ಕೋಲ್ಕತ್ತಾ: ಕಳೆದ ತಿಂಗಳು ನಡೆದ ಕಾರ್ಯಕ್ರಮಮೊಂದರಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ನಟ, ಬಿಜೆಪಿ ನಾಯಕ ಮಿಥುನ್ ಚಕ್ರವರ್ತಿ (Mithun Chakraborty) ವಿರುದ್ಧ ಬಿಧಾನನಗರ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಅ. 27ರಂದು ಕೋಲ್ಕತ್ತಾದ ಸಾಲ್ಟ್ ಲೇಕ್ನಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಮಿಥುನ್ ಚಕ್ರವರ್ತಿ ಪ್ರಚೋದನಕಾರಿ ಭಾಷಣ ಮಾಡಿದ್ದರು ಎಂದು ದೂರಲಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದ ಮಿಥುನ್ ಚಕ್ರವರ್ತಿ ಅವರು ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುವ ವೇಳೆ ಆಕ್ಷೇಪಾರ್ಹ ಪದಗಳನ್ನು ಬಳಸಿದ್ದರು ಎನ್ನಲಾಗಿದೆ. ಎಫ್ಐಆರ್ನಲ್ಲಿ, ಮಿಥುನ್ ಅವರ ಕೆಲ ಮಾತುಗಳು ಪ್ರಚೋದನಕಾರಿಯಾಗಿದ್ದು, ಇವು ಕಾನೂನು ಮತ್ತು ಸುವ್ಯವಸ್ಥೆ ಹದಗೆಡಲು ಕಾರಣವಾಗಬಹುದು ಎಂದು ಆರೋಪಿಸಲಾಗಿದೆ.
Kolkata, West Bengal: BJP leader and MLA Agnimitra Paul on the FIR filed by the ruling party in West Bengal against BJP leader Mithun Chakraborty, says, "Mithun da, we have reacted to our Mithun da, but the action was taken by others. Every action has an equal and opposite… pic.twitter.com/PB5jLcR1nT
— IANS (@ians_india) November 6, 2024
ಮಿಥುನ್ ಚಕ್ರವರ್ತಿ ಹೇಳಿದ್ದೇನು?
ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಟಿಎಂಸಿ ಶಾಸಕ ಹುಮಾಯೂನ್ ಕಬೀರ್ ಅವರ ಕೋಮುವಾದಿ ಹೇಳಿಕೆಗಳನ್ನು ಉಲ್ಲೇಖಿಸಿದ ಮಿಥುನ್ ಚಕ್ರವರ್ತಿ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮತದಾನದಿಂದ ದೂರವಿರಲು ಕೇಸರಿ ಪಕ್ಷದ ಮತದಾರರನ್ನು ಬೆದರಿಸಲು ಯಾರೂ ಪ್ರಯತ್ನಿಸಬಾರದು ಎಂದು ಎಚ್ಚರಿಕೆ ನೀಡಿದ್ದರು. “ನಾನು ಅದನ್ನು ಮತ್ತೆ ಮತ್ತೆ ಹೇಳುತ್ತಿದ್ದೇನೆ. 2026ರ ಚುನಾವಣೆಯಲ್ಲಿ ಗೆಲ್ಲಲು ನಾವು ಏನು ಬೇಕಾದರೂ ಮಾಡುತ್ತೇವೆ. ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಕುಳಿತು ನಾನು ಇದನ್ನು ಹೇಳುತ್ತಿದ್ದೇನೆ – ನಾವು ಏನು ಬೇಕಾದರೂ ಮಾಡುತ್ತೇವೆ” ಎಂದು ಒತ್ತಿ ಹೇಳಿದ್ದರು. ಮುಂದುವರಿದು ʼʼಹಾಗೆ ಮಾಡಿದರೆ ನಾವು ನಿಮ್ಮನ್ನು ಕತ್ತರಿಸಿ ಎಸೆಯುತ್ತೇವೆʼʼ ಎಂದು ಹೇಳಿದ್ದರು.
ಮಿಥುನ್ ಚಕ್ರವರ್ತಿ ವಿರುದ್ಧ ದಾಖಲಾಗಿರುವ ಎಫ್ಐಆರ್ಗೆ ಪಶ್ಚಿಮ ಬಂಗಾಳದ ವಿಪಕ್ಷ ಬಿಜೆಪಿ ಕಟುವಾಗಿ ಪ್ರತಿಕ್ರಿಯಿಸಿದೆ. ಬಂಗಾಳ ಬಿಜೆಪಿ ಅಧ್ಯಕ್ಷ ಮತ್ತು ಕೇಂದ್ರ ಸಚಿವ ಸುಕಾಂತ ಮಜುಂದಾರ್ ಮಾತನಾಡಿ, ”ರಾಜ್ಯದ ವಿಫಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತೊಮ್ಮೆ ರಾಜಕೀಯ ಲಾಭ ಪಡೆಯಲು ಪೊಲೀಸ್ ಮತ್ತು ಆಡಳಿತವನ್ನು ಬಳಸಿಕೊಂಡು ಮಿಥುನ್ ಚಕ್ರವರ್ತಿ ಅವರನ್ನು ನಿಂದಿಸಲು ಮತ್ತು ಕಿರುಕುಳ ನೀಡಲು ಪ್ರಯತ್ನಿಸಿದ್ದಾರೆ. ರಾಜ್ಯದ ಕ್ರೂರ ಮತ್ತು ವಿಫಲ ಮುಖ್ಯಮಂತ್ರಿ ರಾಜಕೀಯ ಲಾಭ ಪಡೆಯಲು ಸುಳ್ಳು ಆರೋಪಗಳಲ್ಲಿ ಮಿಥುನ್ ಚಕ್ರವರ್ತಿಯನ್ನು ಸಿಲುಕಿಸಲು ಪ್ರಯತ್ನಿಸಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ” ಎಂದು ಕಿಡಿ ಕಾರಿದ್ದಾರೆ.
“ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದ್ದೇವೆ” ಎಂದು ಬಿಧಾನನಗರ ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಿಥುನ್ ಚಕ್ರವರ್ತಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ
ಇತ್ತೀಚೆಗೆ ಕೇಂದ್ರ ಸರ್ಕಾರ ಮಿಥುನ್ ಚಕ್ರವರ್ತಿ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರದಾನ ಮಾಡಿತ್ತು. ಚಲನಚಿತ್ರರಂಗಕ್ಕೆ ನೀಡುವ ಗಣನೀಯ ಕೊಡುಗೆಯನ್ನು ಪರಿಗಣಿಸಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ. ಇದು ದೇಶದ ಅತ್ಯುನ್ನತ ಚಲನಚಿತ್ರ ಪ್ರಶಸ್ತಿಯಾಗಿದೆ. 3 ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ಮಿಥುನ್ ಚಕ್ರವರ್ತಿ ಅವರು ಹಿಂದಿ ಮಾತ್ರವಲ್ಲಿದೆ ಬೆಂಗಾಲಿ, ಭೋಜ್ಪುರಿ, ಒಡಿಯಾ, ತೆಲುಗು, ಕನ್ನಡ ಮತ್ತು ತಮಿಳಿನ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Dadasaheb Phalke Award: ಮಿಥುನ್ ಚಕ್ರವರ್ತಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