Tuesday, 7th January 2025

ಮುಂದುವರಿದ ನಕ್ಸಲರ ಅಟ್ಟಹಾಸ; 8 ಭದ್ರತಾ ಸಿಬ್ಬಂದಿ ಹುತಾತ್ಮ

Naxals

ರಾಯ್‌ಪುರ: ಛತ್ತೀಸ್‌ಗಢದ ಬಿಜಾಪುರದಲ್ಲಿ ಸೋಮವಾರ (ಡಿ. 6) ನಕ್ಸಲರು ಐಇಡಿ (IED) ಸ್ಫೋಟಿಸಿದ್ದು, ಭದ್ರತಾ ಪಡೆಯ ಸಿಬ್ಬಂದಿ ಸೇರಿ ಒಟ್ಟು 9 ಮಂದಿ ಮೃತಪಟ್ಟಿದ್ದಾರೆ. ಭದ್ರತಾ ಪಡೆ ಸಂಚರಿಸುತ್ತಿದ್ದ ವಾಹನಗಳ ಮೇಲೆ ನಕ್ಸಲರು ದಾಳಿ ನಡೆಸಿದ್ದು, 8 ದಾಂತೇವಾಡ ಡಿಆರ್‌ಜಿ ಜವಾನರು (DRG jawans) ಮತ್ತು ಓರ್ವ ಚಾಲಕ ಸೇರಿ 9 ಹುತಾತ್ಮರಾಗಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ (Naxals).

ದಾಂತೇವಾಡ, ನಾರಾಯಣಪುರ ಮತ್ತು ಬಿಜಾಪುರಗಳಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಡಿಆರ್‌ಜಿ ಜವಾನರು ಹಿಂದಿರುಗುತ್ತಿದ್ದ ವೇಳೆ ನಕ್ಸಲರು ಸ್ಫೋಟ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಿಜಾಪುರ ಜಿಲ್ಲೆಯ ಬೆದ್ರೆ-ಕುಟ್ರು ರಸ್ತೆಯಲ್ಲಿ ಈ ಸ್ಫೋಟ ಸಂಭವಿಸಿದೆ. ಛತ್ತೀಸ್‌ಗಢದ ಬಸ್ತಾರ್ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ 5 ಮಂದಿ ನಕ್ಸಲರು ಸಾವನ್ನಪ್ಪಿದ್ದು, ಅದರ ಬೆನ್ನಲ್ಲೇ ಈ ಘಟನೆ ನಡೆದಿದೆ. ಶನಿವಾರ (ಜ. 4) ಪ್ರಾರಂಭವಾದ ಕಾರ್ಯಾಚರಣೆಯಲ್ಲಿ ಈಗಾಗಲೇ 1 ಶವವನ್ನು ವಶಪಡಿಸಿಕೊಳ್ಳಲಾಗಿದೆ.

ನಾರಾಯಣಪುರ ಮತ್ತು ದಾಂತೇವಾಡ ಜಿಲ್ಲೆಗಳ ಗಡಿಯಲ್ಲಿರುವ ದಕ್ಷಿಣ ಅಬುಜ್ಮಾದ್‌ನ ಅರಣ್ಯದಲ್ಲಿ ಶನಿವಾರ ಸಂಜೆ ಭದ್ರತಾ ಸಿಬ್ಬಂದಿ ನಕ್ಸಲ್‌ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಗುಂಡಿನ ಚಕಮಕಿ ಆರಂಭವಾಗಿತ್ತು. ಭಾನುವಾರ ನಾಲ್ವರು ನಕ್ಸಲರು ಸಾವನ್ನಪ್ಪಿದ್ದರು. ʼʼಭದ್ರತಾ ಸಿಬ್ಬಂದಿಯೊಂದಿಗಿನ ಗುಂಡಿನ ಕಾಳಗದಲ್ಲಿ ಇದುವರೆಗೆ ಕೊಲ್ಲಲ್ಪಟ್ಟ ನಕ್ಸಲರ ಸಂಖ್ಯೆ ಇಬ್ಬರು ಮಹಿಳೆಯರು ಸೇರಿದಂತೆ ಐದಕ್ಕೆ ಏರಿದೆʼʼ ಎಂದು ಅಧಿಕಾರಿ ತಿಳಿಸಿದ್ದಾರೆ.

