Monday, 13th January 2025

Market Outlook: ವಿಶಾಲ್‌ ಮೆಗಾ ಮಾರ್ಟ್‌ ಐಪಿಒ; ಸ್ಟಾಕ್‌ ಮಾರ್ಕೆಟ್‌ ಹೈ ಜಂಪ್?‌

Market Outlook

ಮುಂಬೈ: ಈ ವಾರ ಷೇರು ಮಾರುಕಟ್ಟೆ (Share Market)ಯಲ್ಲಿ ವಿಶಾಲ್‌ ಮೆಗಾ ಮಾರ್ಟ್‌ ಮತ್ತು ವನ್‌ ಮೊಬಿಕ್ವಿಕ್‌ ಕಂಪನಿಯ ಮೆಗಾ ಐಪಿಒ ನಡೆಯಲಿದೆ. ಜತೆಗೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರೂ ಮತ್ತೆ ಷೇರುಗಳಲ್ಲಿ ಹೂಡಿಕೆ ಮಾಡುತ್ತಿರುವುದರಿಂದ ಸೂಚ್ಯಂಕಗಳು ಏರಿಕೆ ದಾಖಲಿಸುವ ನಿರೀಕ್ಷೆ ಇದೆ (Market Outlook).

ಕಳೆದ ಶುಕ್ರವಾರ ನಿಫ್ಟಿ 30 ಅಂಕ ಕಳೆದುಕೊಂಡು 24,677ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತ್ತು. ಆದರೆ ಈ ವಾರ ಮಹತ್ವದ ಐಪಿಒಗಳು ನಡೆಯಲಿರುವುದರಿಂದ ಸಕಾರಾತ್ಮಕ ಪ್ರಭಾವ ಬೀರುವ ನಿರೀಕ್ಷೆ ಇದೆ.

ಟೆಕ್ನಿಕಲಿ, ತಜ್ಞರ ಪ್ರಕಾರ ನಿಫ್ಟಿಗೆ 24,650ರ ಮಟ್ಟದಲ್ಲಿ ನಿರ್ಣಾಯಕ ಸಪೋರ್ಟ್‌ ಲೆವೆಲ್‌ ಸಿಗುತ್ತಿದೆ. ಇಂಡಿಯಾ ವಿಕ್ಸ್‌ ಕೂಡ ಇಳಿದಿದ್ದು, 15 ಅಂಕದ ಮಟ್ಟಕ್ಕಿಂತ ಕೆಳಗಿದೆ. ಇದು ಮಾರುಕಟ್ಟೆಯಲ್ಲಿ ಸೂಚ್ಯಂಕ ಕುಸಿತದ ಆತಂಕ ಕಡಿಮೆ ಆಗಿರುವುದನ್ನು ಬಿಂಬಿಸಿದೆ. ಈಗ ಈ ವಾರ ಪ್ರಭಾವ ಬೀರಬಹುದಾದ ವಿಷಯಗಳನ್ನು ನೋಡೋಣ.

ಈ ವಾರ ಹೈ ಪ್ರೊಫೈಲ್‌ ಐಪಿಒಗಳು ನಡೆಯಲಿವೆ. ವಿಶಾಲ್‌ ಮೆಗಾ ಮಾರ್ಟ್‌, ವನ್‌ ಮೊಬಿಕ್ವಿಕ್‌ ಮತ್ತು ಏಳು ಇತರ ಐಪಿಒಗಳಿಗೆ ಸ್ಟಾಕ್‌ ಮಾರ್ಕೆಟ್‌ ಈ ವಾರ ಸಾಕ್ಷಿಯಾಗುತ್ತಿದೆ. ಜತೆಗೆ ನೈಸಸ್‌ ಫೈನಾನ್ಸ್‌, ಪ್ರಾಪರ್ಟಿ ಶೇರ್‌ ರಿಯಲ್‌ ಎಸ್ಟೇಟ್‌ ಇನ್ವೆಸ್ಟ್‌ಮೆಂಟ್‌ ಟ್ರಸ್ಟ್‌ ಮತ್ತು ಟೈರ್‌ ಉತ್ಪಾದಕ ಎಮ್ರಾಲ್ಡ್‌ ಟೈರ್‌ ಕಂಪನಿಯ ಷೇರಿನ ಲಿಸ್ಟಿಂಗ್‌ ನಡೆಯಲಿದೆ.

