Sunday, 15th December 2024

PM Narendra Modi: ಸೆ. 21ರಿಂದ ಮೋದಿ ಅಮೆರಿಕ ಪ್ರವಾಸ; ಭೇಟಿಯಾಗಲು ಉತ್ಸುಕರಾದ ಡೋನಾಲ್ಡ್‌ ಟ್ರಂಪ್‌

PM Narendra Modi

ವಾಷಿಂಗ್ಟನ್‌: ಕ್ವಾಡ್ ನಾಯಕರ 4ನೇ ಶೃಂಗಸಭೆ (Quad Leaders’ Summit)ಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಸೆಪ್ಟೆಂಬರ್ 21ರಿಂದ 23ರವರೆಗೆ ಅಮೆರಿಕಕ್ಕೆ ತೆರಳಲಿದ್ದಾರೆ. ಈ ವೇಳೆ ಮೋದಿ ಅವರನ್ನು ಭೇಟಿಯಾಗುವುದಾಗಿ ಅಮೆರಿಕದ ಮಾಜಿ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ (Donald Trump) ತಿಳಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್ ಆತಿಥ್ಯ ವಹಿಸಲಿರುವ, ಡೆಲಾವೇರ್ ವಿಲ್ಮಿಂಗ್ಟನ್‌ನಲ್ಲಿ ನಡೆಯಲಿರುವ ಕ್ವಾಡ್ ಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ಭಾರತ, ಅಮೆರಿಕ ಜತೆಗೆ ಚತುಷ್ಕೋನ ಭದ್ರತಾ ಸಭೆಯಲ್ಲಿ ಜಪಾನ್ ಮತ್ತು ಆಸ್ಟ್ರೇಲಿಯಾದ ನಾಯಕರು ಇರಲಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ದುಷ್ಕರ್ಮಿಯೋರ್ವನ ಗುಂಡಿನ ದಾಳಿಯಿಂದ ಪಾರಾದ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯೂ ಆಗಿರುವ ಡೊನಾಲ್ಡ್ ಟ್ರಂಪ್ ಅವರು ಮೋದಿ ಅವರೊಂದಿಗೆ ಮಾತುಕತೆ ನಡೆಸಲು ಉತ್ಸುಕರಾಗಿದ್ದಾರೆ. ಈ ವರ್ಷದ ಆರಂಭದಲ್ಲಿ, ಟ್ರಂಪ್ ಅವರು ಹಲವು ವಿದೇಶಿ ನಾಯಕರನ್ನು ಭೇಟಿಯಾಗಿದ್ದರು. ಹಂಗೇರಿಯ ಪ್ರಧಾನಿ ವಿಕ್ಟರ್ ಒರ್ಬಾನ್ ಮತ್ತು ಪೋಲಿಷ್ ಅಧ್ಯಕ್ಷ ಆ್ಯಂಡ್ರೆಜ್ ಡುಡಾ ಅವರ ಜತೆ ಮಾತುಕತೆ ನಡೆಸಿದ್ದರು. ಮಾತ್ರವಲ್ಲ ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಕ್ಯಾಮರೂನ್ ಅವರನ್ನು ಭೇಟಿಯಾಗಿದ್ದರು. ಇದೀಗ ಮೋದಿ ಅವರೊಂದಿಗೆ ಮಾತುಕತೆ ನಡೆಸುವುದಾಗಿ ಘೋಷಿಸಿದ್ದಾರೆ.

ಮಿಚಿಗನ್‌ನ ಫ್ಲಿಂಟ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಂಗಳವಾರ ಮಾತನಾಡಿದ ಟ್ರಂಪ್‌ ಅವರು ಮೊದಲ ಬಾರಿಗೆ ಮೋದಿ ಅವರನ್ನು ಭೇಟಿ ಮಾಡಿದ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ.

