Thursday, 12th December 2024

ಜೈಪುರ ಹೆರಿಟೇಜ್ ಮಹಾನಗರ ಪಾಲಿಕೆ ಮೇಯರ್ ಮುನೇಶ್ ಗುರ್ಜರ್ ಅಮಾನತು

ಜೈಪುರ: ಭೂ ದಾಖಲೆಗಳ ವಿತರಣೆಗೆ ಸಂಬಂಧಿಸಿದ ಲಂಚ ಪ್ರಕರಣದಲ್ಲಿ ಪತಿಯನ್ನು ಬಂಧಿಸಿದ ನಂತರ ರಾಜಸ್ಥಾನ ಸರ್ಕಾರವು ಜೈಪುರ ಹೆರಿಟೇಜ್ ಮಹಾ ನಗರ ಪಾಲಿಕೆ ಮೇಯರ್ ಮುನೇಶ್ ಗುರ್ಜರ್ ಅವರನ್ನು ಅಮಾನತುಗೊಳಿಸಿದೆ.

ರಾಜ್ಯ ಸ್ಥಳೀಯ ಸ್ವಯಂ ಆಡಳಿತ ಇಲಾಖೆ ಶನಿವಾರ ತಡರಾತ್ರಿ ಈ ಆದೇಶ ಹೊರಡಿಸಿದೆ.

ಮೇಯರ್ ಅವರ ಪತಿ ಸುಶೀಲ್ ಗುಜರ್ರ್ ಮತ್ತು ಇಬ್ಬರು ಆರೋಪಿತ ಮಧ್ಯವರ್ತಿಗಳಾದ ನಾರಾಯಣ್ ಸಿಂಗ್ ಮತ್ತು ಅನಿಲ್ ದುಬೆ ಅವರನ್ನು ಶುಕ್ರವಾರ ರಾತ್ರಿ ಭ್ರಷ್ಟಾಚಾರ ನಿಗ್ರಹ ದಳವು ಭೂ ಗುತ್ತಿಗೆ ನೀಡುವ ಬದಲು 2 ಲಕ್ಷ ರೂಪಾಯಿ ಲಂಚ ಪಡೆದ ಆರೋಪದ ಮೇಲೆ ಬಂಧಿಸಿದೆ.

ನಂತರ ಗುರ್ಜರ್ ಅವರ ಮನೆಯಲ್ಲಿ ಶೋಧ ನಡೆಸಿದಾಗ 40 ಲಕ್ಷ ರೂಪಾಯಿ ನಗದು ಹಾಗೂ ಗುತ್ತಿಗೆಯ ಕಡತ ಪತ್ತೆಯಾಗಿದೆ. ಅಲ್ಲದೆ, ನಾರಾಯಣಸಿಂಗ್ ಅವರ ಮನೆಯಲ್ಲಿ 8 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ.

ಅಮಾನತು ಆದೇಶದಲ್ಲಿ, ಸ್ಥಳೀಯ ಸ್ವಯಂ ಸರ್ಕಾರಿ ಇಲಾಖೆ ನಿರ್ದೇಶಕ ಮತ್ತು ವಿಶೇಷ ಕಾರ್ಯದರ್ಶಿ ಹೃದೇಶ್ ಕುಮಾರ್ ಶರ್ಮಾ ಅವರು ಪ್ರಕರಣದಲ್ಲಿ ಪ್ರಾಥಮಿಕವಾಗಿ ಭಾಗಿಯಾಗಿರುವ ಶಂಕೆಯಿರುವುದರಿಂದ ತನಿಖೆ ಪೂರ್ಣಗೊಳ್ಳುವವರೆಗೆ ಮೇಯರ್ ಅವರನ್ನು ಅವರ ಸ್ಥಾನದಿಂದ ಅಮಾನತುಗೊಳಿಸಲಾಗಿದೆ ಎಂದು ಹೇಳಿದ್ದಾರೆ.