ಸಂಪರ್ಕ ಜಾಲದಾದ್ಯಂತ ಬೇಸ್ ಮತ್ತು ಲೈನ್ ಮೆಂಟೆನೆನ್ಸ್ ಬಲವರ್ಧನೆ ಮೂಲಕ ವಿಮಾನಗಳ ನಿರ್ವಹಣೆಯಲ್ಲಿ ಸ್ವಾವಲಂಬನೆ
- ದೇಶದಾದ್ಯಂತ ಪರಿಣತ ಎಂಜಿನಿಯರುಗಳಿಗೆ ಉದ್ಯೋಗ ಅವಕಾಶಗಳ ಸೃಷ್ಟಿ
- ವಿಮಾನಗಳ ನಿರ್ವಹಣೆ ಮತ್ತು ಎಂಜಿನಿಯರಿಂಗ್ ಚಟುವಟಿಕೆಗಳಿಗೆ ತರಬೇತಿ ಪಡೆದ ಸಿಬ್ಬಂದಿಯ ಲಭ್ಯತೆ ಖಚಿತಪಡಿಸಿಕೊಳ್ಳಲು ಬೆಂಗಳೂರಿನಲ್ಲಿ ನಿರ್ವಹಣಾ ತರಬೇತಿ ಸಂಸ್ಥೆ ಸ್ಥಾಪನೆ
ಗುರುಗ್ರಾಂ / ಬೆಂಗಳೂರು: ಬೆಂಗಳೂರಿನಲ್ಲಿ ವಿಮಾನಗಳ ನಿರ್ವಹಣೆ, ದುರಸ್ತಿ ಮತ್ತು ಸಂಪೂರ್ಣ ನವೀಕರಣದ (ಎಂಆರ್ಒ) ಬೃಹತ್ ಘಟಕ ನಿರ್ಮಾಣಕ್ಕೆ ಚಾಲನೆ ನೀಡಿರುವುದಾಗಿ ಬೆಂಗಳೂರಿನಲ್ಲಿ ಇಂದು ನಡೆದ ಅದ್ದೂರಿ ಸಮಾರಂಭದಲ್ಲಿ ಏರ್ ಇಂಡಿಯಾ ಗ್ರೂಪ್ ಪ್ರಕಟಿಸಿತು. ಭಾರತಕ್ಕೆ ಸದೃಢ ಸ್ವಾವಲಂಬನೆಯ ವಿಮಾನಯಾನ ವ್ಯವಸ್ಥೆಯನ್ನು ನಿರ್ಮಿಸುವ ತನ್ನ ಬದ್ಧತೆಯನ್ನು ಏರ್ ಇಂಡಿಯಾ ಪುನರುಚ್ಚರಿಸಿದೆ.
ಶೀಘ್ರದಲ್ಲಿಯೇ ಕಾರ್ಯಾರಂಭ ಮಾಡಲಿರುವ ಈ ʼಎಂಆರ್ಒʼ ಸೌಲಭ್ಯವನ್ನು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ 35-ಎಕರೆ ಭೂಪ್ರದೇಶದಲ್ಲಿ ನಿರ್ಮಿಸಲಾಗುವುದು. ಏರ್ಇಂಡಿಯಾ- ತನ್ನ ವಿಮಾನಗಳನ್ನು ಆಧುನೀಕರಿಸುತ್ತಿರುವುದರ ಜೊತೆಗೆ ತನ್ನ ಜಾಗತಿಕ ಕಾರ್ಯಾಚರಣೆಯನ್ನು ವಿಸ್ತರಿಸುತ್ತಿರುವುದರಿಂದ ಈ ʼಎಂಆರ್ಒʼ ಘಟಕವು ಏರ್ ಇಂಡಿಯಾ ಗ್ರೂಪ್ ಏರ್ಲೈನ್ಸ್ನ ವಿಮಾನಗಳ ನಿರ್ವಹಣಾ ಸೇವೆಗಳಿಗೆ ಪ್ರಮುಖ ಕೇಂದ್ರವಾಗಿರಲಿದೆ.
ಶಿಲಾನ್ಯಾಸ ಸಮಾರಂಭದಲ್ಲಿ ಕೈಗಾರಿಕಾ ಅಭಿವೃದ್ಧಿ ಆಯುಕ್ತರು ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ನಿರ್ದೇಶಕಿಯಾಗಿರುವ ಶ್ರೀಮತಿ ಗುಂಜನ್ ಕೃಷ್ಣ, ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ನ (ಬಿಐಎಎಲ್) ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಹರಿ ಮರಾರ್ ಹಾಗೂ ಎಸ್ಐಎ ಎಂಜಿನಿಯರಿಂಗ್ ಕಂಪನಿಯ ಸಿಇಒ ಚಿನ್ ಯೌ ಸೆಂಗ್ ಸೇರಿದಂತೆ ಮತ್ತಿತರ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.
ಬೆಂಗಳೂರಿನಲ್ಲಿ ʼಎಂಆರ್ಒʼ ಸೌಲಭ್ಯ ಸ್ಥಾಪಿಸಲು ಏರ್ ಇಂಡಿಯಾ ಕರ್ನಾಟಕ ರಾಜ್ಯ ಸರ್ಕಾರದ ಜೊತೆಗೆ ಈ ವರ್ಷದ ಆರಂಭದಲ್ಲಿ ತಿಳಿವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿತ್ತು. ಈ ʼಎಂಆರ್ಒʼ ಘಟಕ ಅಭಿವೃದ್ಧಿಪಡಿಸಲು ಏರ್ ಇಂಡಿಯಾ ತನ್ನ ಕಾರ್ಯತಂತ್ರದ ಪಾಲುದಾರ ಕಂಪನಿಯಾಗಿ ಎಸ್ಐಎ ಎಂಜಿನಿಯರಿಂಗ್ ಕಂಪನಿ (ಎಸ್ಐಎಇಸಿ) ಜೊತೆಗೂ ಒಪ್ಪಂದ ಮಾಡಿಕೊಂಡಿದೆ.