Friday, 3rd January 2025

Money Tips: ಈ ಟಿಪ್ಸ್‌ ಫಾಲೋ ಮಾಡಿದ್ರೆ 2025ರಲ್ಲಿ ನೀವು ಶ್ರೀಮಂತರಾಗೋದು ಪಕ್ಕಾ

Money Tips

ಬೆಂಗಳೂರು: ಭರ್ಜರಿ ನಿರೀಕ್ಷೆ, ಕನಸುಗಳೊಂದಿಗೆ ಹೊಸ ವರ್ಷಕ್ಕೆ ಕಾಲಿಟ್ಟಿದ್ದೇವೆ (New Year). ಕಳೆದ ವರ್ಷ ಮಾಡಿದ ತಪ್ಪುಗಳನ್ನು ಸರಿಪಡಿಸಲು ಉತ್ತಮ ಅವಕಾಶ ನಮ್ಮ ಮುಂದಿದೆ. ಅದರಲ್ಲಿಯೂ ಆರ್ಥಿಕತೆಯ ವಿಚಾರದಲ್ಲಿ ಒಂದಷ್ಟು ಶಿಸ್ತು ರೂಢಿಸಿಕೊಳ್ಳಲು ಇದು ಸಕಾಲ. ಇದರಿಂದ ತುರ್ತು ಪರಿಸ್ಥಿತಿಯಲ್ಲಿ ಇತರರ ಮುಂದೆ ಹಣಕ್ಕಾಗಿ ಕೈಚಾಚ ಬೇಕಾದ ಪರಿಸ್ಥಿತಿ ಉದ್ಭವಿಸುವುದಿಲ್ಲ. ಇಂದಿನ ಉಳಿತಾಯವೇ ನಾಳೆಯ ಆದಾಯ ಎನ್ನುವ ಮಾತನ್ನೂ ಗಣನೆಗೆ ತೆಗೆದುಕೊಳ್ಳಬೇಕು. ಅಲ್ಲದೆ ಅನಗತ್ಯ ಖರ್ಚಿನಿಂದಲೇ ನಮ್ಮ ಬಹುತೇಕ ಆದಾಯ ಸೋರಿಕೆಯಾಗುತ್ತದೆ. ಇದಕ್ಕೆ ತಡೆ ಒಡ್ಡಿದರೆ ನಾವು ಅರ್ಧ ಗೆದ್ದಂತೆ. ಹೊಸ ವರ್ಷದಲ್ಲಿ ನೀವು ಕೆಲವು ಟಿಪ್ಸ್‌ ಫಾಲೋ ಮಾಡುವ ಸಂಕಲ್ಪ ಕೈಗೊಂಡರೆ ಆರ್ಥಿಕವಾಗಿ ಸಬಲರಾಗಬಹುದು . ಅದೇನು ಎನ್ನುವುದನ್ನು ನೋಡೋಣ (Money Tips).

ಬಜೆಟ್‌ ತಯಾರಿಸಿ

ಆರ್ಥಿಕ ಶಿಸ್ತು ರೂಢಿಸಿಕೊಳ್ಳಬೇಕು ಎಂದು ಚಿಂತಿಸುತ್ತಿದ್ದರೆ ನೀವು ಮೊದಲು ಮಾಡಬೇಕಾದ ಕಾರ್ಯ ಬಜೆಟ್‌ ತಯಾರಿ. ವರ್ಷದ ಬಜೆಟ್‌ ತಯಾರಿಸುವುದು ಕಷ್ಟವಾದರೆ ನೀವು ಮಾಸಿಕ ಬಜೆಟ್‌ ತಯಾರಿಸಿಕೊಳ್ಳಬಹುದು. ಕೈಗೆ ಎಷ್ಟು ಸಂಬಳ ಬರುತ್ತದೆ ಎನ್ನುವುದನ್ನು ಗಮನಿಸಿ ಬಜೆಟ್‌ ತಯಾರಿಸಿ. ತಿಂಗಳ ಆರಂಭದಲ್ಲೇ ಸಂಬಳದ ಮೊತ್ತವನ್ನು ಪ್ರತಿ ಖರ್ಚಿಗೆ ಇಷ್ಟೆಂದು ನಿರ್ಧರಿಸಿ. ಇದರಿಂದ ಅನಗತ್ಯ ಖರ್ಚನ್ನು ತಪ್ಪಿಸಬಹುದು. ಮಿಂಟ್‌ (Mint), ಪಾಕೆಟ್‌ಮನಿ (PocketGuard) ಇತ್ಯಾದಿ ಅಪ್ಲಿಕೇಷನ್‌ ಸಹಾಯದಿಂದಲೂ ನೀವು ಬಜೆಟ್‌ ತಯಾರಿಸಬಹುದು.

