ಮುಂಬೈ: ಈ ವಾರ ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿಯ ಮೇಲೆ ಹಲವಾರು ಅಂಶಗಳು ಪ್ರಭಾವ ಬೀರುವ ಸಾಧ್ಯತೆ ಇದೆ(Market outlook). ಜಿಡಿಪಿ ಕುರಿತ ಇತ್ತೀಚಿನ ಅಂಕಿ ಅಂಶ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹಣಕಾಸು ನೀತಿ ಪರಾಮರ್ಶೆ ಸಮಿತಿಯ ಸಭೆಯ ನಿರ್ಧಾರಗಳು, ಮಾಸಿಕ ಆಟೊಮೊಬೈಲ್ ಸೇಲ್ಸ್ ಕುರಿತ ಅಂಕಿ ಅಂಶಗಳು, ವಿದೇಶಿ ಹೂಡಿಕೆಯ ಹರಿವಿನ ಟ್ರೆಂಡ್ ಪ್ರಭಾವ ಬೀರುವ ನಿರೀಕ್ಷೆ ಇದೆ. ಜತೆಗೆ ಟೆಕ್ನಿಕಲ್ ವಿಷಯಗಳು, ಜಿಯೊಪೊಲಿಟಿಕಲ್ ಟೆನ್ಷನ್‌ಗಳು, ಕಚ್ಚಾ ತೈಲ ದರಗಳೂ ಪ್ರಭಾವ ಬೀರುವ ನಿರೀಕ್ಷೆ ಇದೆ. ವಿಶ್ಲೇಷಕರ ಪ್ರಕಾರ ಮುಂದಿನ 6ರಿಂದ 12 ತಿಂಗಳು ಸೈಡ್‌ವೇಸ್ ಮೂವ್‌ಮೆಂಟ್‌ಗಳನ್ನು ನಿರೀಕ್ಷಿಸಲಾಗಿದೆ. ಸೈಡ್ ವೇಸ್ ಮೂವ್‌ಮೆಂಟ್ ಅಂದ್ರೆ ಮಾರುಕಟ್ಟೆಯಲ್ಲಿ ಯಾವುದೇ ಒಂದು ಸ್ಪಷ್ಟವಾದ ಟ್ರೆಂಡ್ ಎಂಬುದು ಇರುವುದಿಲ್ಲ.
ಕಳೆದ ಜುಲೈ-ಸೆಪ್ಟೆಂಬರ್ ಅವಧಿಯ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಬೆಳವಣಿಗೆ 5.4% ಕ್ಕೆ ಇಳಿಕೆಯಾಗಿದೆ ಎಂದು ನ್ಯಾಶನಲ್ ಸ್ಟಾಟಿಸ್ಟಿಕ್ಸ್ ಆಫೀಸ್‌ನ ವರದಿ ಶುಕ್ರವಾರ ತಿಳಿಸಿದೆ. 6.5%ರ ಜಿಡಿಪಿಯನ್ನು ನಿರೀಕ್ಷಿಸಲಾಗಿತ್ತು. ಹೀಗಾಗಿ ಇದು ಷೇರು ಮಾರುಕಟ್ಟೆಯ ಮೇಲೆ ನಕಾರಾತ್ಮಕ ಪ್ರಭಾವ ಬೀರುವ ಸಾಧ್ಯತೆ ಇದೆ. ಕಳೆದ ಏಪ್ರಿಲ್-ಜೂನ್ ಅವಧಿಯಲ್ಲಿ ಜಿಡಿಪಿ 6.7%ರಷ್ಟಿತ್ತು. 2023ರ ಜುಲೈ-ಸೆಪ್ಟೆಂಬರ್‌ನಲ್ಲಿ 8.1% ರಷ್ಟಿತ್ತು.
