ನವ ದೆಹಲಿ: ನಾವು ದಿನನಿತ್ಯ ಸೇವಿಸುವ ಆಹಾರಕ್ಕೆ ಕೆಲವೊಂದು ಉತ್ತಮ ಪದಾರ್ಥಗಳನ್ನು ಸೇರಿಸಿಕೊಳ್ಳುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅದರಲ್ಲೂ ಹಣ್ಣು, ತರಕಾರಿ, ಸೊಪ್ಪು ಸೇವನೆಗೆ ನಾವು ಹೆಚ್ಚು ಒತ್ತನ್ನು ನೀಡಬೇಕು ಎನ್ನುತ್ತಾರೆ ತಜ್ಞರು. ಮುಖ್ಯವಾಗಿ ತರಕಾರಿ ಅಂದಾಗ ನೆನಪಾಗುವುದು ನುಗ್ಗೆ ಕಾಯಿ ಮತ್ತು ಅದರ ಸೊಪ್ಪು (Health Benefits of Moringa). ಪ್ರಾಚೀನ ಕಾಲದಿಂದಲೂ ಇದರ ಬಳಕೆ ಇದೆ. ಹಲವು ರೀತಿಯ ಪೋಷಕಾಂಶ ಹೊಂದಿರುವ ತರಕಾರಿ ಮತ್ತು ಸೊಪ್ಪುಗಳಲ್ಲಿ ಇದು ಕೂಡ ಪ್ರಮುಖವಾದುದು.
ಕೇವಲ ನುಗ್ಗೆಕಾಯಿ ಮಾತ್ರವಲ್ಲದೆ, ಅದರ ಸೊಪ್ಪು, ಬೀಜ ಔಷಧೀಯ ಗುಣವನ್ನು ಹೊಂದಿದೆ. ಇವೆರಡನ್ನು ನಮ್ಮ ಆಹಾರ ಕ್ರಮದಲ್ಲಿ ಬಳಸಿಕೊಂಡರೆ ನಮ್ಮ ಆರೋಗ್ಯ ಕಾಪಾಡಬಹುದು. ಇದರಿಂದ ವಿವಿಧ ಬಗೆಯ ತಿನಿಸು ತಯಾರಿಸಿ ಬಳಸಬಹುದು. ನುಗ್ಗೆಯಿಂದ ಯಾವೆಲ್ಲ ಖಾದ್ಯ ತಯಾರೊಸಬಹುದು ಎನ್ನುವ ಮಾಹಿತಿ ಇಲ್ಲಿದೆ.
ನುಗ್ಗೆ ಚಹಾ
ಬಿಸಿ ನೀರಿಗೆ ಎರಡು ಚಮಚ ಟೀ ಪುಡಿ, ಸಕ್ಕರೆ ಸೇರಿಸಿ ಅದಕ್ಕೆ ಸ್ವಲ್ಪಪ್ರಮಾಣದ ಒಣಗಿದ ನುಗ್ಗೆ ಎಲೆಗಳನ್ನು ಬೆರೆಸಿ ಕುದಿಸಿ. ಬಳಿಕ ರುಚಿಗೆ ನಿಂಬೆ ರಸ ಅಥವಾ ಜೇನುತುಪ್ಪವನ್ನು ಸೇರಿಸಿ. ಈ ಟೀ ಕುಡಿದರೆ ನಿಮ್ಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುವುದರೊಂದಿಗೆ ಅಗತ್ಯ ಪೋಷಕಾಂಶಗಳನ್ನು ಸಿಗುತ್ತದೆ.
ನುಗ್ಗೆ ಸೊಪ್ಪಿನ ಸೂಪ್
ಮೊದಲು ಒಂದು ಪಾತ್ರೆಗೆ ಎಣ್ಣೆ ಹಾಕಿ ಅದಕ್ಕೆ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ, ಶುಂಠಿ, ಈರುಳ್ಳಿ, ಟೊಮೆಟೋ ಹಾಕಿ ಚೆನ್ನಾಗಿ ಪ್ರೈ ಮಾಡಿ. ಅದೇ ಬಾಣಲೆಗೆ ನುಗ್ಗೆಸೊಪ್ಪನ್ನು ಹಾಕಿ ಬಾಡಿಸಿ. ಬಳಿಕ ಅದೆಲ್ಲವನ್ನು ರುಬ್ಬಿಕೊಂಡು ಸಾಕಷ್ಟು ನೀರು, ಉಪ್ಪು, ಕಾಳು ಮೆಣಸಿನಪುಡಿ ಹಾಕಿ ಚೆನ್ನಾಗಿ ಕುದಿಸಿದರೆ ಸೂಪ್ ರೆಡಿ. ಇದನ್ನುಬಿಸಿ ಬಿಸಿಯಾಗಿ ಸವಿದರೆ ದೇಹಕ್ಕೆ ಹಿತ.