ಆರಂಭದಲ್ಲೇ ಹೂಡಿಕೆ ಮಾಡಿ

ಸೂಕ್ತ ಮತ್ತು ಪರಿಣಾಮಕಾರಿ ಹೂಡಿಕೆಯ ಮೂಲಕ ನೀವು ಶ್ರೀಮಂತರಾಗಬಹುದು. ಉಳಿತಾಯ ಮಾಡುವ ಜತೆಗೆ ಸುರಕ್ಷಿತ ಮಾರ್ಗದಲ್ಲಿ ಹೂಡಿಕೆ ಮಾಡುವುದು ಕೂಡ ಅತೀ ಮುಖ್ಯ. ಮ್ಯೂಚುವಲ್ ಫಂಡ್‌ಗಳು ಮತ್ತು ಸಾರ್ವಜನಿಕ ಭವಿಷ್ಯ ನಿಧಿಗಳು ಸೇರಿದಂತೆ ವಿವಿಧ ಉಳಿತಾಯ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬಹುದು. ಈಗ ಹೂಡಿಕೆಗೆ ಸಂಬಂಧಿಸಿದ ಮೊಬೈಲ್‌ ಅಪ್ಲಿಕೇಷನ್‌ಗಳೂ ಲಭ್ಯವಿದೆ. ಇದರ ಮೂಲಕ ಸರಳವಾಗಿ ಹೂಡಿಕೆ ಮಾಡಬಹುದಾಗಿದೆ.

ವಿಮೆ ಮಾಡಿಸಿ

ವಿಮೆ ಮಾಡಿಸಿದ್ದೀರಾ? ಇಲ್ಲ ಎಂದಾದರೆ ಈಗಲೇ ಮಾಡಿಸಿ. ಜೀವ ವಿಮೆ ಮತ್ತು ಆರೋಗ್ಯ ವಿಮೆ ಎರಡನ್ನೂ ಮಾಡಿಸುವುದು ಉತ್ತಮ. ನಾವು ಅಂದುಕೊಂಡಂತೆಯೇ ಜೀವನ ಸಾಗಬೇಕು ಎಂದಿಲ್ಲ. ಕೆಲವೊಮ್ಮೆ ಎದುರಾಗುವ ಅನಿರೀಕ್ಷಿತ ಘಟನೆಗಳು ಜೀವನದ ದಿಕ್ಕನ್ನೇ ಬದಲಾಯಿಸಿ ಬಿಡುತ್ತವೆ. ಹೀಗಾಗಿ ಪ್ರತಿಯೊಬ್ಬರೂ ಜೀವ ವಿಮೆ ಮಾಡಿಸುವುದು ಮುಖ್ಯ ಎನ್ನುತ್ತಾರೆ ಆರ್ಥಿಕ ತಜ್ಞರು. ಆರೋಗ್ಯ, ಜನರಲ್‌ ಇನ್ಶೂರೆನ್ಸ್‌ ಮುಂತಾದವು ನಿಮ್ಮ ಜೀವನಕ್ಕೆ ರಕ್ಷಣೆ ನೀಡುತ್ತವೆ. ಇತ್ತೀಚಿನ ದಿನಗಳಲ್ಲಿ ಆರೋಗ್ಯ ಕ್ಷೇತ್ರ ದುಬಾರಿಯಾಗುತ್ತಿದೆ. ಒಂದು ವೇಳೆ ಅನಾರೋಗ್ಯ ಕಾಡಿದರೆ ನೀವು ಅದುವರೆಗೆ ಉಳಿಸಿದ ಹಣವನ್ನೆಲ್ಲ ಚಿಕಿತ್ಸೆಗಾಗಿ ವ್ಯಯ ಮಾಡಬೇಕಾಗುತ್ತದೆ. ಅದೇ ಕಾರಣಕ್ಕೆ ವಿಮೆ ಆಯ್ಕೆಯಲ್ಲ; ಅದು ಒಂದು ಆವಶ್ಯಕತೆ ಎನ್ನಲಾಗುತ್ತಿದೆ.

