Wednesday, 1st January 2025

Martket Outlook: ಸೆನ್ಸೆಕ್ಸ್‌, ನಿಫ್ಟಿ ಏರುತ್ತಿರುವುದೇಕೆ? ಹೂಡಿಕೆಗೆ ಇದೇ ಸಕಾಲ!

  • ಕೇಶವಪ್ರಸಾದ್‌.ಬಿ

ಮುಂಬೈ: ಷೇರು ಮಾರುಕಟ್ಟೆಯಲ್ಲಿ ಕಳೆದ ಶುಕ್ರವಾರ ಸೆನ್ಸೆಕ್ಸ್‌ ಮತ್ತು ನಿಫ್ಟಿ ಎರಡೂ ಏರಿಕೆಯಾಗಿದೆ. ಇದೊಂದು ಸಕಾರಾತ್ಮಕ ಸುಳಿವನ್ನು ಕೊಟ್ಟಿದೆ. ಸೆನ್ಸೆಕ್ಸ್‌ 226 ಅಂಕ ಏರಿಕೆಯಾಗಿ 78,699 ಕ್ಕೆ ಮತ್ತು ನಿಫ್ಟಿ 63 ಅಂಕ ಏರಿಕೆಯಾಗಿ 23,813ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತ್ತು. ಹಾಗಾದ್ರೆ ಈ ವಾರ ಷೇರು ಮಾರುಕಟ್ಟೆಯಲ್ಲಿ ಏನಾಗಬಹುದು? ಯಾವೆಲ್ಲ ಅಂಶಗಳು ಪ್ರಭಾವ ಬೀರಬಹುದು? ಯಾವ ಕಂಪನಿಯ ಐಪಿಒ ನಡೆಯಲಿದೆ? ಮಾರ್ಕೆಟ್‌ ಔಟ್‌ಲುಕ್‌(Martket Outlook)ನಲ್ಲಿ ತಿಳಿಯೋಣ.

ಈ ವಾರ ನಿಫ್ಟಿ 24,000 ಅಂಕಗಳ ಗಡಿಯನ್ನು ದಾಟುವ ಸಾಧ್ಯತೆ ಇದೆ. ಆಟೊಮೊಬೈಲ್‌ ಕಂಪನಿಗಳ ಸೇಲ್ಸ್‌, ಕ್ಯೂ 3 ಅಪ್‌ ಡೇಟ್ಸ್‌ ಸಿಗಲಿದೆ. ಜಾಗತಿಕ ಮಾರುಕಟ್ಟೆಗಳ ಟ್ರೆಂಡ್‌ ಕೂಡ ಪ್ರಭಾವ ಬೀರಬಹುದು. ಕಳೆದ ಮೂರು ತಿಂಗಳಿನಿಂದ ಮಂದಗತಿಯಲ್ಲಿದ್ದ ಷೇರು ಪೇಟೆಯ ಸೂಚ್ಯಂಕಗಳು ವರ್ಷಾಂತ್ಯದ ದಿನಗಳಲ್ಲಿ ಚೇತರಿಸುತ್ತಿದೆ. ಕಳದ ವಾರ ಉಭಯ ಸೂಚ್ಯಂಕಗಳು ಒಂದು ಪರ್ಸೆಂಟ್‌ ಏರಿತ್ತು. ಮುಖ್ಯವಾಗಿ ಬ್ಯಾಂಕಿಂಗ್‌ ಷೇರುಗಳು ಚೇತರಿಸುತ್ತಿವೆ.

ಆಟೊಮೊಬೈಲ್‌ ಸೇಲ್ಸ್‌ ಕುರಿತ ಅಂಕಿ ಅಂಶಗಳು ಈ ವಾರ ಷೇರು ಮಾರುಕಟ್ಟೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಹಲವಾರು ಕಂಪನಿಗಳ ಕ್ಯೂ 3 ರಿಸಲ್ಟ್‌ ಕೂಡ ಪ್ರಕಟವಾಗಲಿದೆ. ಇನ್ನು ಐಪಿಒ ಬಗ್ಗೆ ಹೇಳುವುದಿದ್ದರೆ, ಡಿಸೆಂಬರ್‌ 31ಕ್ಕೆ ಎರಡು ಕಂಪನಿಯ ಐಪಿಒಗಳು ನಡೆಯಲಿದೆ. ಅವುಗಳೆಂದರೆ, ಇಂಡೊ ಫಾರ್ಮ್‌ ಎಕ್ವಿಪ್‌ಮೆಂಟ್‌ ಲಿಮಿಟೆಡ್‌ ಮತ್ತು ಟೆಕ್ನಿಕೆಮ್‌ ಆರ್ಗಾನಿಕ್ಸ್‌ ಕಂಪನಿಯ ಐಪಿಒ ನಡೆಯಲಿದೆ. ಇಂಡೊ ಫಾರ್ಮ್‌ ಎಕ್ವಿಪ್‌ಮೆಂಟ್‌ ಐಒಇ ಗಾತ್ರ 260 ಕೋಟಿ ರೂ.ಗಳಾಗಿದ್ದು, ಪ್ರತಿ ಷೇರಿನ ಪ್ರೈಸ್‌ ರೇಂಜ್‌ 205-215 ರೂ. ಇರಲಿದೆ. ಟೆಕ್ನಿಕೆಮ್‌ ಆರ್ಗಾನಿಕ್ಸ್‌ ಐಪಿಒ ಗಾತ್ರ 25 ಕೋಟಿ ರೂ.ಗಖಾಗಿದ್ದು, ಪ್ರತಿ ಷೇರಿನ ದರ 52-55 ರೂ. ರೇಂಜ್‌ನಲ್ಲಿ ಇರಲಿದೆ.