ಕಾರ್ಯಸೂಚಿ

ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ನಾಯಕರು ಕಳೆದ ಒಂದು ವರ್ಷದಲ್ಲಿ ಕ್ವಾಡ್ ಸಾಧಿಸಿದ ಪ್ರಗತಿ ಪರಿಶೀಲಿಸಲಿದ್ದಾರೆ ಮತ್ತು ಇಂಡೋ-ಪೆಸಿಫಿಕ್ ಪ್ರದೇಶದ ದೇಶಗಳಿಗೆ ತಮ್ಮ ಅಭಿವೃದ್ಧಿ ಗುರಿಗಳು ಮತ್ತು ಆಕಾಂಕ್ಷೆಗಳನ್ನು ಪೂರೈಸಲು ಸಹಾಯ ಮಾಡಲು ಮುಂದಿನ ವರ್ಷದ ಕಾರ್ಯಸೂಚಿಯನ್ನು ನಿಗದಿಪಡಿಸಲಿದ್ದಾರೆ. ಮುಂದಿನ ಕ್ವಾಡ್ ಶೃಂಗಸಭೆಯನ್ನು ಭಾರತ ಆಯೋಜಿಸಲಿದೆ.

ಅಮೆರಿಕ ಪ್ರವಾಸದ ವೇಳೆ ಸೆಪ್ಟೆಂಬರ್ 23ರಂದು ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರಧಾನಿ ಮೋದಿ ‘ಭವಿಷ್ಯದ ಶೃಂಗಸಭೆ’ ಉದ್ದೇಶಿಸಿ ಮಾತನಾಡಲಿದ್ದಾರೆ. ಇದರಲ್ಲಿ ಹಲವಾರು ವಿಶ್ವ ನಾಯಕರು ಭಾಗವಹಿಸಲಿದ್ದಾರೆ. ಶೃಂಗಸಭೆಯ ಹೊರತಾಗಿ, ಪ್ರಧಾನಿಯವರು ಹಲವು ವಿಶ್ವ ನಾಯಕರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ.

ಭಾರತೀಯ ಸಮುದಾಯವನ್ನುದ್ದೇಶಿ ಭಾಷಣ

ಮೋದಿ ಅವರು ಸೆಪ್ಟೆಂಬರ್ 22ರಂದು ಭಾರತೀಯ ಸಮುದಾಯದ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಎಐ, ಕ್ವಾಂಟಮ್ ಕಂಪ್ಯೂಟಿಂಗ್, ಅರೆವಾಹಕಗಳು ಮತ್ತು ಜೈವಿಕ ತಂತ್ರಜ್ಞಾನದ ಅತ್ಯಾಧುನಿಕ ಕ್ಷೇತ್ರಗಳಲ್ಲಿ ಉಭಯ ದೇಶಗಳ ನಡುವೆ ಹೆಚ್ಚಿನ ಸಹಯೋಗವನ್ನು ಬೆಳೆಸಲು ಅವರು ಅವರು ಮೂಲದ ಪ್ರಮುಖ ಕಂಪನಿಗಳ ಸಿಇಒಗಳೊಂದಿಗೂ ಸಂವಹನ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಟ್ರಂಪ್‌ ಮೇಲೆ ಎರಡನೇ ದಾಳಿ

ಅಮೆರಿಕದಲ್ಲಿ ನವೆಂಬರ್‌ನಲ್ಲಿ ಅಧ್ಯಕ್ಷೀಯ ಚುನಾವಣೆ (US Presidential Election 2024) ನಡೆಯಲಿದ್ದು, ಬಿರುಸಿನ ಪ್ರಚಾರ ನಡೆಯುತ್ತಿದೆ. ಈ ಮಧ್ಯೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮೇಲೆ ಭಾನುವಾರ (ಸೆಪ್ಟೆಂಬರ್‌ 15) ಫ್ಲೋರಿಡಾದ ವೆಸ್ಟ್ ಪಾಮ್ ಬೀಚ್‌ನಲ್ಲಿ ದಾಳಿ ನಡೆದಿತ್ತು. ಅದರಿಂದ ಪಾರಾದ ಅವರು ಇದೀಗ ಚೇತರಿಸಿಕೊಂಡಿದ್ದು, ಮತ್ತೆ ಪ್ರಚಾರ ಆರಂಭಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Ryan Wesley Routh: ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ ನಡೆಸಿದ ರಿಯಾನ್ ವೆಸ್ಲಿ ರೌತ್ ಯಾರು? ಈತನ ಹಿನ್ನೆಲೆ ಏನು?