ಎಮರ್ಜೆನ್ಸಿ ಫಂಡ್‌

ಜೀವನ ಎನ್ನುವುದು ಅನಿರೀಕ್ಷಿತಗಳ ಆಗರ ಎನ್ನುವ ಮಾತನ್ನು ನೀವು ಕೇಳೇ ಇರುತ್ತೀರಿ. ಕೆಲವೊಮ್ಮೆ ಇದು ನಿಮ್ಮ ಅನುಭವಕ್ಕೂ ಬಂದಿರಬಹುದು. ಇಲ್ಲಿ ಯಾವಾಗ, ಏನು ಸಂಭವಿಸುತ್ತದೆ ಎನ್ನುವುದನ್ನು ಮೊದಲೇ ನಿರೀಕ್ಷಿಸಲು ಸಾಧ್ಯವಿಲ್ಲ. ಹೀಗಾಗಿ ಎಮರ್ಜೆನ್ಸಿ ಫಂಡ್‌ ಹೊಂದಿರುವುದು ಅತ್ಯಗತ್ಯ. ಅಂದರೆ 4-5 ತಿಂಗಳ ಸಂಬಳದಷ್ಟು ಹಣ ನಿಮ್ಮ ಸೇವಿಂಗ್ ಅಕೌಂಟ್‌ನಲ್ಲಿ ಯಾವತ್ತೂ ಇರಬೇಕು. ಅನಿರೀಕ್ಷಿತ ಅಗತ್ಯಗಳಿಗೆ ಇದು ನೆರವಾಗುತ್ತದೆ. ತಕ್ಷಣ ದುಡ್ಡು ಕೈಗೆ ಬರುವಂತಿರಬೇಕು.

ಇಎಂಐ ಸರಿಯಾಗಿ ಪಾವತಿಸಿ

ಸಾಲಗಳನ್ನು ಸರಿಯಾಗಿ ನಿರ್ವಹಿಸುವುದು ಕೂಡ ಮುಖ್ಯ. ಅಂದರೆ ನಿಯಮಿತವಾಗಿ ಇಎಂಐ ಪಾವತಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ಜತೆಗೆ ಆರ್ಥಿಕ ತಜ್ಞರು ಸೂಚಿಸುವ ಶೇ. 40 ಇಎಂಐ ನಿಯಮವನ್ನು ಪಾಲಿಸಿ. ಅಂದರೆ ನಿಮ್ಮ ಒಟ್ಟು ಮಾಸಿಕ ಇಎಂಐಗಳು ಆದಾಯದ ಶೇ. 40 ಅನ್ನು ಮೀರುವುದಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಅದಕ್ಕಿಂತ ಹೆಚ್ಚು ಸಾಲ ಮಾಡಬೇಡಿ. ಇನ್ನು ಸಮಯಕ್ಕೆ ಸರಿಯಾಗಿ ಬಿಲ್‌ಗಳನ್ನೆಲ್ಲ ಪಾವತಿಸಿ. ಉದಾಹರಣೆಗೆ ಕರೆಂಟ್‌, ನೀರು ಬಿಲ್‌. ಅಲ್ಲದೆ ಹೊರಗಡೆ ಹೋಗುವಾಗ ವಾಹನದ ಅಗತ್ಯ ದಾಖಲೆಗಳು ನಿಮ್ಮ ಬಳಿಯೇ ಇರಲಿ. ಇದರಿಂದ ದಂಡವನ್ನು ತಪ್ಪಿಸಬಹುದು. ಆ ಮೂಲಕ ಸಾಕಷ್ಟು ಹಣ ಉಳಿತಾಯ ಮಾಡಬಹುದು.