ಡಿಸೆಂಬರ್‌ 27ರ ತನಕದ ಅಂಕಿ ಅಂಶಗಳ ಪ್ರಕಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು 16,675 ಕೋಟಿ ರೂ.ಗಳನ್ನು ಈ ತಿಂಗಳಿನಲ್ಲಿ ಹೂಡಿಕೆ ಮಾಡಿದ್ದಾರೆ. ಜಾಗತಿಕ ಮಟ್ಟದಲ್ಲಿ ಚೀನಾ ಮತ್ತು ಅಮರಿಕದ ಉತ್ಪಾದನಾ ವಲಯದ ಅಂಕಿ ಅಂಶಗಳು ಪ್ರಕಟವಾಗಲಿದ್ದು, ಗ್ಲೋಬಲ್‌ ಮಾರ್ಕೆಟ್‌ನ ದಿಕ್ಕನ್ನು ನಿರ್ಧರಿಸಲಿವೆ.

ಏಷ್ಯನ್‌ ಪೇಂಟ್ಸ್‌ ಕಳೆದ ಹಲವಾರು ವರ್ಷಗಳಿಂದ ಹೂಡಿಕೆದಾರರಿಗೆ ನೆಚ್ಚಿನ ಷೇರಾಗಿತ್ತು. ಇದರದಲ್ಲಿ ಕಣ್ಣು ಮುಚ್ಚಿ ಹೂಡಿಕೆ ಮಾಡಿ ಎಂದು ತಜ್ಞರು ಹೇಳುತ್ತಿದ್ದರು. ಹೀಗಿದ್ದರೂ, ಇತ್ತೀಚೆಗೆ ಏಷ್ಯನ್‌ ಪೇಂಟ್ಸ್‌ ಷೇರಿನ ದರದಲ್ಲಿ ಭಾರಿ ಇಳಿಕೆಯಾಗಿದೆ. ಇದಕ್ಕೆ ಕಾರಣವೇನು? ಷೇರು ಮಾರುಕಟ್ಟೆ ತಜ್ಞರಾದ ಪ್ರಿಯಾರಾಮ್‌ ಬಿಂಡಿಗನವಿಲೆ ಅವರು ಇದನ್ನು ವಿವರಿಸಿದ್ದಾರೆ. ಮಾರುಕಟ್ಟೆಯಲ್ಲಿ ಉಂಟಾಗಿರುವ ಸ್ಪರ್ಧೆ, ಇಥಿಯೋಪಿಯಾದ ಕರೆನ್ಸಿಯ ಮೌಲ್ಯ ಕುಸಿತ, ಕಚ್ಚಾ ವಸ್ತುಗಳ ಬೆಲೆ ಏರಿಕೆಯ ಪರಿಣಾಮ ಏಷ್ಯನ್‌ ಪೇಂಟ್ಸ್‌ ಷೇರಿನ ದರ ಇಳಿಕೆಯಾಗಿದೆ. ಹೀಗಿದ್ದರೂ, ಈಗಲೂ ಏಷ್ಯನ್‌ ಪೇಂಟ್ಸ್‌ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದ್ದು, ಲಾಭಾಂಶವನ್ನು ಹೆಚ್ಚಿಸಿಕೊಳ್ಳಲು ಕಂಪನಿ ಗ್ರಾಮೀಣ ಪ್ರದೇಶದ ಮಾರುಕಟ್ಟೆಯಲ್ಲಿ ವಹಿವಾಟು ವಿಸ್ತರಿಸಲು ಯತ್ನಿಸಿದೆ ಎಂದು ವಿವರಿಸಿದ್ದಾರೆ.

