Thursday, 12th December 2024

ಪ್ರಾದೇಶಿಕ ಭಾಷೆಯಲ್ಲಿ ವೈದ್ಯಕೀಯ ಕೋರ್ಸ್ ಬೋಧನೆ ಮಾನ್ಯ ಮಾಡಲ್ಲ: ಎನ್‌ಎಂಸಿ

ನವದೆಹಲಿ: ಮಧ್ಯಪ್ರದೇಶ ಸರ್ಕಾರ ವೈದ್ಯಕೀಯ ಕೋರ್ಸ್ (ಎಂಬಿಬಿಎಸ್) ಗಳನ್ನು ಪ್ರಾದೇಶಿಕ ಭಾಷೆಯಲ್ಲಿ ಬೋಧಿಸುವ  ಘೋಷಣೆಯ ಬೆನ್ನಲ್ಲೇ ಎನ್‌ಎಂಸಿ ಈ ರೀಟಿಯ ಯೋಜನೆಗಳನ್ನು ಮಾನ್ಯ ಮಾಡುವುದಿಲ್ಲ ಎಂದು ಹೇಳಿದೆ.

ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ವೈದ್ಯಕೀಯ ಶಿಕ್ಷಣ ನಿಯಂತ್ರಕವಾಗಿದ್ದು, ತನ್ನ ನಿಯಮಗಳ ಅಡಿಯಲ್ಲಿ ಮಧ್ಯಪ್ರದೇಶ ಸರ್ಕಾರದ ಘೋಷಣೆ ಯನ್ನು ಮಾನ್ಯ ಮಾಡುವುದಿಲ್ಲ ಹಾಗೂ ಇಂಗ್ಲಿಷ್ ಹೊರತಾಗಿ ಬೇರೆ ಭಾಷೆಗಳಲ್ಲಿ ವೈದ್ಯಕೀಯ ಕೋರ್ಸ್ ಗಳಿಗೆ ಅನುಮತಿ ನೀಡುವ ತಿದ್ದುಪಡಿ ಮಾಡುವ ಯೋಜನೆಗಳಿಲ್ಲ ಎಂದು ಸ್ಪಷ್ಟಪಡಿಸಿ.

ಮಧ್ಯಪ್ರದೇಶ ಸರ್ಕಾರದ ನಿರ್ಧಾರದ ಬಳಿಕ ವೈದ್ಯಕೀಯ ಕೋರ್ಸ್ ಗಳನ್ನು ಹಿಂದಿ ಮತ್ತು ಇತರ ಪ್ರಾದೇಶಿಕ ಭಾಷೆಗಳಲ್ಲಿ ನೀಡುವ ಇಂಗಿತವನ್ನು ಉತ್ತರ ಪ್ರದೇಶ ಸರ್ಕಾರವೂ ಪ್ರಕಟಿಸಿತ್ತು.

ಸೆ.14 ರಂದು ಹಿಂದಿ ದಿವಸ್ ಅಂಗವಾಗಿ ಮಾತನಾಡಿದ್ದ ಮಧ್ಯಪ್ರದೇಶದ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್, ಅರೆವೈದ್ಯಕೀಯ ಕೋರ್ಸ್ ಗಳನ್ನು ಹೊರತು ಪಡಿಸಿ ವೈದ್ಯಕೀಯ ಕೋರ್ಸ್ ಗಳನ್ನು ಹಿಂದಿಯಲ್ಲಿ ಪರಿಚಯಿ ಸುವುದು ಹೇಗೆ ಎಂಬುದನ್ನು ತೀರ್ಮಾನಿಸಲು ಸಮಿತಿ ರಚನೆ ಮಾಡಿರುವುದಾಗಿ ಹೇಳಿದ್ದರು.

ಎನ್ ಎಂಸಿಯ ಪದವಿಪೂರ್ವ ವೈದ್ಯಕೀಯ ಶಿಕ್ಷಣ ಮಂಡಳಿಯ ಅಧ್ಯಕ್ಷರಾದ ಅರುಣಾ ವಿ ವಾಣಿಕರ್, ಈ ರೀತಿಯ ಪ್ರಸ್ತಾವನೆಯೊಂದಿಗೆ ಯಾವ ರಾಜ್ಯ ಸರ್ಕಾರವೂ ಆಯೋಗವನ್ನು ಸಂಪರ್ಕಿಸಿಲ್ಲ, ಅದು ಕಾರ್ಯ ಸಾಧುವೂ ಅಲ್ಲ ಎಂದು ಹೇಳಿದ್ದಾರೆ.