ಬೇಕಾಬಿಟ್ಟಿ ಖರೀದಿಸಬೇಡಿ

ಯಾವುದೇ ವಸ್ತು ಖರೀದಿಸಬೇಕಿದ್ದರೂ ಅದು ತೀರಾ ಅನಿವಾರ್ಯವೇ ಎನ್ನುವುದನ್ನು ಹತ್ತಾರು ಬಾರಿ ಚಿಂತಿಸಿ. ಆಫರ್‌ ಇದೆ ಎನ್ನುವ ಕಾರಣಕ್ಕೆ ಅನಗತ್ಯ ವಸ್ತುಗಳನ್ನು ಖರೀದಿಸಿ ಗುಡ್ಡೆ ಹಾಕಬೇಡಿ. ಇತ್ತೀಚೆಗಂತೂ ಆನ್‌ಲೈನ್‌ ಶಾಪಿಂಗ್‌ ತಾಣಗಳು ಆಗಾಗ ದರ ಕಡಿತ ಮಾರಾಟದ ಕೊಡುಗೆ ಘೋಷಿಸುತ್ತವೆ. ಈ ಸಮಯದಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸಿ. ಆ ಮೂಲಕ ಕೊಡುಗೆಯನ್ನು ಸದುಪಯೋಗಪಡಿಸಿಕೊಳ್ಳಿ.

ಬ್ರ್ಯಾಂಡೆಡ್‌ ಬಟ್ಟೆಯೇ ಬೇಕೆಂದಿಲ್ಲ

ಬ್ರ್ಯಾಂಡೆಡ್‌ ಬಟ್ಟೆಗಳು ಕಂಫರ್ಟ್‌ ಫೀಲ್‌ ಕೊಡುತ್ತವೆ. ಜತೆಗೆ ನವೀನ ಮಾದರಿಗಳಲ್ಲಿ ಲಭ್ಯವಿರುತ್ತವೆ. ಹಾಗಂತ ಎಲ್ಲ ಬಟ್ಟೆಗಳು ಬ್ರ್ಯಾಂಡೆಡ್‌ ಆಗಿರಬೇಕೆಂದು ಬಯಸುವುದು ನಿಮ್ಮ ಜೇಬಿಗೆ ಹೊರೆಯಾಗುತ್ತದೆ. ಪ್ರತಿ ನಿತ್ಯದ ಬಳಕೆಗೆ ಸಾಧಾರಣ ಬಟ್ಟೆಗಳನ್ನು ಬಳಸಿ. ಮೇಲ್ನೋಟಕ್ಕೆ ಬ್ರ್ಯಾಂಡೆಡ್‌ ಬಟ್ಟೆಗಳಂತೆ ಕಾಣುವ ಆದರೆ ಕಡಿಮೆ ದರ ಉಡುಪುಗಳು ಲಭ್ಯ. ಅವನ್ನು ಖರೀದಿಸಿ. ಅಪರೂಪಕ್ಕೆ ಬಳಸುವ, ಫಂಕ್ಷನ್‌ ವೇರ್‌ಗಳಿಗೆ ಬ್ರ್ಯಾಂಡೆಡ್‌ ಬಟ್ಟೆಯ ಮೊರೆ ಹೋಗಬಹುದು.