ಈ ನಡುವೆ ರಿಲಯನ್ಸ್‌ ಇಂಡಸ್ಟ್ರೀಸ್‌ಗೆ 334 ಕೋಟಿ ರೂ.ಗಳ ದೊಡ್ಡ ಡೀಲ್‌ ಲಭಿಸಿದ್ದು, ಷೇರಿನ ದರದ ಮೇಲೆ ಸಕಾರಾತ್ಮಕ ಪ್ರಭಾವ ಬೀರುವ ನಿರೀಕ್ಷೆ ಇದೆ.

ಏಂಜೆಲ್‌ ವನ್‌ ಕಂಪನಿಯ ಹಿರಿಯ ಉಪಾಧ್ಯಕ್ಷ ಅಮರ್‌ ಡಿಯೊ ಸಿಂಗ್‌ ಅವರು 2025ರಲ್ಲಿ ಸ್ಟಾಕ್‌ ಮಾರ್ಕೆಟ್‌ ಸೂಚ್ಯಂಕಗಳು ಹೊಸ ಎತ್ತರಕ್ಕೆ ಏರಿಕೆಯಾಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಕಳೆದ ಸೆಪ್ಟೆಂಬರ್‌ ಬಳಿಕ ಜಿಡಿಪಿಯ ಮಂದಗತಿ, ಕಾರ್ಪೊರೇಟ್‌ ಕಂಪನಿಗಳ ದುರ್ಬಲ ಫಲಿತಾಂಶ, ಜಿಯೊಪಾಲಿಟಿಕಲ್‌ ಟೆನ್ಷನ್‌, ಯುಎಸ್‌ ಫೆಡರಲ್‌ ಪಾಲಿಸಿಗಳ ಪ್ರಭಾವದಿಂದ ಸ್ಟಾಕ್‌ ಮಾರ್ಕೆಟ್‌ ಇಂಡೆಕ್ಸ್‌ಗಳು ಕುಸಿತಕ್ಕೀಡಾಗುತ್ತು. ಇವೆಲ್ಲ ಹಿನ್ನಡೆಗಳ ಹೊರತಾಗಿಯೂ ಭಾರತದವು 2025ರಲ್ಲಿ ಇತರ ಎಮರ್ಜಿಂಗ್‌ ಮಾರ್ಕೆಟ್‌ಗಳನ್ನು ಹಿಂದಿಕ್ಕಿ ಉತ್ತಮ ಪರ್ಫಾಮೆನ್ಸ್‌ ನೀಡಲಿದೆ. ಲಾಂಗ್‌ ಟರ್ಮ್‌ ದೃಷ್ಟಿಯಿಂದ ಷೇರುಗಳಲ್ಲಿ ಹೂಡಿಕೆಗೆಇದು ಸಕಾಲ. ಮುಂದಿನ ಹತ್ತು ವರ್ಷಗಳ ಟಾರ್ಗೆಟ್‌ ಇಟ್ಟುಕೊಂಡು ಇನ್ವೆಸ್ಟ್‌ ಮಾಡುವವರು ಭವಿಷ್ಯದ ದಿನಗಳಲ್ಲಿ ಉತ್ತಮ ರಿಟರ್ನ್‌ ನಿರೀಕ್ಷಿಸಬಹುದು ಎನ್ನುತ್ತಾರೆ ಅವರು.

ಅಂದಹಾಗೆ ಹಲವು ಷೇರುಗಳು ಕಳೆದ ಒಂದು ವರ್ಷದಲ್ಲಿಯೇ ಕನಿಷ್ಠ ಮಟ್ಟಕ್ಕೆ ಬೆಲೆ ಇಳಿಕೆಯನ್ನು ದಾಖಲಿಸಿವೆ. ಡಿಸ್ಕೌಂಟ್‌ ದರದಲ್ಲಿ ಸಿಗುತ್ತಿರುವ ಇಂಥ ಷೇರುಗಳಲ್ಲಿ 12 ಷೇರುಗಳ ಲಿಸ್ಟ್‌ ಅನ್ನು ನೋಡೋಣ.