ಜಿಡಿಪಿ ಅಂಕಿ ಅಂಶಗಳು ನಿರಾಶೆ ಮೂಡಿಸಿದ್ದರೂ, ಕಳವಳಕಾರಿಯಾಗಿ ಇಳಿದಿಲ್ಲ. ಮುಂಬರುವ ತ್ರೈಮಾಸಿಕಗಳಲ್ಲಿ ಜಿಡಿಪಿ ಬೆಳವಣಿಗೆಯನ್ನೂ ನಿರೀಕ್ಷಿಸಲಾಗಿದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತ ನಾಗೇಶ್ವರನ್ ತಿಳಿಸಿದ್ದಾರೆ. ಜತೆಗೆ ಆರ್ಥಿಕತೆಯ ಚೇತರಿಕೆಗೋಸ್ಕರ ಆರ್‌ಬಿಐ ಬಡ್ಡಿ ದರ ಇಳಿಸಲು ಪರಿಶೀಲನೆ ನಡೆಸಲೂಬಹುದು. ಹೀಗಿದ್ದರೂ, ಷೇರು ಮಾರುಕಟ್ಟೆಯ ದೃಷ್ಟಿಯಿಂದ ತಾತ್ಕಾಲಿಕವಾಗಿ ಅನಿಶ್ಚಿತತೆ ಮೂಡಿಸಿರುವುದಂತೂ ಹೌದು.
ಆರ್‌ಬಿಐ ಹಣಕಾಸು ನೀತಿ ಪರಾಮರ್ಶೆ ಸಮಿತಿಯ ಸಭೆ ಡಿಸೆಂಬರ್ 4ರಿಂದ 6 ತನಕ ನಡೆಯಲಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ವರದಿಯ ಪ್ರಕಾರ ಈ ಸಲ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಸಾಧ್ಯತೆ ಇಲ್ಲ. ಹೀಗಿದ್ದರೂ, ಮುಂಬರುವ ತಿಂಗಳುಗಳಲ್ಲಿ ಗ್ರಾಮೀಣ ಆರ್ಥಿಕತೆ ಸುಧಾರಿಸಲಿದೆ ಎಂದು ವರದಿ ತಿಳಿಸಿದೆ.
ಷೇರು ಮಾರುಕಟ್ಟೆಯ ಮೇಲೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರ ನಿಲುವುಗಳೂ ಪ್ರಭಾವ ಬೀರುತ್ತವೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಅಥವಾ ಎಫ್‌ಐಐಗಳು ಕಳೆದ ನವೆಂಬರ್‌ನಲ್ಲಿ 26,000 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿವೆ. ಹೀಗಿದ್ದರೂ, ಅಕ್ಟೋಬರ್‌ನಲ್ಲಿ 94,000 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಿದ್ದರು. ಹೀಗಾಗಿ ಮಾರಾಟದ ಭರಾಟೆ ಕಡಿಮೆಯಾಗಿರುವುದನ್ನು ಗಮನಿಸಬಹುದು.
ಆಟೊಮೊಬೈಲ್ ವಲಯದ ವ್ಯಾಪಾರ ಕುರಿತ ಅಂಕಿ ಅಂಶಗಳು ಸೋಮವಾರ ಪ್ರಕಟವಾಗಲಿದೆ. ಈ ಸಲ ಉತ್ತಮ ವಹಿವಾಟನ್ನು ನಿರೀಕ್ಷಿಸಲಾಗಿದೆ.
- ಈ ವಾರ 3 IPOಗಳು, 8 ಲಿಸ್ಟಿಂಗ್ಸ್ ನಡೆಯಲಿದೆ. ಮುಖ್ಯವಾಗಿ ಸುರಕ್ಷಾ ಡಯಾಗ್ನೊಸ್ಟಿಕ್ಸ್ ಐಪಿಒ ಡಿಸೆಂಬರ್ 4ಕ್ಕೆ ಮುಕ್ತಾಯವಾಗುತ್ತದೆ ಮತ್ತು ಡಿಸೆಂಬರ್ 6ಕ್ಕೆ ಲಿಸ್ಟಿಂಗ್ ಆಗಲಿದೆ.
- ಗಣೇಶ್ ಇನ್‌ಫ್ರಾ ವರ್ಲ್ಡ್ ಐಪಿಒ ಡಿಸೆಂಬರ್ 3ಕ್ಕೆ ಮುಕ್ತಾಯವಾಗಲಿದ್ದು, ಡಿಸೆಂಬರ್ 6ಕ್ಕೆ ಲಿಸ್ಟಿಂಗ್ ಆಗಲಿದೆ.