ಸೂಪರ್‌ ಮಾರ್ಕೆಟ್‌ ಚೈನ್ ವಿಶಾಲ್‌ ಮೆಗಾ ಮಾರ್ಟ್‌ನ ಐಪಿಒ, ಡಿಸೆಂಬರ್‌ 11ಕ್ಕೆ ಆರಂಭವಾಗಲಿದ್ದು, ಡಿಸೆಂಬರ್‌ 13ಕ್ಕೆ ಮುಕ್ತಾಯವಾಗಲಿದೆ. 8,000 ಕೋಟಿ ರೂ. ಗಾತ್ರದ ಮೆಗಾ ಐಪಿಒ ಇದಾಗಿದ್ದು, ಪ್ರತಿ ಷೇರಿನ ದರ ಶ್ರೇಣಿ 74-78 ರೂ. ಆಗಿದೆ. ಡಿಸೆಂಬರ್‌ 18ಕ್ಕೆ ಬಿಎಸ್‌ಇ ಮತ್ತು ಎನ್‌ಎಸ್‌ಇನಲ್ಲಿ ವಿಶಾಲ್‌ ಮೆಗಾ ಮಾರ್ಟ್‌ ಷೇರು ಲಿಸ್ಟ್‌ ಆಗಲಿದೆ. ಪ್ರತಿ ಲಾಟ್‌ ಸೈಜ್‌ 190 ಷೇರುಗಳಾಗಿದೆ. ಅಂದರೆ ಐಪಿಒದಲ್ಲಿ ಹೂಡಿಕೆ ಮಾಡುವವರು ಕನಿಷ್ಠ 14,820 ರೂ.ಗಳನ್ನು ಹೂಡಿಕೆ ಮಾಡಬೇಕಾಗುತ್ತದೆ. ಹರಿಯಾಣದ ಗುರುಗ್ರಾಮ ಮೂಲದ ವಿಶಾಲ್‌ ಮೆಗಾ ಮಾರ್ಟ್‌ ದೇಶದ 28 ರಾಜ್ಯಗಳ 414 ನಗರಗಳಲ್ಲಿ 645 ಮಳಿಗೆಗಳನ್ನು ಹೊಂದಿದೆ.

ವಿಶಾಲ್‌ ಮೆಗಾ ಮಾರ್ಟ್‌ ಕಳೆದ 2022ರಿಂದ ಇಲ್ಲಿಯವರೆಗೆ ಉತ್ತಮ ಆದಾಯ ಮತ್ತು ನಿವ್ವಳ ಲಾಭವನ್ನು ಗಳಿಸಿದ್ದು, ಪ್ರಗತಿಯನ್ನು ಕಾಣುತ್ತಿದೆ. ಕಂಪನಿ ಬಹುತೇಕ ಸಾಲ ಮುಕ್ತವಾಗಿದೆ. 2024ರ ಸೆಪ್ಟೆಂಬರ್‌ ವೇಳೆಗೆ 254 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. 5,000 ಕೋಟಿ ರೂ.ಗೂ ಹೆಚ್ಚಿನ ಅದಾಯವನ್ನೂ ಗಳಿಸಿತ್ತು.

ಫೈನಾನ್ಸ್‌ ಟೆಕ್ನಾಲಜಿ ವಲಯದ ವನ್ ಮೊಬಿಕ್ವಿಕ್‌ ಸಿಸ್ಟಮ್ಸ್‌ ಐಪಿಒ ಡಿಸೆಂಬರ್‌ 11ಕ್ಕೆ ನಡೆಯಲಿದ್ದು ಡಿಸೆಂಬರ್‌ 13ಕ್ಕೆ ಮುಕ್ತಾಯವಾಗಲಿದೆ. ಪ್ರತಿ ಷೇರಿನ ದರ ಶ್ರೇಣಿ 265-279 ರೂ. ಇರಲಿದೆ. ಎಸ್‌ಎಂಇ ವಲಯದಲ್ಲಿ 6 ಕಂಪನಿಗಳ ಐಪಿಒ ನಡೆಯಲಿದೆ. ಧನಲಕ್ಷ್ಮಿ ಕಾರ್ಪ್‌, ಟಾಸ್‌ ದಿ ಕಾಯಿನ್‌, ಜಂಗಲ್‌ ಕ್ಯಾಂಪ್ಸ್‌, ಸುಪ್ರೀಂ ಫೆಸಿಲಿಟಿ ಮ್ಯಾನೇಜ್ಮೆಂಟ್‌, ಪರ್ಪಲ್‌ ಯುನೈಟೆಡ್‌ ಸೇಲ್ಸ್‌, ಇನ್ವೆಂಚರ್ಸ್‌ ನಾಲೆಡ್ಜ್‌ ಸಲ್ಯೂಷನ್ಸ್‌ನ ಐಒಇ ನಡೆಯಲಿದೆ.

ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಶುಕ್ರವಾರ ಎಸ್‌ & ಪಿ 500 ಮತ್ತು ನಾಸ್‌ಡಾಕ್‌ ಕಂಪೊಸಿಟ್‌ ಶುಕ್ರವಾರ ಹೊಸ ಎತ್ತರಕ್ಕೇರಿತ್ತು. ಅಮೆರಿಕದಲ್ಲಿ ಉದ್ಯೋಗಾವಕಾಶಗಳು ಹೆಚ್ಚಳವಾಗಿರುವುದು ಇದಕ್ಕೆ ಕಾರಣ.

ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಡಿಸೆಂಬರ್‌ 6ರಂದು ಕ್ಯಾಶ್‌ ರಿಸರ್ವ್‌ ರೇಶಿಯೊ ಅಥವಾ ಸಿಆರ್‌ಆರ್‌ ಅನ್ನು 4.5%ರಿಂದ 4%ಕ್ಕೆ ಇಳಿಸಿರುವುದರಿಂದ ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಗಣನೀಯ ಉಳಿತಾಯವಾಗಲಿದೆ. ಅಂದರೆ ಬ್ಯಾಂಕ್‌ಗಳು ಆರ್‌ಬಿಐನಲ್ಲಿ ಇಡಬೇಕಾಗುವ ಠೇವಣಿ ಹಣದ ಮೊತ್ತ ಕಡಿಮೆಯಾಗಲಿದೆ. ಹೀಗಾಗಿ ಬ್ಯಾಂಕ್‌ಗಳಿಗೆ ಉಳಿತಾಯವಾಗಲಿದ್ದು, ಮುಖ್ಯವಾಗಿ ಎಸ್‌ಬಿಐ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಷೇರುಗಳ ದರದಲ್ಲಿ 10-15% ಏರಿಕೆಯಾಗಲಿದೆ ಎಂಬ ನಿರೀಕ್ಷೆ ಉಂಟಾಗಿದೆ. ಈಗಾಗಲೇ ಹೂಡಿಕೆ ಮಾಡಿರುವ ರಿಟೇಲ್‌ ಹೂಡಿಕೆದಾರರಿಗೆ ಲಾಭವಾಗಲಿದೆ.

ಮನಿ ಕಂಟ್ರೋಲ್‌ ಡಾಟ್‌ ಕಾಮ್‌ ತಜ್ಞರ ವಿಶ್ಲೇಷಣೆಯನ್ನು ಆಧರಿಸಿ ಮುಂದಿನ 3-4 ವಾರಗಳಲ್ಲಿ ಏರಿಕೆಯಾಗಬಹುದಾದ 10 ಷೇರುಗಳ ಲಿಸ್ಟ್‌ ಅನ್ನು ಪ್ರಕಟಿಸಿದೆ. ಅದರ ಪ್ರಕಾರ ಲಾಭದಾಯಕವಾಗಬಲ್ಲ ಷೇರುಗಳು ಇಂತಿವೆ:

ಬಜಾಜ್‌ ಫೈನಾನ್ಸ್‌
ಬ್ಯಾಂಕ್‌ ಆಫ್‌ ಮಹಾರಾಷ್ಟ್ರ
ಐಸಿಐಸಿಐ ಬ್ಯಾಂಕ್‌
ಮ್ಯಾಕ್ರೊ ಟೆಲ್‌ ಡೆವಲಪರ್ಸ್‌
ಎಚ್‌ಡಿಎಫ್‌ಸಿ ಬ್ಯಾಂಕ್‌
ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಅಥವಾ ಎಸ್‌ಬಿಐ
ಫೆಡರಲ್‌ ಬ್ಯಾಂಕ್‌
ಎಕ್ಸಿಸ್‌ ಬ್ಯಾಂಕ್‌
ಒಬೆರಾಯ್‌ ರಿಯಾಲಿಟಿ
ಎಸ್ಕಾರ್ಟ್ಸ್‌ ಕ್ಯುಬೊಟಾ

