Saturday, 21st December 2024

MP Horror: ಮಹಿಳೆಯರು ಬಟ್ಟೆ ಬದಲಿಸುವ ರೂಂನಲ್ಲಿ ಹಿಡನ್‌ ಕ್ಯಾಮರಾ! MRI ಸ್ಕ್ಯಾನ್‌ ಸೆಂಟರ್‌ನ ಕರ್ಮಕಾಂಡ ಬಯಲು

MP Horror

ಭೋಪಾಲ್‌: ಮಧ್ಯಪ್ರದೇಶದ (Madhya Pradesh) ಭೋಪಾಲ್‌ನ ಮಾಳವೀಯ ನಗರದಲ್ಲಿರುವ ಎಂಆರ್‌ಐ ಪರೀಕ್ಷಾ ಕೇಂದ್ರದ ಬಟ್ಟೆ ಬದಲಾಯಿಸುವ ಕೊಠಡಿಯಲ್ಲಿ ಹಿಡನ್ ಕ್ಯಾಮೆರಾ ಪತ್ತೆಯಾದ ಆಘಾತಕಾರಿ ಘಟನೆ ನಡೆದಿದೆ. (MP Horror) ಎಂಆರ್‌ಐ (MRI Centre) ಪರೀಕ್ಷೆಗೆಂದು ಕೇಂದ್ರಕ್ಕೆ ಭೇಟಿ ನೀಡಿದ ಮಹಿಳೆಯೊಬ್ಬರು ಬಟ್ಟೆ ಬದಲಾಯಿಸುವ ಕೊಠಡಿಯ ಸೀಲಿಂಗ್‌ನಲ್ಲಿ ಬಚ್ಚಿಟ್ಟಿದ್ದ ಮೊಬೈಲ್ ಫೋನ್ ಅನ್ನು ಪತ್ತೆ ಮಾಡಿದ್ದಾರೆ. ಕೂಡಲೇ ಆಕೆ ತನ್ನ ಪತಿ ಆದಿಲ್‌ಗೆ ಮಾಹಿತಿ ನೀಡಿದ್ದು, ಆತ ಮೊಬೈಲ್ ಪಡೆದುಕೊಂಡು ಸಿಬ್ಬಂದಿಯ ಮೇಲೆ ದೂರು ನೀಡಿದ್ದಾರೆ.

ತನಿಖೆ ನಡೆಸಿದಾಗ, ಮೊಬೈಲ್ ಎಂಆರ್‌ಐ ಪರೀಕ್ಷಾ ಕೇಂದ್ರದ ಉದ್ಯೋಗಿಗೆ ಸೇರಿದ್ದು, ಆತ ತನ್ನ ಸಹಚರರೊಂದಿಗೆ ಬಟ್ಟೆ ಬದಲಾಯಿಸುವ ಕೋಣೆಯಲ್ಲಿ ಮಹಿಳೆಯರ ಖಾಸಗಿ ವೀಡಿಯೊಗಳನ್ನು ರೆಕಾರ್ಡ್ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಮಹಿಳೆ ಮತ್ತು ಆಕೆಯ ಪತಿ ಅರೇರಾ ಹಿಲ್ಸ್ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದು, ಅಧಿಕಾರಿಗಳು ತ್ವರಿತ ಕ್ರಮಕೈಗೊಂಡಿದ್ದಾರೆ.