ಆಸ್ಟ್ರಾಲ್ ಕಂಪನಿಯ (Astral) ಷೇರಿನ ದರ 1654 ರೂ.ಗೆ ಇಳಿಕೆಯಾಗಿದೆ. ಇದು 52 ವಾರಗಳಲ್ಲಿನ ಕನಿಷ್ಠ ಮಟ್ಟವಾಗಿದೆ. IRCTC ಷೇರಿನ ದರ 779 ರೂ.ಗೆ ಇಳಿಕೆಯಾಗಿದೆ. ಇದು ಕೂಡ 52 ವಾರಗಳ ಕನಿಷ್ಠ ಮಟ್ಟದ ಸಮೀಪವಿದೆ. ಏಷ್ಯನ್‌ ಪೇಂಟ್ಸ್‌ ಷೇರಿನ ದರ 2,271 ರೂ.ಗೆ ಇಳಿಕೆಯಾಗಿದೆ. ಗೋದ್ರೇಜ್‌ ಕನ್‌ಸ್ಯೂಮರ್‌ ಷೇರಿನ ದರ 1,069 ರೂ.ಗೆ ತಗ್ಗಿದೆ. ನೆಸ್ಲೆ ಇಂಡಿಯಾ ಷೇರು ಈಗ 2,166 ರೂ.ಗೆ ಇಳಿದಿದೆ. ರಿಲಾಕ್ಸೊ ಫುಟ್‌ವೇರ್ಸ್‌ ಷೇರಿನ ದರ 623 ರೂ.ಗೆ ತಗ್ಗಿದೆ. ಬರ್ಜರ್‌ ಪೇಂಟ್ಸ್‌ ಷೇರು 438 ರೂ.ಗೆ ಸಿಗುತ್ತಿದೆ. ಮದರ್ಸನ್‌ ವೈರಿಂಗ್‌ ಷೇರು 58 ರೂ.ಗೆ ದೊರೆಯುತ್ತದೆ. ಪಿಆಂಡ್‌ಜಿ ಹೈಜಿನ್‌ ಷೇರಿನ ದರ 14,568 ರೂ.ಗೆ ಇಳಿಕೆಯಾಗಿದೆ. ಹ್ಯಾಪಿಯೆಸ್ಟ್‌ ಮೈಂಡ್ಸ್‌ ಕಂಪನಿಯ ಷೇರಿನ ದರ 700 ರೂ.ಗೆ ತಗ್ಗಿದೆ. ಹಾಗೂ ಆಲ್‌ಕುಲ್‌ ಅಮೈನ್ಸ್‌ ಷೇರಿನ ದರ 1,834 ರೂ.ಗೆ ಇಳಿದಿದೆ. ಇವೆಲ್ಲವೂ 52 ವಾರಗಳ ಕನಿಷ್ಠ ದರದ ಆಸುಪಾಸಿನಲ್ಲಿ ಇರುವುದರಿಂದ ಹೂಡಿಕೆದಾರರು ಪರಿಶೀಲಿಸಬಹುದಾಗಿದೆ

ಇಟಿ ಮನಿ ಪ್ರಕಾರ ಕಳೆದ ಒಂದು ವರ್ಷದಲ್ಲಿ ಹೆಚ್ಚು ಆದಾಯ ನೀಡಿರುವ ಟಾಪ್‌ 5 ಸ್ಟಾಕ್ಸ್‌ಗಳನ್ನು ನೋಡೋಣ.

  • ಚೋಳಮಂಡಲಂ ಷೇರು ಕಳೆದ ಒಂದು ವರ್ಷದಲ್ಲಿ ಹೂಡಿಕೆದಾರರಿಗೆ 42% ಆದಾಯ ಕೊಟ್ಟಿದೆ.
  • ಎಯು ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ ಷೇರು, ಹೂಡಿಕೆದಾರರಿಗೆ 41% ಆದಾಯ ನೀಡಿದೆ.
  • ಯುಟಿಐ ಅಸೆಟ್‌ ಮ್ಯಾನೇಜ್‌ ಮೆಂಟ್‌ ಷೇರಿ, ಹೂಡಿಕೆದಾರರಿಗೆ ಕಳೆದೊಂದು ವರ್ಷದಲ್ಲಿ 31% ಆದಾಯ ನೀಡಿದೆ.
  • ಮುತ್ತೂಟ್‌ ಫೈನಾನ್ಸ್‌ 30% ಆದಾಯವನ್ನು ಕಳೆದೊಂದು ವರ್ಷದಲ್ಲಿ ಷೇರುದಾರರಿಗೆ ಕೊಟ್ಟಿದೆ.‌
  • ಬಜಾಜ್‌ ಫೈನಾನ್ಸ್‌ 29% ರಿಟರ್ನ್‌ ಕೊಟ್ಟಿದೆ.

ಈ ಸುದ್ದಿಯನ್ನೂ ಓದಿ: Stock Market: ಕೊನೆಗೂ ಸೆನ್ಸೆಕ್ಸ್‌, ನಿಫ್ಟಿ ಕುಸಿತಕ್ಕೆ ಬ್ರೇಕ್‌, ಎನ್‌ಟಿಪಿಸಿ ಗ್ರೀನ್‌ ಎನರ್ಜಿ ಐಪಿಒ ಶುರು