Saturday, 21st September 2024

Narendra Modi in US: 3 ದಿನಗಳ ಪ್ರವಾಸಕ್ಕಾಗಿ ಅಮೆರಿಕಕ್ಕೆ ತೆರಳಿದ ಪ್ರಧಾನಿ ಮೋದಿ; ವಿಶ್ವ ನಾಯಕರೊಂದಿಗೆ ಮಹತ್ವದ ಮಾತುಕತೆ

Narendra Modi in US

ವಾಷಿಂಗ್ಟನ್‌: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 3 ದಿನಗಳ ಪ್ರವಾಸಕ್ಕಾಗಿ ಶನಿವಾರ (ಸೆಪ್ಟೆಂಬರ್‌ 21) ಬೆಳಿಗ್ಗೆ ಅಮೆರಿಕಕ್ಕೆ ತೆರಳಿದ್ದಾರೆ. ಪ್ರಧಾನಿಯಾದ ಬಳಿಕ ಮೋದಿ ಅವರು ಅಮೆರಿಕ ಪ್ರವಾಸ ಕೈಗೊಳ್ಳುತ್ತಿರುವುದು ಇದು 9ನೇ ಬಾರಿ ಎನ್ನುವುದು ವಿಶೇಷ. ಈ ಪ್ರವಾಸದ ವೇಳೆ ಮೋದಿ ಅವರು ಕ್ವಾಡ್ ನಾಯಕರ ಶೃಂಗಸಭೆ (Quad Leaders’ Summit)ಯಲ್ಲಿ ಮತ್ತು ವಿಶ್ವಸಂಸ್ಥೆಯಲ್ಲಿ ನಡೆಯುವ ಚರ್ಚೆಗಳಲ್ಲಿ ಭಾಗವಹಿಸಲಿದ್ದಾರೆ. ಜತೆಗೆ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ, ಹಲವು ಉನ್ನತ ಮಟ್ಟದ ಸಭೆಗಳನ್ನೂ ನಡೆಸಲಿದ್ದಾರೆ (Narendra Modi in US).

“ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ಭಾಗವಹಿಸಲು ಮತ್ತು ವಿಶ್ವಸಂಸ್ಥೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಿ ನರೆಂದ್ರ ಮೋದಿ ಅವರು ಅಮೆರಿಕಕ್ಕೆ ತೆರಳಿದ್ದಾರೆʼʼ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್‌ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ನೀಡಿದ್ದಾರೆ.

ಭಾರತದಿಂದ ಹೊರಟ ಮೋದಿ ಅವರು ಡೆಲಾವೆರ್‌ ತಲುಪಲಿದ್ದು, ಕ್ವಾಡ್‌ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಡೆಲಾವೇರ್‌ನಲ್ಲಿ ವಿಲ್ಮಿಂಗ್ಟನ್‌ನಲ್ಲಿ ನಡೆಯುವ ಕ್ವಾಡ್ ಸಭೆಯ ಆತಿಥ್ಯವನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ವಹಿಸಲಿದ್ದಾರೆ.

ಕ್ವಾಡ್ ಅಥವಾ ಚತುಷ್ಕೋನ ಭದ್ರತಾ ಸಭೆಯಲ್ಲಿ ಭಾರತ, ಯುಎಸ್, ಜಪಾನ್ ಮತ್ತು ಆಸ್ಟ್ರೇಲಿಯಾದ ನಾಯಕರು ಇರಲಿದ್ದಾರೆ. ಸಭೆಯಲ್ಲಿ ನಾಯಕರು ಕಳೆದ ಒಂದು ವರ್ಷದಲ್ಲಿ ಕ್ವಾಡ್ ಸಾಧಿಸಿದ ಪ್ರಗತಿ ಪರಿಶೀಲಿಸಲಿದ್ದಾರೆ. ಮಾತ್ರವಲ್ಲ ಇಂಡೋ-ಪೆಸಿಫಿಕ್ ಪ್ರದೇಶದ ದೇಶಗಳಿಗೆ ತಮ್ಮ ಅಭಿವೃದ್ಧಿ ಗುರಿಗಳು ಮತ್ತು ಆಕಾಂಕ್ಷೆಗಳನ್ನು ಪೂರೈಸಲು ಸಹಾಯ ಮಾಡಲು ಮುಂದಿನ ವರ್ಷದ ಕಾರ್ಯಸೂಚಿ ನಿಗದಿಪಡಿಸಲಿದ್ದಾರೆ. ಮುಂದಿನ ಕ್ವಾಡ್ ಶೃಂಗಸಭೆಯನ್ನು ಭಾರತ ಆಯೋಜಿಸಲಿದೆ.