ನಿಯಮಿತವಾಗಿ ಉಳಿತಾಯ ಮಾಡಿ

ಆರ್ಥಿಕ ಸಮಸ್ಯೆಗೆ ಬಹು ಮುಖ್ಯ ಕಾರಣ ನಿಯಮಿತವಾಗಿ ಉಳಿತಾಯ ಮಾಡದಿರುವುದು. ಉದ್ಯೋಗಕ್ಕೆ ಸೇರಿದ ಆರಂಭದಿಂದಲೇ ಉಳಿತಾಯ ಮಾಡುವ ಹವ್ಯಾಸ ರೂಢಿಸಿಕೊಳ್ಳಬೇಕು. ಕಾಲ ಇನ್ನೂ ಮಿಂಚಿಲ್ಲ. ಇನ್ನಾದರೂ ನಿಯಮಿತವಾಗಿ ಉಳಿತಾಯ ಮಾಡುವತ್ತ ಗಮನ ಹರಿಸಿ. ನಿಯಮಿತ ಉಳಿತಾಯವು ಆರ್ಥಿಕ ಬೆಳವಣಿಗೆಗೆ ಕಾರಣವಾಗುತ್ತದೆ. ಪ್ರತಿ ತಿಂಗಳು ಕನಿಷ್ಠ ಪಕ್ಷ ಸಂಬಳದ ಶೇ. 20ರಷ್ಟನ್ನಾದರೂ ಉಳಿತಾಯ ಮಾಡುವತ್ತ ಗಮನ ಹರಿಸಿ. ಉಳಿತಾಯಕ್ಕಾಗಿ ಬೇಕಿದ್ದರೆ ನೀವು ಇನ್ನೊಂದು ಬ್ಯಾಂಕ್‌ ಅಕೌಂಟ್‌ ತೆರೆಯಬಹುದು. ಯಾವುದೇ ಕಾರಣಕ್ಕೆ ಈ ಅಕೌಂಟ್‌ನ ಹಣ ಬಳಬೇಡಿ.

ನಿವೃತ್ತಿ ಜೀವನದ ಯೋಜನೆ ರೂಪಿಸಿ

ಈಗಿನಿಂದಲೇ ನಿವೃತ್ತಿ ನಂತರದ ಜೀವನಕ್ಕಾಗಿ ತಯಾರಾಗಿ. ಹೌದು, ಯಾವುದೇ ಆದಾಯ ಮಾರ್ಗ ಇಲ್ಲದಾಗ ಒತ್ತಡ ರಹಿತವಾಗಿ ಬದುಕಲು ಮತ್ತು ಅಗತ್ಯಗಳನ್ನು ಪೂರೈಸಲು ಇದು ನೆರವಾಗುತ್ತದೆ. ಪ್ರತಿ ತಿಂಗಳು ನಿರ್ದಿಷ್ಟ ಮೊತ್ತವನ್ನು ನಿವೃತ್ತಿ ಖಾತೆಗಳಿಗೆ ಜಮೆ ಮಾಡಿ. ಸ್ವಯಂಪ್ರೇರಿತ ಭವಿಷ್ಯ ನಿಧಿ (VPF) ಅಥವಾ ಪಿಎಫ್‌ನಂತಹ ಯೋಜನೆಗಳಲ್ಲಿ ಹೂಡಿಕೆ ಮಾಡಿ. ಜತೆಗೆ ಅಂಚೆ ಕಚೇರಿಯಲ್ಲಿ ಲಭ್ಯವಿರುವ ವಿವಿಧ ಯೋಜನೆಗಳತ್ತ ಗಮನ ಹರಿಸಿ.

ಹೊಸ ವರ್ಷದ ಮೊದಲ ದಿನ ನಿಮ್ಮ ಕನಸಿಗೆ ಭದ್ರ ಅಡಿಪಾಯ ಹಾಕಲಿ.

ಈ ಸುದ್ದಿಯನ್ನೂ ಓದಿ: Money tips: 2025ರಲ್ಲಿ ಶ್ರೀಮಂತರಾಗುವುದು ಹೇಗೆ? ಇಲ್ಲಿದೆ ಟಿಪ್ಸ್‌