ಎಂಬಿಬಿಎಸ್ ನ್ನು ಇಂಗ್ಲೀಷ್ ನಲ್ಲಿ ಹೊರತುಪಡಿಸಿ ಬೇರೆ ಯಾವುದೇ ಭಾಷೆಗಳಲ್ಲಿ ಬೋಧಿಸುವುದಕ್ಕೆ ನಿಯಮಗಳು ಅವಕಾಶ ನೀಡುವುದಿಲ್ಲ, ಈಗಿರುವ ನಿಯಮ ಗಳನ್ನು ಬದಲಾವಣೆ ಮಾಡುವ ಯೋಜನೆಗಳೂ ಇಲ್ಲ. ಒಂದು ವೇಳೆ ಯಾವುದೇ ರಾಜ್ಯ ಸರ್ಕಾರಗಳು ವೈದ್ಯಕೀಯ ಕೋರ್ಸ್ ಗಳನ್ನು ಹಿಂದಿ ಅಥವಾ ಇನ್ನಿತರ ಭಾಷೆಗಳಲ್ಲಿ ಪರಿಚಯಿಸುವುದಕ್ಕೆ ಯತ್ನಿಸಿದರೂ ಎನ್‌ಎಂಸಿ ಅದನ್ನು ಮಾನ್ಯ ಮಾಡುವುದಿಲ್ಲ” ಎಂದು ಹೇಳಿದ್ದಾರೆ.

ಇದಕ್ಕೆ ತದ್ವಿರುದ್ಧವಾಗಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಉಲ್ಲೇಖಿಸಿದ್ದು, ಅದರಲ್ಲಿ ತಾಂತ್ರಿಕ ಶಿಕ್ಷಣ, ವೈದ್ಯಕೀಯ, ಕಾನೂನು, ಇಂಜಿನಿಯರಿಂಗ್ ಸೇರಿ ದಂತೆ ಎಲ್ಲಾ ಕೋರ್ಸ್ ಗಳನ್ನೂ ಮಾತೃಭಾಷೆಯಲ್ಲಿ ಬೋಧಿಸುವ ಅಂಶಗಳನ್ನೊಳಗೊಂಡಿದೆ ಎಂದು ಕೇಂದ್ರ ಶಿಕ್ಷಣ ಸಚಿವಾಲಯದಲ್ಲಿನ ಮೂಲಗಳು ಹೇಳಿದೆ.

ವೈದ್ಯಕೀಯ ವಿಷಯವನ್ನು ಮಾತೃಭಾಷೆಯಲ್ಲಿ ಕಲಿಸುವುದು ಕಾರ್ಯಸಾಧುವಲ್ಲ ಎಂಬ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 2016 ರಲ್ಲಿ ಮಧ್ಯಪ್ರದೇಶದ ಅಟಲ್ ಬಿಹಾರಿ ವಾಜಪೇಯಿ ಹಿಂದಿ ವಿವಿ ಇಂಜಿನಿಯರಿಂಗ್ ಹಾಗೂ ಎಂಬಿಬಿಎಸ್ ಕೋರ್ಸ್ ಗಳನ್ನು ಹಿಂದಿಯಲ್ಲಿ ಪ್ರಾರಂಭಿಸುವುದಾಗಿ ಘೋಷಿಸಿತ್ತು. ಆದರೆ ವೈದ್ಯಕೀಯ ಪರಿಷತ್ ನಿಂದ ಅನುಮತಿ ಸಿಗದ ಕಾರಣ ವೈದ್ಯಕೀಯ ಕೋರ್ಸ್ ಗಳನ್ನು ಹಿಂದಿಯಲ್ಲಿ ಪ್ರಾರಂಭಿಸಲು ಆಗಲಿಲ್ಲ.