ಮುಂಬೈ : ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಮಹಾರಾಷ್ಟ್ರ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಾನಾ ಪಟೋಲೆ(Nana Patole) ರಾಜೀನಾಮೆಯನ್ನು ನೀಡಿದ್ದಾರೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮಹಾ ವಿಕಾಸ್ ಅಘಾಡಿ ಮೈತ್ರಿ ಪಕ್ಷ ಕಾಂಗ್ರೆಸ್ ಅತ್ಯಂತ ಕಳಪೆ ಪ್ರದರ್ಶನವನ್ನು ನೀಡಿತ್ತು. ಚುನಾವಣೆ ಕಣದಲ್ಲಿ ಮಹಾಯುತಿ ಮೈತ್ರಿ ಪಕ್ಷದ ವಿರುದ್ಧ ಸೆಣಸಾಡಿ ಹೀನಾಯವಾಗಿ ಸೋಲನ್ನು ಅನುಭವಿಸಿತು. ಎಂವಿಎ ಭಾಗವಾಗಿ ಸ್ಪರ್ಧಿಸಿದ್ದ 101 ಸ್ಥಾನಗಳಲ್ಲಿ ಕಾಂಗ್ರೆಸ್ ಕೇವಲ 16 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸುವ ಮೂಲಕ ತೃಪ್ತಿಪಟ್ಟುಕೊಂಡಿತು.
ಇನ್ನು ಮಹಾರಾಷ್ಟ್ರ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ನಾನಾ ಪಟೋಲೆ ಸಾಕೋಲಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಕೇವಲ 208 ಮತಗಳ ಅಲ್ಪ ಅಂತರದಿಂದ ಚುನಾವಣೆಯಲ್ಲಿ ಗೆದ್ದರು. ಸತತವಾಗಿ ನಾಲ್ಕು ಬಾರಿ ಚುನಾವಣೆಯಲ್ಲಿ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದ ಪಟೋಲೆ ಅವರಿಗೆ ಈ ಚುನಾವಣೆ ಪ್ರತಿಷ್ಠೆಯ ವಿಷಯವಾಗಿತ್ತು. ಆದರೆ ತಾವು ಕಡಿಮೆ ಅಂತರದ ಮತ ಪಡೆದು ಗೆಲುವು ಸಾಧಿಸಿ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವಲ್ಲಿ ಎಡವಿದರು. ಇದೀಗ ಕಾಂಗ್ರೆಸ್ ಪಕ್ಷದ ಹೀನಾಯವಾದ ಸೋಲಿಗೆ ಸ್ವತಃ ನೈತಿಕ ಹೊಣೆ ಹೊತ್ತು ನಾನಾ ಪಟೋಲೆ ತಮ್ಮ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮಹಾರಾಷ್ಟ್ರ ಚುನಾವಣೆಯ ಫಲಿತಾಂಶ
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯು ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಅತ್ಯಂತ ಪ್ರಮುಖ ಚುನಾವಣೆಯಾಗಿತ್ತು. ಕಾಂಗ್ರೆಸ್ ಪಕ್ಷವು ಮೈತ್ರಿ ಪಕ್ಷಗಳೊಂದಿಗೆ ಸೇರಿ ಬಿಜೆಪಿ ಪಕ್ಷವನ್ನು ಆಡಳಿತ ಅಧಿಕಾರದಿಂದ ಕೆಳಗಿಳಿಸಲು ತನ್ನದೇ ತಂತ್ರಗಳನ್ನು ರೂಪಿಸಿತ್ತು.ಇತ್ತ ಬಿಜೆಪಿ ಪಕ್ಷವು ಮತ್ತೊಮ್ಮೆ ರಾಜ್ಯದಲ್ಲಿ ತನ್ನ ಪ್ರಾಬಲ್ಯವನ್ನು ಸ್ಥಾಪಿಸಿಕೊಳ್ಳುವಲ್ಲಿ ಪ್ರಯತ್ನಗಳನ್ನು ಮಾಡಿತ್ತು. ಇದೀಗ ಚುನಾವಣಾ ಫಲಿತಾಂಶ ಘೋಷಣೆಯಾಗಿದೆ. ಕಾಂಗ್ರೆಸ್ ಮೈತ್ರಿ ಬಣವು ಹೀನಾಯವಾಗಿ ಸೋತಿದೆ. ಬಿಜೆಪಿ ಮೈತ್ರಿಕೂಟವು ಭರ್ಜರಿ ಗೆಲುವು ಸಾಧಿಸುವ ಮೂಲಕ ತನ್ನ ಪ್ರಾಬಲ್ಯವನ್ನು ಉಳಿಸಿಕೊಂಡಿದೆ.
