ಜೂನ್‌ನಲ್ಲಿ ಅವರು ಪಿವಿ ನರಸಿಂಹರಾವ್ ಅವರ ಸಂಪುಟದಲ್ಲಿ ಹಣಕಾಸು ಸಚಿವರಾಗಿ ನೇಮಕಗೊಂಡರು.
  • ಉದಾರೀಕರಣದ ನಂತರದ ಭಾರತದ ಅಭಿವೃದ್ಧಿಗೆ ಕಾರಣರಾದ ಪ್ರಮುಖ ವ್ಯಕ್ತಿಗಳಲ್ಲಿ ಮನಮೋಹನ್ ಸಿಂಗ್ ಒಬ್ಬರು.
  • ಮನಮೋಹನ್ ಸಿಂಗ್ ಅವರು 1991 ರಲ್ಲಿ ರಾಜ್ಯಸಭೆಗೆ ಆಯ್ಕೆಯಾದರು ಮತ್ತು 1995, 2001, 2007 ಮತ್ತು 2013ರಲ್ಲಿ ಮರು ಆಯ್ಕೆಯಾದರು.
  • ಮನಮೋಹನ್ ಸಿಂಗ್ ಅವರು 2004ರ ಮೇ 22ರಂದು ಭಾರತದ 14ನೇ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.
  • 1987ರಲ್ಲಿ ಸಿಂಗ್ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಲಾಯಿತು.
  • 1993ರಲ್ಲಿ ಯುರೋಮನಿ ಮತ್ತು ಏಷ್ಯಾಮನಿ ಅವರನ್ನು ವರ್ಷದ ಹಣಕಾಸು ಮಂತ್ರಿ ಎಂದು ಹೆಸರಿಸಿ ಗೌರವಿಸಿತು.
  • 2002ರಲ್ಲಿ, ಅವರಿಗೆ ಅತ್ಯುತ್ತಮ ಸಂಸದೀಯಪಟು ಪ್ರಶಸ್ತಿಯನ್ನು ನೀಡಲಾಯಿತು
  • 2005ರಲ್ಲಿ, ದಿ ಟೈಮ್ ಮನಮೋಹನ್ ಸಿಂಗ್ ಅವರನ್ನು ‘ವಿಶ್ವದ ಟಾಪ್ 100 ಪ್ರಭಾವಿ ವ್ಯಕ್ತಿಗಳಲ್ಲಿ’ ಒಬ್ಬರೆಂದು ಹೆಸರಿಸಿತು.

ಈ ಸುದ್ದಿಯನ್ನೂ ಓದಿ:Manmohan Singh: ಮನಮೋಹನ್‌ ಸಿಂಗ್‌ BMW ಇಷ್ಟಪಟ್ಟವರಲ್ಲ-ಮಾರುತಿ 800 ಅವರ ಆಲ್‌ಟೈಮ್‌ ಫೇವರಿಟ್‌ ಕಾರು!