Monday, 6th January 2025

Mukesh Chandrakar Case: ನಾಪತ್ತೆಯಾಗಿದ್ದ ಪತ್ರಕರ್ತನ ಮೃತದೇಹ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಪತ್ತೆ; ಹೊಸ ವರ್ಷದಂದು ಆಗಿದ್ದೇನು?

Mukesh Chandrakar Case

ರಾಯ್‌ಪುರ: ಜ. 1ರಂದು ನಾಪತ್ತೆಯಾದ ಸ್ವತಂತ್ರ ಪ್ರತಕರ್ತನ ಮೃತದೇಹ ಛತ್ತೀಸ್‌ಗಢದ ಬಿಜಾಪುರದ ಚಟ್ಟನ್ಪಾರ ಬಸ್ತಿಯಲ್ಲಿನ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಕಂಡು ಬಂದಿದೆ. ಮೃತ ಪತ್ರಕರ್ತನನ್ನು 28 ವರ್ಷದ ಮುಕೇಶ್‌ ಚಂದ್ರಕರ್‌ (Mukesh Chandrakar) ಎಂದು ಗುರುತಿಸಲಾಗಿದೆ. ಈ ಸಂಬಂಧ ಕೊಲೆ ಪ್ರಕರಣ ದಾಖಲಾಗಿದ್ದು, ಹಲವು ಶಂಕಿತರನ್ನು ವಿಚಾರಣೆಗಾಗಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಸದ್ಯ ಪತ್ರಕರ್ತನ ಕೊಲೆ ಪ್ರಕರಣ ಇಡೀ ಮಾಧ್ಯಮ ಲೋಕವೇ ಬೆಚ್ಚಿ ಬೀಳಿಸಿದೆ (Mukesh Chandrakar Case).

ಹೊಸದಾಗಿ ಕಾಂಕ್ರೀಟ್‌ನಿಂದ ಸೀಲ್ ಮಾಡಲಾದ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಮುಕೇಶ್‌ ಶವ ಪತ್ತೆಯಾಗಿದೆ ಎಂದು ಬಿಜಾಪುರ ಪೊಲೀಸರು ದೃಢಪಡಿಸಿದ್ದಾರೆ ಎಂದು ಎನ್‌ಡಿಟಿವಿ (NDTV) ವರದಿ ಮಾಡಿದೆ.

ಮುಕೇಶ್‌ ಚಂದ್ರಕರ್‌ ಮೃತದೇಹದ ತಲೆ ಮತ್ತು ಬೆನ್ನಿನ ಮೇಲೆ ಅನೇಕ ಗಾಯದ ಗುರುತು ಕಾಣಿಸಿಕೊಂಡಿದೆ. ಅಲ್ಲದೆ ದೇಹ ಊದಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಧರಿಸಿದ ಬಟ್ಟೆಯ ಸಹಾಯದಿಂದ ಗುರುತು ಪತ್ತೆ ಹಚ್ಚಲಾಗಿದೆ. ಮುಕೇಶ್‌ ಮೊಬೈಲ್‌ನ ಕೊನೆಯ ಲೊಕೇಶನ್ ಆಧರಿಸಿ ತನಿಖೆ ನಡೆಸಿದ ಪೊಲೀಸರು, ಗುತ್ತಿಗೆದಾರ ಸುರೇಶ್ ಚಂದ್ರಕರ್ ಅವರ ಅಂಗಳದಲ್ಲಿ ಮೃತದೇಹ ಪತ್ತೆ ಹಚ್ಚಿದ್ದಾರೆ.

“ಸುರೇಶ್ ಚಂದ್ರಕರ್ ಸೇರಿದಂತೆ ಹಲವು ಮಂದಿಯನ್ನು ಪ್ರಶ್ನಿಸಲಾಗುತ್ತಿದೆ. ಮುಖೇಶ್ ಅವರ ಸಾವು ಅವರ ಇತ್ತೀಚಿನ ಯಾವುದಾದರೂ ವರದಿಯೊಂದಿಗೆ ಸಂಬಂಧ ಹೊಂದಿದೆಯೇ ಎಂಬುದನ್ನು ನಾವು ತನಿಖೆ ನಡೆಸುತ್ತಿದ್ದೇವೆ. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದುʼʼ ಎಂದು ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಯಾದವ್ ತಿಳಿಸಿದ್ದಾರೆ.

