Sunday, 22nd December 2024

Narendra Modi : ಅರೇಬಿಯನ್ ಗಲ್ಫ್ ಕಪ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ

Narendra Modi

ಕುವೈತ್‌ ಸಿಟಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಎರಡು ದಿನಗಳ ಕುವೈತ್‌ ಪ್ರವಾಸದಲ್ಲಿದ್ದಾರೆ. ಶನಿವಾರ 26ನೇ ಅರೇಬಿಯನ್ ಗಲ್ಫ್ ಕಪ್‌ (Arabian Gulf Cup) ಉದ್ಘಾಟನಾ ಸಮಾರಂಭದಲ್ಲಿ ಗೌರವ ಅತಿಥಿಯಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಸಂದರ್ಭದಲ್ಲಿ ಕುವೈತ್ ಅಮಿರ್ ಶೇಖ್ ಮೆಶಾಲ್ ಅಲ್-ಅಹ್ಮದ್ ಅಲ್-ಜಾಬರ್ ಅಲ್ ಸಬಾಹ್ ಅವರನ್ನು ಭೇಟಿ ಮಾಡಿದರು. ಉದ್ಘಾಟನಾ ಸಮಾರಂಭವು ಕುವೈತ್ ನಗರದ ಜಾಬರ್ ಅಲ್-ಅಹ್ಮದ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಿತು.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಪ್ರಧಾನ ಮಂತ್ರಿ ಕುವೈತ್‌ನ ಪ್ರಧಾನಿಯವರೊಂದಿಗೆ ತಮ್ಮ ಫೋಟೋವನ್ನು ಹಂಚಿಕೊಂಡಿದ್ದಾರೆ. ಕುವೈತ್‌ನ ಅಮೀರ್, ಶೇಖ್ ಮೆಶಾಲ್ ಅಲ್-ಅಹ್ಮದ್ ಅಲ್-ಜಾಬರ್ ಅಲ್ ಸಬಾಹ್ ಅವರನ್ನು ಅರೇಬಿಯನ್ ಗಲ್ಫ್ ಕಪ್ ಉದ್ಘಾಟನಾ ಸಮಾರಂಭದಲ್ಲಿ ಭೇಟಿಯಾಗಲು ಸಂತೋಷವಾಗಿದೆ ಎಂದು ಬರೆದಿದ್ದಾರೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೊರಡಿಸಿದ ಹೇಳಿಕೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಿಕೆ ಎರಡೂ ನಾಯಕರುಗಳು ಪರಸ್ಪರ ಅನೌಪಚಾರಿಕ ಸಂವಾದದಲ್ಲಿ ತೊಡಗಿಸಿಕೊಳ್ಳಲು ಅವಕಾಶವನ್ನು ನೀಡಿತು ಎಂದು ಹೇಳಿದೆ.

ಅನಿವಾಸಿ ಭಾರತೀಯರ ಭೇಟಿ

ಅರೇಬಿಯನ್ ಗಲ್ಫ್ ಕಪ್ ಉದ್ಘಾಟನಾ ಸಮಾರಂಭಕ್ಕೂ ಮುನ್ನ ಶೇಖ್ ಸಾದ್ ಅಲ್-ಅಬ್ದುಲ್ಲಾ ಒಳಾಂಗಣ ಕ್ರೀಡಾ ಸಂಕೀರ್ಣದಲ್ಲಿ ಪ್ರಧಾನಿ , ಅನಿವಾಸಿ ಭಾರತೀಯರ ಜೊತೆ ಮಾತುಕತೆ ನಡೆಸಿದರು.

ಜಾಗತಿಕ ಬೆಳವಣಿಗೆಗೆ ಭಾರತೀಯ ಸಮುದಾಯದ ಕೊಡುಗೆಯನ್ನು ಶ್ಲಾಘಿಸಿದ ಅವರು, ಭಾರತವು ವಿಶ್ವದ ಕೌಶಲ್ಯ ರಾಜಧಾನಿ ಆಗುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದರು.

ಪ್ರತಿ ವರ್ಷ ನೂರಾರು ಭಾರತೀಯರು ಕುವೈತ್‌ಗೆ ಬರುತ್ತಾರೆ. ನೀವು ಕುವೈತ್ ಸಮಾಜಕ್ಕೆ ಭಾರತೀಯ ಸ್ಪರ್ಶವನ್ನು ಸೇರಿಸಿದ್ದೀರಿ. ಕುವೈತ್‌ನ ಕ್ಯಾನ್ವಾಸ್ ಅನ್ನು ಭಾರತೀಯ ಕೌಶಲ್ಯಗಳ ಬಣ್ಣಗಳಿಂದ ತುಂಬಿದ್ದೀರಿ. ನೀವು ಕುವೈತ್‌ನಲ್ಲಿ ಭಾರತದ ಪ್ರತಿಭೆ, ತಂತ್ರಜ್ಞಾನ ಮತ್ತು ಸಂಪ್ರದಾಯದ ಸಾರವನ್ನು ಬೆರೆಸಿದ್ದೀರಿ ಎಂದು ಮೋದಿ ಹೇಳಿದರು.

2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಪರಿವರ್ತಿಸುವ ಅಭಿಯಾನದಲ್ಲಿ ಪಾಲ್ಗೊಳ್ಳಲು ಭಾರತೀಯ ವಲಸಿಗರನ್ನು ಮೋದಿ ಆಹ್ವಾನಿಸಿದರು ಮತ್ತು ರಾಷ್ಟ್ರವು ವಿಶ್ವ ಬಂಧು ಆಗಿ ಪ್ರಪಂಚದ ಒಳಿತನ್ನು ಗಮನದಲ್ಲಿಟ್ಟುಕೊಂಡು ಮುನ್ನಡೆಯುತ್ತಿದೆ ಎಂದು ಹೇಳಿದರು.

ಗಲ್ಫ್ ರಾಷ್ಟ್ರದಲ್ಲಿ ದೇಶದ ವಿವಿಧ ಮೂಲೆಗಳಿಂದ ಭಾರತೀಯರ ಉಪಸ್ಥಿತಿಯ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸಿದ ಪ್ರಧಾನಿ, ಇದನ್ನು ಮಿನಿ-ಹಿಂದೂಸ್ತಾನ್ ಎಂದು ಕರೆದಿದ್ದಾರೆ.

ಭಾನುವಾರ, ಪ್ರಧಾನಿ ಮೋದಿ ಅವರು ಅಮಿರ್, ಕ್ರೌನ್ ಪ್ರಿನ್ಸ್ ಮತ್ತು ಕುವೈತ್ ಪ್ರಧಾನಿಯನ್ನು ಭೇಟಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ.

ಈ ಸುದ್ದಿಯನ್ನೂ ಓದಿ : Sundar Pichai: ದೂರದೃಷ್ಟಿಯ ನಾಯಕ ನರೇಂದ್ರ ಮೋದಿ: ಗೂಗಲ್‌ ಸಿಇಒ ಸುಂದರ್‌ ಪಿಚೈ ಶ್ಲಾಘನೆ