ಮೊರಿಂಗಾ ಪೆಸ್ಟೊ
ಮೊರಿಂಗಾ ಪೆಸ್ಟೋ ತಯಾರಿಸಲು ತಾಜಾ ತುಳಸಿ ಎಲೆ, ಒಂದು ಚಮಚ ಮೊರಿಂಗಾ ಪುಡಿ, ಪಾರ್ಮೆಸನ್ ಚೀಸ್, ಬೆಳ್ಳುಳ್ಳಿ ಮತ್ತು ಆಲಿವ್ ಎಣ್ಣೆಯನ್ನು ಹಾಕಿ ಸರಿಯಾಗಿ ಮಿಶ್ರಣ ಮಾಡಿ. ಬಳಿಕ ಟೊಮೆಟೊ, ಸೌತೆಕಾಯಿ ಹಾಗೂ ಇತರ ತರಕಾರಿ ಹಾಕಿ ಮಿಶ್ರಣ ಮಾಡಿ ಸವಿಯಬಹುದು.
ನುಗ್ಗೆಸೊಪ್ಪಿನ ಸ್ಮೂದಿ
ನುಗ್ಗೆಸೊಪ್ಪನ್ನು ಸ್ಮೂದಿ ಮಾಡಿಯು ಸವಿಯಬಹುದು. ಒಂದು ಕಪ್ ಪಾಲಕ್‌ನೊಂದಿಗೆ ಬಾಳೆಹಣ್ಣು ಹಾಗೂ ನುಗ್ಗೆಸೊಪ್ಪನ್ನು ಮಿಕ್ಸಿಯಲ್ಲಿ ರುಬ್ಬಿ ಸ್ಮೂದಿ ಮಾಡಿ ಬಾದಮಿ ಹಾಲಿನ ಮಿಶ್ರಣದೊಂದಿಗೆ ಸವಿಯಬಹುದು.
ನುಗ್ಗೆ ಸೊಪ್ಪಿನ ರೈಸ್
ಆರೋಗ್ಯಕ್ಕೆ ಒಳಿತಾಗಿರುವ ನುಗ್ಗೆ ಸೊಪ್ಪಿನಿಂದ ರೈಸ್ ಮಾಡಿದರೆ ರುಚಿಯೇ ಬೇರೆ. ಮೊದಲಿಗೆ ಸೋನ ಮಸೂರಿ ಅಥವಾ ಸಾಮಾನ್ಯ ಅಕ್ಕಿಯಿಂದ ಮಾಡಿದ ಅನ್ನವನ್ನು ರೆಡಿ ಮಾಡಿಟ್ಟುಕೊಳ್ಳಿ. ಬಳಿಕ ನುಗ್ಗೆ ಸೊಪ್ಪು ಪ್ರೈ ಮಾಡಿ ಒಂದು ಮಿಕ್ಸಿ ಜಾರ್‌ಗೆ ಹಾಕಿ ನುಣ್ಣಗೆ ರುಬ್ಬಿ ಕೊಳ್ಳಬೇಕು. ಬಳಿಕ ಬಾಣಲೆಗೆ ಎಣ್ಣೆ ಹಾಕಿ ಜೀರಿಗೆ, ಲವಂಗ, ಚೆಕ್ಕೆ, ಏಲಕ್ಕಿ ಹಾಕಿ ಬಿಸಿ ಮಾಡಿ. ಅದಕ್ಕೆ ರುಬ್ಬಿಟ್ಟ ನುಗ್ಗೆ ಸೊಪ್ಪು ಮಿಕ್ಸ್ ಮಾಡಿ, ಮಾಡಿಟ್ಟುಕೊಂಡಿರುವ ಅನ್ನವನ್ನು ಹಾಕಿ ಮಿಕ್ಸ್ ಮಾಡಿದರೆ ರೈಸ್ ರೆಡಿ.