ಮುಖೇಶ್ ಚಂದ್ರಕರ್ ಅವರು ಬಸ್ತಾರ್ ಜಂಕ್ಷನ್ (Bastar Junction) ಎಂಬ ಯೂಟ್ಯೂಬ್ ಚಾನೆಲ್ ಅನ್ನು ನಡೆಸುತ್ತಿದ್ದರು. ಇದು 1.59 ಲಕ್ಷ ಚಂದಾದಾರರನ್ನು ಹೊಂದಿದೆ ಮತ್ತು ಬಸ್ತಾರ್ ಪ್ರದೇಶದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತದೆ. ಮುಕೇಶ್ ಮತ್ತು ಅವರ ಸಹೋದರ ಯೂಕೇಶ್ ಚಂದ್ರಕರ್ ಕೂಡ ಪತ್ರಕರ್ತರಾಗಿದ್ದು, ಇವರು ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಹೆತ್ತವರನ್ನು ಕಳೆದುಕೊಂಡಿದ್ದರು.

ನಿರ್ಭೀತ ವರದಿಗಾರಿಕೆಗೆ ಜನಪ್ರಿಯರಾದ ಮುಕೇಶ್‌, 2021ರ ಏಪ್ರಿಲ್‌ನಲ್ಲಿ ಮಾವೋವಾದಿಗಳಿಂದ ಅಪಹರಣಕ್ಕೊಳಗಾದ ಸಿಆರ್‌ಪಿಎಫ್‌ ಕೋಬ್ರಾ ಕಮಾಂಡೋ ರಾಕೇಶ್ವರ್ ಸಿಂಗ್ ಮನ್ಹಾಸ್ ಅವರನ್ನು ಬಿಡುಗಡೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಹೊಸ ವರ್ಷದಂದು ಆಗಿದ್ದೇನು?

ಹೊಸ ವರ್ಷದಂದು ಮುಕೇಶ್‌ ಟೀ ಶರ್ಟ್ ಮತ್ತು ಶಾರ್ಟ್ಸ್ ಧರಿಸಿ ಮನೆಯಿಂದ ಹೊರಟಿದ್ದರು. ಸ್ವಲ್ಪ ಸಮಯದ ನಂತರ ಅವರ ಫೋನ್ ಸ್ವಿಚ್ ಆಫ್ ಆಗಿತ್ತು. ಎಷ್ಟು ಹೊತ್ತಾದರೂ ಮನೆಗೆ ಮರಳದೇ ಇದ್ದಾಗ ಆತಂಕಗೊಂಡ ಅವರ ಸಹೋದರ ಯುಕೇಶ್ ನಾಪತ್ತೆ ದೂರು ದಾಖಲಿಸಿದ್ದರು.

ಸಂತಾಪ ಸೂಚಿಸಿದ ಸಿಎಂ

ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಅವರು ಮುಕೇಶ್‌ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದು, “ಅಪರಾಧಿಯನ್ನು ಸುಮ್ಮನೆ ಬಿಡುವುದಿಲ್ಲ” ಎಂದು ಗುಡುಗಿದ್ದಾರೆ. “ಬಿಜಾಪುರದ ಯುವ ಪತ್ರಕರ್ತ ಮುಕೇಶ್‌ ಚಂದ್ರಕರ್ ಅವರ ಹತ್ಯೆಯ ಸುದ್ದಿ ಹೃದಯ ವಿದ್ರಾವಕವಾಗಿದೆ. ಯಾವ ಕಾರಣಕ್ಕೂ ಅಪರಾಧಿಯನ್ನು ಸುಮ್ಮನೆ ಬಿಡುವುದಿಲ್ಲʼʼ ಎಂದು ಭರವಸೆ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ : Death Penalty: ಮರಣದಂಡನೆ ಸಮಯದಲ್ಲಿ ಅಪರಾಧಿ ಕಿವಿಯಲ್ಲಿ ಏನು ಹೇಳಲಾಗುತ್ತದೆ ಗೊತ್ತೇ?