ನವದೆಹಲಿ: ನೀವು ಸಣ್ಣದಾಗಿ ಸ್ವಂತ ಬ್ಯುಸಿನೆಸ್ ಮಾಡಬೇಕಾ? ಬ್ಯುಸಿನೆಸ್ ಮಾಡಲು ಸಾಲ ಬೇಕಾ? ನಿಮ್ಮ ಕನಸು ನನಸು ಮಾಡಲು ಪ್ರಧಾನ ಮಂತ್ರಿ ಮುದ್ರಾ ಯೋಜನೆ (Mudra Loan) ಇದೆ ನೋಡಿ. ಅಂದ್ರೆ, ನೀವು ಈ ಮುದ್ರಾ ಸ್ಕೀಮ್‌ನಲ್ಲಿ ಗರಿಷ್ಠ 20 ಲಕ್ಷ ರೂ ತನಕ ಸಾಲವನ್ನು ಪಡೆಯಬಹುದು. ಹಾಗಾದರೆ ಏನಿದು ಮುದ್ರಾ ಸ್ಕೀಮ್? ಇದರ ಉದ್ದೇಶವೇನು? ಇದರ ಅಡಿಯಲ್ಲಿ ಯಾರಿಗೆಲ್ಲ ಸಾಲ ಸಿಗುತ್ತದೆ? ಅರ್ಜಿ ಸಲ್ಲಿಸುವುದು ಹೇಗೆ? ಬಡ್ಡಿ ದರ ಎಷ್ಟಿರುತ್ತದೆ? ಎಂಬಿತ್ಯಾದಿ ಸಂಪೂರ್ಣ ವಿವರಗಳನ್ನು ಇಲ್ಲಿ ವಿವರಿಸಲಾಗಿದೆ.
ಸಣ್ಣ ವ್ಯಾಪಾರ ಮತ್ತು ಉದ್ದಿಮೆಗಳನ್ನು ಮಾಡಲು ಬಯಸುವವರಿಗೆ ಮುದ್ರಾ ಯೋಜನೆಯಲ್ಲಿ ಸಾಲವನ್ನು ನೀಡಲಾಗುತ್ತದೆ. ಯುವಜನರಲ್ಲಿ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುವುದು, ಇದಕ್ಕಾಗಿ ಆರಂಭಿಕ ಹಂತದ ಹಣಕಾಸು ನೆರವನ್ನು ನೀಡುವುದು ಇದರ ಮುಖ್ಯ ಉದ್ದೇಶ. ಬ್ಯಾಂಕ್‌ಗಳು, ಎನ್‌ಬಿಎಫ್‌ಸಿಗಳು ಮತ್ತು ಕಿರು ಹಣಕಾಸು ಸಂಸ್ಥೆಗಳ ಮೂಲಕ ಈ ಸಾಲವನ್ನು ವಿತರಿಸಲಾಗುತ್ತದೆ. ಹೊಸತಾಗಿ ಸಣ್ಣ ಪುಟ್ಟ ಬ್ಯುಸಿನೆಸ್ ಅಥವಾ ಉದ್ದಿಮೆ ಮಾಡಲು ಮುಂದಾಗುವವರಿಗೆ ಸಾಲ ಸಿಗೋದು ಕಷ್ಟವಾದ್ದರಿಂದ ಮುದ್ರಾ ಯೋಜನೆಯನ್ನು 2015ರಲ್ಲಿ ಆರಂಭಿಸಲಾಗಿತ್ತು.
ಮುದ್ರಾ ಯೋಜನೆಯಲ್ಲಿ ಸಾಲಗಳ ವಿಧಗಳು
ಮುದ್ರಾ ಯೋಜನೆ ಅಡಿಯಲ್ಲಿ ಶಿಶು, ಕಿಶೋರ್, ತರುಣ್ ಮತ್ತು ತರುಣ್ ಪ್ಲಸ್ ಎಂಬ ವಿಧಗಳಲ್ಲಿ ಸಾಲವನ್ನು ಪಡೆಯಬಹುದಾಗಿದೆ. ಶಿಶು ವಿಭಾಗದ ಅಡಿಯಲ್ಲಿ 50,000 ರೂ ತನಕ ಸಾಲ ಸಿಗುತ್ತದೆ. ಈಗಾಗಲೇ ಬ್ಯಸಿನೆಸ್ ಶುರು ಮಾಡಿರುವವರು ಈ ಸಾಲ ಪಡೆಯಬಹುದು.ಕಿಶೋರ್ ವಿಭಾಗದಲ್ಲಿ 5 ಲಕ್ಷ ರೂ. ತನಕ ಸಾಲ ಸಿಗುತ್ತದೆ. ತರುಣ್ ವಿಭಾದಲ್ಲಿ 10 ಲಕ್ಷ ರೂ. ಹಾಗೂ ತರುಣ್ ಪ್ಲಸ್ ಅಡಿಯಲ್ಲಿ 20 ಲಕ್ಷ ರೂ. ತನಕ ಸಾಲ ಸಿಗುತ್ತದೆ.