ಮೊರಿಂಗಾ ಆಮ್ಲೆಟ್
ಮೊರಿಂಗಾ ಆಮ್ಲೆಟ್ ಕೂಡ ತಯಾರಿಸಬಹುದು. ಒಂದು ಚಮಚ ಮೊರಿಂಗಾ ಪುಡಿಯೊಂದಿಗೆ ಮೊಟ್ಟೆ ಹಾಕಿ ಮಿಕ್ಸ್ ಮಾಡಿ. ಬಳಿಕ ಆ ಮಿಶ್ರಣಕ್ಕೆ ಕಾಳು ಮೆಣಸು, ಈರುಳ್ಳಿ, ಟೊಮೆಟೊ ಮತ್ತು ಪಾಲಕ್‌ನಂತಹ ತರಕಾರಿಗಳನ್ನು ಸೇರಿಸಿ ಆಮ್ಲೆಟ್ ತಯಾರಿಸಬಹುದು.
ಮೊರಿಂಗಾ ಸ್ಟಿರ್ ಫ್ರೈ
ಮೊರಿಂಗಾದ ಸ್ಟಿರ್ ಫ್ರೈ ಕೂಡ ತಯಾರಿಸಬಹುದು. ಸೋಯಾ ಸಾಸ್ ಮತ್ತು ಒಂದು ಟೀ ಚಮಚ ಮೊರಿಂಗಾ ಸೊಪ್ಪನ್ನು ಯಾವುದೇ ಬೇಯಿಸಿದ ತರಕಾರಿಗೆ ಮಿಕ್ಸ್ ಮಾಡಿ ಅದನ್ನು ಸ್ಟಿರ್ ಪ್ರೈ ಮಾಡಿ ಸವಿಯಬಹುದು.
ನುಗ್ಗೆ ಸೊಪ್ಪು ಚಟ್ನಿ
ಒಲೆಯಲ್ಲಿ ಬಾಣಲೆ ಇಟ್ಟು ಎಣ್ಣೆ ಕಾಯಿಸಿ ಬಿಸಿಯಾದಾಗ ಜೀರಿಗೆ, ಮೆಣಸಿನಕಾಯಿ, ನುಗ್ಗೆ ಸೊಪ್ಪು ಹಾಕಿ ಹುರಿಯಿರಿ. ನಂತರ ಬೆಳ್ಳುಳ್ಳಿ, ಈರುಳ್ಳಿ ಹಾಕಿ ಬಳಿಕ ತೆಂಗಿನ ತುರಿಯನ್ನು ಹಾಕಿ ಚೆನ್ನಾಗಿ ರುಬ್ಬಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಪೇಸ್ಟ್ ಮಾಡಿದರೆ ಚಟ್ನಿ ತಯಾರು.
ಅಗತ್ಯ ಪೋಷಕಾಂಶ ಇರಲಿದೆ
ನುಗ್ಗೆ ಸೊಪ್ಪಿನಲ್ಲಿ ವಿಟಮಿನ್ ಎ, ಸಿ , ಕ್ಯಾಲ್ಶಿಯಂ ಹಾಗೂ ಪೊಟ್ಯಾಷಿಯಂ ಮತ್ತು ಕಬ್ಬಿಣಾಂಶ ಹೆಚ್ಚಿದ್ದು ದೇಹದ ಆರೋಗ್ಯಕ್ಕೆ ಬಹಳ ಉತ್ತಮ. ಇದರ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಅಲ್ಲದೆ ಚರ್ಮದ ಆರೋಗ್ಯ ಮತ್ತು ರಕ್ತದೊತ್ತಡವನ್ನು ಕಾಪಾಡಿಕೊಳ್ಳಲು ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ.
ಇದನ್ನು ಓದಿ:BBK 11: ಬಿಗ್ ಬಾಸ್ ಕನ್ನಡ ಸೀಸನ್ 11 ಫಿನಾಲೆಗೆ ದಿನಾಂಕ ಫಿಕ್ಸ್: ಯಾವಾಗ ನೋಡಿ