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಅಥವಾ ಫಾರಿನ್‌ ಪೋರ್ಟ್‌ಫೋಲಿಯೊ ಇನ್ವೆಸ್ಟರ್ಸ್‌ ಡಿಸೆಂಬರ್‌ನಲ್ಲಿ ಇದುವರೆಗೆ 24,500 ಕೋಟಿ ರೂ.ಗಳನ್ನು ಹೂಡಿಕೆ ಮಾಡಿದ್ದಾರೆ. ಇದರೊಂದಿಗೆ ನವೆಂಬರ್‌ನ ಟ್ರೆಂಡ್‌ ರಿವರ್ಸ್‌ ಆಗಿದೆ. ನವೆಂಬರ್‌ನಲ್ಲಿ 15,000 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಿದ್ದರು. ಅಕ್ಟೋಬರ್‌ನಲ್ಲಂತೂ 94,000 ಕೋಟಿ ರೂ. ಮೌಲ್ಯದ ಷೇರುಗಳನ್ನು ಎಫ್‌ಐಐಗಳು ಮಾರಾಟ ಮಾಡಿದ್ದರು.

ಕಳೆದ ವಾರ ಸೆಕ್ಟರ್‌ಗಳ ಪರ್ಫಾಮೆನ್ಸ್‌ ಬಗ್ಗೆ ನೋಡೋದಿದ್ರೆ, ಟೆಲಿಕಾಂ, ಆಟೊಮೊಬೈಲ್‌, ಕನ್‌ಸ್ಯೂಮರ್‌ ಡ್ಯೂರಬಲ್ಸ್‌ ಮತ್ತು ಮೆಟಲ್ಸ್‌ ವಲಯದಲ್ಲಿ ಷೇರುಗಳ ಖರೀದಿ ಕಂಡು ಬಂದಿತ್ತು. ಎನರ್ಜಿ, ಹೆಲ್ತ್‌ಕೇರ್‌ ಮತ್ತು ಐಟಿ ಷೇರುಗಳ ಮಾರಾಟ ಕಂಡು ಬಂದಿತ್ತು. ಕಳೆದ ಶುಕ್ರವಾರ ಟೆಕ್‌ ಮಹೀಂದ್ರಾ ಮತ್ತು ಸಿಡಿಎಸ್‌ಎಲ್‌ ಷೇರುಗಳು ಹೊಸ ಎತ್ತರಕ್ಕೇರಿತ್ತು.

ಕಳೆದ ನವೆಂಬರ್‌ನಲ್ಲಿ ಕ್ವಾಂಟ್‌ ಸ್ಮಾಲ್‌ ಕ್ಯಾಪ್‌ ಫಂಡ್‌ ತನ್ನ ಪೋರ್ಟ್‌ಫೋಲಿಯೊಗೆ 10 ಷೇರುಗಳನ್ನು ಸೇರಿಸಿದೆ. ಇದರಲ್ಲಿ 6 ಷೇರುಗಳು ಪಿಎಸ್‌ಯು ಷೇರುಗಳಾಗಿದೆ. ಎಸ್‌ಬಿಐ, ಹುಡ್ಕೊ, ಮಝಾಗಾನ್‌ ಡಾಕ್‌ ಶಿ ಬಿಲ್ಡರ್ಸ್‌, ಎಂಒಐಎಲ್‌, ಒಎನ್‌ಜಿಸಿ ಮತ್ತು ಕೊಚ್ಚಿನ್‌ ಶಿಪ್‌ಯಾರ್ಡ್‌ ಷೇರುಗಳನ್ನು ಕ್ವಾಂಟ್‌ ಸ್ಮಾಲ್‌ ಕ್ಯಾಪ್‌ ಫಂಡ್‌ ಖರೀದಿಸಿದೆ. ಇವುಗಳಲ್ಲದೆ, ವೆಲ್ಸ್‌ಪನ್‌ ಕಾರ್ಪ್‌, ವೆಲ್ಸ್‌ಪನ್‌ ಎಂಟರ್‌ಪ್ರೈಸ್‌, ಓಮ್‌ ಇನ್‌ಫ್ರಾ ಮತ್ತು ಪಂಜಾಬ್‌ ಅಲ್ಕಾಲಿಸ್‌ ಆಂಡ್‌ ಕೆಮಿಕಲ್ಸ್‌ ಷೇರುಗಳನ್ನು ಖರೀದಿಸಿದೆ.

ಈ ಸುದ್ದಿಯನ್ನೂ ಓದಿ: Market outlook: ಜಿಡಿಪಿ ಡೇಟಾಕ್ಕೆ ನಿಫ್ಟಿ ತಟವಟ? ಆರ್‌ಬಿಐ ಮೀಟಿಂಗ್‌ ಮೇಲೆ ಕಣ್ಣು