ಆರೋಪಿಯ ಮೊಬೈಲ್‌ನಲ್ಲಿ ದೂರುದಾರರ 27 ನಿಮಿಷಗಳ ರೆಕಾರ್ಡಿಂಗ್ ಮತ್ತು ಬೇರೆ ಮಹಿಳೆಯ ಮತ್ತೊಂದು ವಿಡಿಯೋ ಸೇರಿದಂತೆ ಹಲವು ವಿಡಿಯೋಗಳು ಪತ್ತೆಯಾಗಿವೆ ಎಂದು ಡಿಸಿಪಿ ಸಂಜಯ್ ಅಗರ್ವಾಲ್ ಖಚಿತಪಡಿಸಿದ್ದಾರೆ. ಪೊಲೀಸರು ಬಟ್ಟೆ ಬದಲಾಯಿಸುವ ಕೊಠಡಿಯನ್ನು ಸೀಲ್ ಮಾಡಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ರೆಕಾರ್ಡಿಂಗ್‌ಗಳ ವ್ಯಾಪ್ತಿಯನ್ನು ಬಹಿರಂಗಪಡಿಸಲು ಮತ್ತು ಬೇರೆ ಸಂತ್ರಸ್ತರನ್ನು ಪತ್ತೆ ಹಚ್ಚಲು ಮೊಬೈಲ್ ಫೋನ್ ಅನ್ನು ಫೋರೆನ್ಸಿಕ್ ವಿಶ್ಲೇಷಣೆಗಾಗಿ ಕಳುಹಿಸಲಾಗಿದೆ.

ಈ ಘಟನೆ ಆಕ್ರೋಶಕ್ಕೆ ಕಾರಣವಾಗಿದ್ದು, ಸಂತ್ರಸ್ತೆಯ ಕುಟುಂಬ ಸದಸ್ಯರು ಎಂಆರ್‌ಐ ಕೇಂದ್ರದಲ್ಲಿ ಗಲಾಟೆ ನಡೆಸಿದ್ದಾರೆ. ಪೊಲೀಸರ ಮಧ್ಯಪ್ರವೇಶದ ನಂತರ ಪರಿಸ್ಥಿತಿ ಹತೋಟಿಗೆ ತರಲಾಯಿತು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದು, ಎಂಐಆರ್‌ ಕೇಂದ್ರದ ಎಲ್ಲಾ ಸಿಬ್ಬಂದಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ವೈದ್ಯಕೀಯ ಸಂಸ್ಥೆಗಳಲ್ಲಿ ಈ ರೀತಿಯ ಘಟನೆಯಾಗಿರುವುದನ್ನು ನೋಡಿ ಜನ ಬೆಚ್ಚಿ ಬಿದ್ದಿದ್ದಾರೆ.

ಪ್ರತ್ಯೇಕ ಘಟನೆಯಲ್ಲಿ ಮುರಾದ್‌ನಗರದ ಮೇಲಿನ ಗಂಗಾ ಕಾಲುವೆಯಲ್ಲಿ ಮಹಿಳೆಯರು ಬಟ್ಟೆ ಬದಲಾಯಿಸುತ್ತಿರುವುದನ್ನು ಸಿಸಿಟಿವಿ ಕ್ಯಾಮೆರಾ ಬಳಸಿ ಚಿತ್ರೀಕರಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನ ಮೇಲೆ ಪ್ರಕರಣ ದಾಖಲಿಸಲಾಗಿದೆ. ವಿಡಿಯೋ ಚಿತ್ರೀಕರಿಸಿದ್ದ ವ್ಯಕ್ತಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದು, 1 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಮೇ 21 ರಂದು ಸ್ನಾನಕ್ಕೆ ಬಂದಿದ್ದ ವೇಳೆ ವ್ಯಕ್ತಿಯೊಬ್ಬ ವಿಡಿಯೋ ಚಿತ್ರೀಕರಿಸಿದ್ದಾಗಿ 45 ವರ್ಷದ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ಶಂಕಿತ ಮುಖೇಶ್ ಗಿರಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು.

ಈ ಸುದ್ದಿಯನ್ನೂ ಓದಿ : Sobhita & Naga Chaitanya: ಮದ್ವೆ ನಂತ್ರ ಮೊದಲ ಬಾರಿಗೆ ಕ್ಯಾಮರಾ ಕಣ್ಣಿಗೆ ಬಿದ್ದ ನಾಗ ಚೈತನ್ಯ-ಶೋಭಿತಾ ಜೋಡಿ; ವಿಡಿಯೊ ವೈರಲ್‌