ಈ ಮುದ್ರಾ ಸಾಲಗಳಿಗೆ ಯಾವುದೇ ಸೆಕ್ಯುರಿಟಿ ಡೆಪಾಸಿಟ್ ಅಗತ್ಯವಿಲ್ಲ
ಎಲ್ಲಾ ವಿಧದ ಉತ್ಪಾದನೆ, ವ್ಯಾಪಾರ, ಸೇವಾ ಕ್ಷೇತ್ರದ ಬ್ಯುಸಿನೆಸ್‌ಗಳಿಗೆ ಮುದ್ರಾ ಸಾಲ ಪಡೆಯಬಹುದು. ಈಗಾಗಲೇ ಸಣ್ಣ ಪುಟ್ಟ ವ್ಯಾಪಾರಗಳನ್ನು ಮಾಡುತ್ತಿರುವವರೂ ಮುದ್ರಾ ಲೋನ್ ಪಡೆಯಬಹುದು. ಹಣ್ಣು ತರಕಾರಿ ವ್ಯಾಪಾರ ಮಾಡುವವರು, ಲಾರಿ ಚಾಲಕರು, ರಿಪೇರಿ ಶಾಪ್‌ಗಳನ್ನು ನಡೆಸುವವರು, ಹೊಲಿಗೆ ಮಶೀನ್ ಇಟ್ಟುಕೊಂಡಿರುವವರು, ಕಾರ್ಪೆಂಟರ್, ಕರಕುಶಲ ಆಧರಿತ ವ್ಯಾಪಾರ, ಖಾದಿ ವ್ಯಾಪಾರ, ಆಹಾರ ಸಂಸ್ಕರಣೆ ಘಟಕಗಳನ್ನು ತೆರೆಯಲು ಮುದ್ರಾ ಸಾಲ ಸಿಗುತ್ತದೆ. ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು ಕೂಡ ಮುದ್ರಾ ಸಾಲ ನೀಡುತ್ತವೆ. 2024ರಲ್ಲಿ ಮುದ್ರಾ ಸಾಲದ ಬಡ್ಡಿ ದರ ವಾರ್ಷಿಕ 9.30% ರಷ್ಟಿದೆ.
ಯಾವ ಬ್ಯಾಂಕ್‌ಗಳಲ್ಲಿ ಮುದ್ರಾ ಲೋನ್ ಲಭ್ಯ
ಸಾರ್ವಜನಿಕ ವಲಯದ ಎಲ್ಲಾ ಬ್ಯಾಂಕ್‌ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು, ಸಣ್ಣ ಫೈನಾನ್ಸ್ ಬ್ಯಾಂಕ್‌ಗಳು, ಖಾಸಗಿ ಬ್ಯಾಂಕ್‌ಗಳು, ವಿದೇಶಿ ಬ್ಯಾಂಕ್‌ಗಳು, ಮೈಕ್ರೊ ಫೈನಾನ್ಸ್ ಇನ್‌ಸ್ಟಿಟ್ಯೂಷನ್‌ಗಳಲ್ಲಿ ಮುದ್ರಾ ಸಾಲ ಸಿಗುತ್ತದೆ. ಮುದ್ರಾ ಸಾಲ ಪಡೆಯಲು ಪ್ಯಾನ್ ಕಾರ್ಡ್ ಕಡ್ಡಾಯವಲ್ಲ. 1ರಿಂದ 7 ವರ್ಷದ ಅವಧಿಯಲ್ಲಿ ಮುದ್ರಾ ಸಾಲವನ್ನು ಮರು ಪಾವತಿ ಮಾಡಬಹುದು. ಮುದ್ರಾ ಯೋಜನೆಯ ಮೂಲಕ ಈಗಾಗಲೇ 3 ಲಕ್ಷ ಕೋಟಿ ರೂ ಗೂ ಹೆಚ್ಚು ಸಾಲವನ್ನು ಮಂಜೂರು ಮಾಡಲಾಗಿದೆ. 2 ಲಕ್ಷದ 95 ಸಾವಿರ ಕೋಟಿ ರೂ. ವಿತರಣೆಯಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಐಡಿಬಿಐ ಬ್ಯಾಂಕ್, ಯುಕೊ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಕೆನರಾ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಇಂಡಿಯಾದಲ್ಲಿ ಮುದ್ರಾ ಸಾಲ ಸಿಗುತ್ತದೆ.
ಮುದ್ರಾ ಸಾಲ ಪಡೆಯುವವರು ಈಗಾಗಲೇ ಯಾವುದಾದರೂ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಿಂದ ಸಾಲ ಪಡೆದು ಡಿಫಾಲ್ಟರ್ ಆಗಿದ್ರೆ ಮುದ್ರಾ ಸಾಲ ಸಿಗುವುದಿಲ್ಲ. ಆದ್ದರಿಂದ ಕ್ರೆಡಿಟ್ ಸ್ಕೋರ್ ಚೆನ್ನಾಗಿರಬೇಕು. ಅಗತ್ಯವಿರುವ ದಾಖಲಾತಿಗಳು ಯಾವುದೆಂದರೆ, ಗುರುತಿನ ಚೀಟಿ ಮತ್ತು ವಿಳಾಸದ ದೃಢೀಕರಣ, ವೋಟರ್ ಐಡಿ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಪಾಸ್‌ಪೋರ್ಟ್, ಎಲೆಕ್ಟ್ರಿಸಿಟಿ ಬಿಲ್ ಇತ್ಯಾದಿಗಳನ್ನು ಬಳಸಬಹುದು.
ಈ ಸುದ್ದಿಯನ್ನು ಓದಿ: ಮುದ್ರಾ ಸಾಲ 20 ಲಕ್ಷ ರೂ.ಗೆ ಹೆಚ್ಚಳ