ಗುಂಡಿನ ಚಕಮಕಿಯಲ್ಲಿ ಜಿಲ್ಲಾ ರಿಸರ್ವ್ ಗಾರ್ಡ್ (ಡಿಆರ್‌ಜಿ) ಹೆಡ್ ಕಾನ್ಸ್‌ಟೇಬಲ್ ಸಣ್ಣು ಕರಮ್ ಕೂಡ ಮೃತಪಟ್ಟಿದ್ದಾರೆ. ಸೋಮವಾರ ಬೆಳಗ್ಗೆಯಿಂದ ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಮೂಲಗಳು ವರದಿ ಮಾಡಿವೆ.

219 ನಕ್ಸಲರ ಸಾವು

ನಾರಾಯಣಪುರ, ಬಸ್ತಾರ್, ಕೊಂಡಗಾಂವ್ ಮತ್ತು ದಾಂತೇವಾಡ ಜಿಲ್ಲೆಗಳ ಡಿಆರ್‌ಜಿಗೆ ಸೇರಿದ ಸಿಬ್ಬಂದಿ ಮತ್ತು ವಿಶೇಷ ಕಾರ್ಯಪಡೆ (ಎಸ್‌ಟಿಎಫ್‌) ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಜ. 3ರಂದು ರಾಯ್‌ಪುರ ವಿಭಾಗದ ಗರಿಯಾಬಂದ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ನಕ್ಸಲೀಯನೊಬ್ಬ ಸಾವನ್ನಪ್ಪಿದ್ದ. ಕಳೆದ ವರ್ಷ ರಾಜ್ಯದಲ್ಲಿ ನಡೆದ ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ 219 ನಕ್ಸಲರನ್ನು ಭದ್ರತಾ ಪಡೆಗಳು ಗುಂಡಿಕ್ಕಿ ಕೊಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮಾವೋವಾದಿಗುಂಪುಗಳನ್ನು ಉದ್ದೇಶಿಸಿ ಮಾತನಾಡಿದ್ದರು. ಅದರಲ್ಲಿ ಅವರು ಶರಣಾಗತ ಮಾವೋವಾದಿಗಳ ಗುಂಪಿಗೆ ನರೇಂದ್ರ ಮೋದಿ ಅವರ ಸರ್ಕಾರ ಎಲ್ಲ ರೀತಿಯ ಸಹಾಯವನ್ನು ಮಾಡುತ್ತದೆ ಎಂದು ಭರವಸೆ ನೀಡಿದ್ದರು. ಇತರ ಮಾವೋವಾದಿಗಳನ್ನು ಸಹ ಶರಣಾಗುವಂತೆ ಪ್ರೋತ್ಸಾಹಿಸಲು ಸಹಾಯ ಮಾಡುವಂತೆ ಅವರು ಮನವಿ ಮಾಡಿದ್ದರು. ಕೊಲ್ಲುವುದು ಮುಂದಿನ ದಾರಿಯಲ್ಲ. ಆಯುಧ ಹಿಡಿದವರನ್ನು ಮುಖ್ಯವಾಹಿನಿಗೆ ತರಬೇಕು. ಆದ್ದರಿಂದ, ನಾನು ಗೃಹ ಸಚಿವ ವಿಜಯ್‌ ಶರ್ಮಾ ಅವರಲ್ಲಿ ವಿನಂತಸಿಕೊಳ್ಳುತ್ತೇನೆ ಎಂದು ಹೇಳಿದ್ದರು.

ಈ ಸುದ್ದಿಯನ್ನೂ ಓದಿ: Naxals: ಅಂತಾರಾಜ್ಯ ಗಡಿಗಳತ್ತ ನುಗ್ಗುತ್ತಿದೆ ನಕ್ಸಲ್‌ ಪಡೆ; ಕೇಂದ್ರ ಗೃಹ ಸಚಿವಾಲಯದಿಂದ ಮಾಹಿತಿ

Leave a Reply

Your email address will not be published. Required fields are marked *