ಸೆಪ್ಟೆಂಬರ್ 23ರಂದು ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರಧಾನಿ ಮೋದಿ ‘ಭವಿಷ್ಯದ ಶೃಂಗಸಭೆ’ ಉದ್ದೇಶಿಸಿ ಮಾತನಾಡಲಿದ್ದಾರೆ. ಇದರಲ್ಲಿ ಹಲವಾರು ವಿಶ್ವ ನಾಯಕರು ಭಾಗವಹಿಸಲಿದ್ದಾರೆ. ಶೃಂಗಸಭೆಯ ಹೊರತಾಗಿ, ಪ್ರಧಾನಿಯವರು ಹಲವಾರು ವಿಶ್ವ ನಾಯಕರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ.

ನ್ಯೂಯಾರ್ಕ್‌ನಲ್ಲಿ ಪಿಎಂ ಮೋದಿ ಸೆಪ್ಟೆಂಬರ್ 22ರಂದು ಭಾರತೀಯ ಸಮುದಾಯದ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಎಐ, ಕ್ವಾಂಟಮ್ ಕಂಪ್ಯೂಟಿಂಗ್, ಅರೆವಾಹಕಗಳು ಮತ್ತು ಜೈವಿಕ ತಂತ್ರಜ್ಞಾನದ ಅತ್ಯಾಧುನಿಕ ಕ್ಷೇತ್ರಗಳಲ್ಲಿ ಉಭಯ ದೇಶಗಳ ನಡುವೆ ಹೆಚ್ಚಿನ ಸಹಯೋಗವನ್ನು ಬೆಳೆಸಲು ಅವರು ಅಮೆರಿಕ ಮೂಲದ ಪ್ರಮುಖ ಕಂಪನಿಗಳ ಸಿಇಒಗಳೊಂದಿಗೆ ಸಂವಹನ ನಡೆಸಲಿದ್ದಾರೆ ಎಂದು ಎಂಇಎ ತಿಳಿಸಿದೆ.

ಟ್ರಂಪ್‌ ಭೇಟಿಯಾಗ್ತಾರಾ?

ಅಮೆರಿಕ ಪ್ರವಾಸ ಕೈಗೊಳ್ಳುವ ಮೋದಿ ಅವರನ್ನು ಭೇಟಿಯಾಗುವುದಾಗಿ 3 ದಿನಗಳ ಹಿಂದೆ ಮಾಜಿ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ (Donald Trump) ತಿಳಿಸಿದ್ದರು. ಕೆಲವು ದಿನಗಳ ಹಿಂದೆಯಷ್ಟೇ ದುಷ್ಕರ್ಮಿಯೋರ್ವನ ಗುಂಡಿನ ದಾಳಿಯಿಂದ ಪಾರಾದ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯೂ ಆಗಿರುವ ಡೊನಾಲ್ಡ್ ಟ್ರಂಪ್ ಅವರು ಮೋದಿ ಅವರೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿದ್ದರು. ಆದರೆ ಟ್ರಂಪ್‌ ಮತ್ತು ಮೋದಿ ಅವರ ಭೇಟಿಗೆ ಸಂಬಂಧಿಸಿದ ಅಮೆರಿಕ ಅಥವಾ ಭಾರತದ ಸಚಿವಾಲಯಗಳು ಇನ್ನೂ ಖಾತರಿ ನೀಡಿಲ್ಲ.

ಈ ಸುದ್ದಿಯನ್ನೂ ಓದಿ: PM Narendra Modi: ಸೆ. 21ರಿಂದ ಮೋದಿ ಅಮೆರಿಕ ಪ್ರವಾಸ; ಭೇಟಿಯಾಗಲು ಉತ್ಸುಕರಾದ ಡೋನಾಲ್ಡ್‌ ಟ್ರಂಪ್‌