ಮಹಾರಾಷ್ಟ್ರದಲ್ಲಿ 2024 ರ ವಿಧಾನಸಭಾ ಚುನಾವಣೆಯಲ್ಲಿ ಎರಡು ಪ್ರಮುಖ ಮೈತ್ರಿಗಳಾದ ಮಹಾಯುತಿ ಮತ್ತು MVA ನಡುವೆ ನೇರಾನೇರ ಸ್ಪರ್ಧೆ ಇತ್ತು. ಫಲಿತಾಂಶದಲ್ಲಿ, 288 ಸದಸ್ಯ ಬಲದ ವಿಧಾನಸಭೆಯಲ್ಲಿ ಮಹಾಯುತಿ, ಬಿಜೆಪಿ, ಶಿವಸೇನೆ ಮತ್ತು ಎನ್‌ಸಿಪಿ (ಅಜಿತ್ ಬಣ) ಮೈತ್ರಿಕೂಟ 235 ಸ್ಥಾನಗಳನ್ನು ಪಡೆದುಕೊಂಡು ಗೆಲುವಿನ ನಗೆ ಬೀರಿದೆ.
ಇದರಲ್ಲಿ ಬಿಜೆಪಿ ಗರಿಷ್ಠ 132 ಸ್ಥಾನಗಳನ್ನು, ಮಿತ್ರಪಕ್ಷ ಶಿವಸೇನೆ 57 ಸ್ಥಾನಗಳನ್ನು ಮತ್ತು ಅಜಿತ್ ಪವಾರ್ ಅವರ ಎನ್‌ಸಿಪಿ 41 ಸ್ಥಾನಗಳನ್ನು ಪಡೆದುಕೊಂಡಿದೆ. ಮತ್ತೊಂದೆಡೆ, ಮಹಾವಿಕಾಸ್ ಅಘಾಡಿ 54 ಸ್ಥಾನಗಳನ್ನು ಪಡೆದಿದ್ದಾರೆ. ಇದರಲ್ಲಿ ಶಿವಸೇನೆ (ಉದ್ಧವ್) 20 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ 16 ಮತ್ತು ಎನ್‌ಸಿಪಿ (ಶರದ್) 10 ಸ್ಥಾನಗಳನ್ನು ಗೆದ್ದಿದೆ.
ನಾನಾ ಪಟೋಲೆ
ಮಹಾರಾಷ್ಟ್ರದ ಭಂಡಾರಾ-ಗೊಂಡಿಯಾ ಕ್ಷೇತ್ರದಿಂದ ಗೆದ್ದಿದ್ದ ಬಿಜೆಪಿಯ ಮಾಜಿ ಸಂಸದ ನಾನಾ ಪಟೋಲೆ 2018ರ ಜನವರಿಯಲ್ಲಿ ಕಾಂಗ್ರೆಸ್ ಸೇರಿದ್ದರು. ಪಟೋಲೆ ಮೂಲತಃ ಕಾಂಗ್ರೆಸ್ಸಿಗರೇ ಆಗಿದ್ದರು. ಕೆಲವು ಆಂತರಿಕ ಕಾರಣಗಳಿಂದ ಕೆಲ ಕಾಲ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದ್ದರು. ಕಳೆದ ಬಾರಿ ಕಾಂಗ್ರೆಸ್‌ನ ನಾನಾ ಪಟೋಲೆ ಅವರು ಬಿಜೆಪಿಯ ಡಾ.ಪರಿಣಯ್ ಫುಕೆ ಅವರನ್ನು 6240 ಮತಗಳಿಂದ ಸೋಲಿಸಿದ್ದರು.
ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ನ ನಾನಾ ಪಟೋಲೆ ವಿರುದ್ಧ ಸಾಕೋಲಿಯಲ್ಲಿ ಒಂದು ದಿನದ ಹಿಂದೆಯಷ್ಟೇ ಪಕ್ಷಕ್ಕೆ ಸೇರ್ಪಡೆಗೊಂಡಿದ್ದ ಅವಿನಾಶ ಬ್ರಹ್ಮಣಕರ್ ಅವರನ್ನು ಬಿಜೆಪಿ ಚುನಾವಣಾ ಕಣಕ್ಕಿಳಿಸಿತ್ತು. ಸತತ ನಾಲ್ಕು ಬಾರಿ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದ ಪಟೋಲೆ ಈ ಬಾರಿ ಕೇವಲ 208 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಅವರು ಒಟ್ಟು 96795 ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ಅವಿನಾಶ್ 96587 ಮತಗಳನ್ನು ಪಡೆದರು ಕೆಲವು ಮತಗಳ ಅಂತರದಿಂದ ಸೋಲನ್ನು ಅನುಭವಿಸಿದರು.
ಈ ಸುದ್ದಿಯನ್ನೂ ಓದಿ : Ajit Pawar: ಮಹಾರಾಷ್ಟ್ರದ ಮುಂದಿನ ಸಿಎಂ ಅಜಿತ್ ಪವಾರ್? ರಿಸಲ್ಟ್‌ಗೂ ಮುನ್ನ ರಾರಾಜಿಸಿದ ಪೋಸ್ಟರ್