- ಪ್ರೋಪ್‌ಶೇರ್ ಪ್ಲಾಟಿನಾ ಕಂಪನಿಯ ಐಪಿಒ ಡಿಸೆಂಬರ್ 2ಕ್ಕೆ ಆರಂಭವಾಗಲಿದ್ದು, 4ಕ್ಕೆ ಮುಕ್ತಾಯವಾಗಲಿದೆ.
- ವಿಪ್ರೊ ಸೇರಿದಂತೆ ಹಲವು ಕಂಪನಿಗಳು ಈ ವಾರ ಡಿವಿಡೆಂಡ್ ರೆಕಾರ್ಡ್ ಡೇಟ್ ಅನ್ನು ಸಮೀಪಿಸುತ್ತಿವೆ. ರೆಕಾರ್ಡ್ ಡೇಟ್ ಎಂದರೆ, ಆ ದಿನದ ಒಳಗಾಗಿ ಷೇರುಗಳನ್ನು ಖರೀದಿಸಿದವರಿಗೆ ಡಿವಿಡೆಂಡ್, ಬೋನಸ್ ಷೇರು, ಷೇರು ವಿಭಜನೆಯ ಅನುಕೂಲಗಳು ಸಿಗುತ್ತದೆ.
- ಐಟಿ ದಿಗ್ಗಜ ವಿಪ್ರೊ ಕಂಪನಿಯು ಬೋನಸ್ ಷೇರುಗಳನ್ನು 1:1 ಅನುಪಾತದಲ್ಲಿ ಬಿಡುಗಡೆ ಮಾಡಲಿದೆ. ಅಂದರೆ ಪ್ರತಿ ಒಂದು ಷೇರಿಗೆ ಒಂದು ಷೇರು ಬೋನಸ್ ಆಗಿ ಸಿಗಲಿದೆ. ಡಿಸೆಂಬರ್ 3 ಇದರ ರೆಕಾರ್ಡ್ ಡೇಟ್ ಆಗಿದೆ.
- ಕ್ಯಾನ್ ಫಿನ್ ಹೋಮ್ಸ್ ಹೌಸಿಂಗ್ ಫೈನಾನ್ಸ್ ಕಂಪನಿಯು ಪ್ರತಿ ಷೇರಿಗೆ 6 ರೂ.ಗಳ ಡಿವಿಡೆಂಡ್ ಅನ್ನು ಷೇರುದಾರರಿಗೆ ವಿತರಿಸಲಿದೆ. ಇದರ ರೆಕಾರ್ಡ್ ಡೇಟ್ ಡಿಸೆಂಬರ್ 4 ಆಗಿದೆ.
- ರಾಜೂ ಎಂಜಿನಿಯರ್ಸ್ ಕಂಪನಿಯು 1:3 ಅನುಪಾತದಲ್ಲಿ ಬೋನಸ್ ಷೇರುಗಳನ್ನು ವಿತರಿಸಲಿದೆ. ಇದರ ರೆಕಾರ್ಡ್ ಡೇಟ್ ಡಿಸೆಂಬರ್ 2 ಆಗಿದೆ.
ಟೆಕ್ನಿಕಲ್ ದೃಷ್ಟಿಯಿಂದ ನಿಫ್ಟಿ ಕಳೆದ ಕೆಲ ದಿನಗಳಿಂದ 24,350 ಅಂಕಗಳ ಮಟ್ಟದಲ್ಲಿ ಬಲವಾಗುತ್ತಿದೆ. ಹೀಗಾಗಿ 24,000 ಅಂಕಗಳ ಮಟ್ಟದಲ್ಲಿ ಸಪೋರ್ಟ್ ಸಿಗಬಹುದು. ಮುಂದಿನ ನಿರ್ಣಾಯಕ ರೆಸಿಸ್ಟೆನ್ಸ್ ಜೋನ್ ಯಾವುದು ಎಂದರೆ 24,500 ಎನ್ನುತ್ತಾರೆ ತಜ್ಞರು. ಬ್ರೆಂಟ್ ಕಚ್ಚಾ ತೈಲ ದರ ಇತ್ತೀಚೆಗೆ 4% ಇಳಿಕೆಯಾಗಿದೆ. ಮಧ್ಯ ಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ತಿಳಿಯಾಗುತ್ತಿರುವುದು ಇದಕ್ಕೆ ಕಾರಣ.
ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಎಂಡಿ ಮತ್ತು ಸಿಇಒ ಆಗಿರುವ ಧೀರಜ್ ರೆಲ್ಲಿ ಅವರ ಪ್ರಕಾರ ಭಾರತದಲ್ಲಿ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ದಿನೇದಿನೆ ಹೆಚ್ಚುತ್ತಿದೆ. ಕಳೆದ ಅಕ್ಟೋಬರ್‌ನಲ್ಲಿ 25,323 ಕೋಟಿ ರೂ. ಗಳನ್ನು ಸಿಪ್ ಮೂಲಕ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲಾಗಿತ್ತು. 2030ರ ವೇಳೆಗೆ ಭಾರತದಲ್ಲಿ ಮಾಸಿಕ್ ಸಿಪ್ ಮೊತ್ತವೇ 1 ಲಕ್ಷ ಕೋಟಿ ರೂ.ಗಳ ಗಡಿ ದಾಟಬಹುದು ಎನ್ನುತ್ತಾರೆ ಧೀರಜ್ ರೆಲ್ಲಿ ಅವರು. ಇದಕ್ಕೆ ಕಾರಣವೇನು? ಮುಖ್ಯವಾಗಿ ದೇಶದಲ್ಲಿ ಹೆಚ್ಚುತ್ತಿರುವ ಹಣಕಾಸು ಸಾಕ್ಷರತೆ. ಮುಖ್ಯವಾಗಿ ಈಗಿನ ಯುವಜನತೆ ಮತ್ತು ಹೊಸತಾಗಿ ಉದ್ಯೋಗಕ್ಕೆ ಸೇರುವವರು ವೆಲ್ತ್ ಕ್ರಿಯೇಶನ್‌ನ ಮಹತ್ವವನ್ನು ಮನಗಾಣುತ್ತಿದ್ದಾರೆ. ಇದಕ್ಕಾಗಿ ಮ್ಯೂಚುವಲ್ ಫಂಡ್, ಷೇರು, ಬಾಂಡ್‌ಗಳನ್ನು ಆಯ್ಕೆ ಮಾಡುತ್ತಿದ್ದಾರೆ.
ಎರಡನೆಯದಾಗಿ ತಂತ್ರಜ್ಞಾನದ ಅಭಿವೃದ್ಧಿಯ ಪರಿಣಾಮ ಹೂಡಿಕೆ ಬಹಳ ಸುಲಭವಾಗಿದೆ. ಮೂರನೆಯದಾಗಿ ಭಾರತದ ಆರ್ಥಿಕತೆಯೂ ಬೆಳವಣಿಗೆ ಹೊಂದುತ್ತಿದೆ. ಇದರಿಂದ ಕುಟುಂಬಗಳ ಮಟ್ಟದಲ್ಲಿ ಆದಾಯದ ಹೆಚ್ಚಳ ಕಂಡು ಬರುತ್ತಿದೆ. ಹೀಗಾಗಿ ಲಾಂಗ್ ಟರ್ಮ್‌ಗೆ ಹೂಡಿಕೆಯೂ ಹೆಚ್ಚುತ್ತಿದೆ. ಹೀಗಿದ್ದರೂ, ಆರ್ಥಿಕತೆಯ ಅನಿಶ್ಚಿತತೆ, ಹಣದುಬ್ಬರದ ಒತ್ತಡ, ಗ್ಲೋಬಲ್ ಮಾರುಕಟ್ಟೆಯ ಏರಿಳಿತಗಳ ಬಗ್ಗೆ ಹೂಡಿಕೆದಾರರಲ್ಲಿ ಅರಿವು ಅಗತ್ಯ.
ಈ ಸುದ್ದಿಯನ್ನೂ ಓದಿ: Elcid investments : 3 ರೂ.ಗಳ ಷೇರಿನ ದರ ಒಂದೇ ದಿನಕ್ಕೆ 2.36 ಲಕ್ಷ ರೂ.; ಷೇರುದಾರರಿಗೆ ಬಂಪರ್ ಲಾಭ!