ಮುಂಬೈ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಹತ್ಯೆ ಮಾಡುವುದಾಗಿ ಬೆದರಿಸಿ ಸಂದೇಶವೊಂದು ಬಂದಿದೆ ಎಂದು ಮುಂಬೈ ಪೊಲೀಸರು ಶನಿವಾರ (ಡಿ. 7) ತಿಳಿಸಿದ್ದಾರೆ. ರಾಜಸ್ಥಾನದ ಅಜ್ಮೀರ್ನಿಂದ ಈ ಬೆದರಿಕೆ ಸಂದೇಶ ಬಂದಿದ್ದು, ಕೂಡಲೇ ಪೊಲೀಸರು ಶಂಕಿತನನ್ನು ವಶಕ್ಕೆ ಪಡೆಯಲು ಧಾವಿಸಿದ್ದಾರೆ.
ಮುಂಜಾನೆ ಸಂಚಾರ ಪೊಲೀಸರ ಸಹಾಯವಾಣಿಗೆ ಬಂದ ವಾಟ್ಸ್ಆ್ಯಪ್ ಸಂದೇಶದಲ್ಲಿ ಇಬ್ಬರು ಐಎಸ್ಐ ಏಜೆಂಟರು ಮೋದಿ ಅವರನ್ನು ಗುರಿಯಾಗಿಸಲು ಬಾಂಬ್ ಸ್ಫೋಟ ನಡೆಸಲು ಸಂಚು ರೂಪಿಸಿದ್ದಾರೆ ಎಂದು ಉಲ್ಲೇಖಿಸಲಾಗಿತ್ತು ಎಂದು ಅವರು ಮೂಲಗಳು ತಿಳಿಸಿವೆ. ಸದ್ಯ ತನಿಖೆ ಮುಂದುವರಿದಿದೆ.
ತನಿಖಾಧಿಕಾರಿಗಳು ಹೇಳಿದ್ದೇನು?
ʼʼಸಂದೇಶ ಕಳುಹಿಸಿದ ವ್ಯಕ್ತಿಯ ಮಾನಸಿಕ ಆರೋಗ್ಯದ ಬಗ್ಗೆ ಪರಿಶೀಲಿಸಲಾಗುತ್ತಿದೆ. ಅಲ್ಲದೆ ಆತ ಕುಡಿದ ಮತ್ತಿನಲ್ಲಿ ಈ ರೀತಿಯ ಸಂದೇಶ ಕಳುಹಿಸಿದ್ದನೇ ಎನ್ನುವುದನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗಿದೆʼʼ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ಎಫ್ಐಆರ್ ದಾಖಲಿಸಲಾಗಿದೆ.
ಹಿಂದೆಯೂ ಬಂದಿತ್ತು
ಪ್ರಧಾನಿ ಮೋದಿ ಅವರಿಗೆ ಈ ಹಿಂದೆಯೂ ಹಲವು ಬಾರಿ ಪ್ರಾಣ ಬೆದರಿಕೆ ಸಂದೇಶ ಬಂದಿದ್ದವು. ʼʼಮುಂಬೈ ಸಂಚಾರ ಪೊಲೀಸರ ಸಹಾಯವಾಣಿಗೆ ಈ ಹಿಂದೆಯೂ ಹಲವು ಬಾರಿ ಹುಸಿ ಪ್ರಾಣ ಬೆದರಿಕೆ ಸಂದೇಶ ಬಂದಿದೆʼʼ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಲ್ಮಾನ್ ಖಾನ್ಗೂ ಪ್ರಾಣ ಬೆದರಿಕೆ
ಇನ್ನು ಕಳೆದ 10 ದಿನಗಳ ಅಂತರದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಒಡ್ಡಿ 2 ಸಂದೇಶಗಳು ಮುಂಬೈ ಸಂಚಾರ ಪೊಲೀಸರಿಗೆ ಬಂದಿವೆ. ʼʼಸಲ್ಮಾನ್ ಖಾನ್ ಜೀವ ಉಳಿಸಿಕೊಳ್ಳಬೇಕು ಎಂದಾದರೆ ರಾಜಸ್ಥಾನದಲ್ಲಿರುವ ಬಿಷ್ಣೋಯ್ ಸಮುದಾಯದ ದೇಗುಲಕ್ಕೆ ಹೋಗಿ ಕ್ಷಮೆಯಾಚಿಸಬೇಕು ಅಥವಾ 5 ಕೋಟಿ ರೂ. ನೀಡಬೇಕು. ಇಲ್ಲದಿದ್ದರೆ ಅವರನ್ನು ಹತ್ಯೆ ಮಾಡಲಾಗುವುದು. ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲು ಬಿಷ್ಣೋಯ್ ಗ್ಯಾಂಗ್ ಸಕ್ರಿಯವಾಗಿದೆʼʼ ಎಂಬ ಸಂದೇಶವನ್ನು ಇತ್ತೀಚೆಗೆ ಪೊಲೀಸರು ಸ್ವೀಕರಿಸಿದ್ದರು.
ಈ ಹಿಂದೆಯೂ ಸಲ್ಮಾನ್ ಖಾನ್ ಅವರು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನಿಂದ ನಿರಂತರವಾಗಿ ಪ್ರಾಣ ಬೆದರಿಕೆ ಎದುರಿಸಿದ್ದಾರೆ. ಸದ್ಯ ಲಾರೆನ್ಸ್ ಬಿಷ್ಣೋಯ್ ಜೈಲಿನಲ್ಲಿದ್ದರೂ ಆತನ ಸಹಚರರು ಬೆದರಿಕೆ ಹಾಕುತ್ತಲೇ ಇದ್ದಾರೆ. ಈ ವರ್ಷದ ಏಪ್ರಿಲ್ನಲ್ಲಿ ಮುಂಬೈಯ ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ಮನೆ ಮುಂದೆ ಗುಂಡಿನ ದಾಳಿ ನಡೆಸಲಾಗಿತ್ತು. ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿರಲಿಲ್ಲ. ಈ ದಾಳಿಯ ಹೊಣೆಯನ್ನೂ ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿತ್ತು.
ಸಲ್ಮಾನ್ ಖಾನ್ ಭದ್ರತೆ ಮತ್ತಷ್ಟು ಹೆಚ್ಚಳ
ಇತ್ತೀಚಿನ ದಿನಗಳಲ್ಲಿ ನಟ ಸಲ್ಮಾನ್ ಅವರಿಗೆ ಅನೇಕ ಕೊಲೆ ಬೆದರಿಕೆಗಳು ಬಂದಿವೆ. ಹಾಗಾಗಿ ಅವರಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಹೈಟೆಕ್ ಡ್ರೋನ್ಗಳು, ಕಮಾಂಡೋಗಳ ಮೂಲಕ ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ. ಚಿತ್ರೀಕರಣಕ್ಕೂ ಅವರು ಬಿಗಿ ಭದ್ರತೆಯಲ್ಲಿ ತೆರಳುವಂತಾಗಿದೆ. ಸದ್ಯ ಅವರು ರಶ್ಮಿಕಾ ಮಂದಣ್ಣ ಜತೆ ʼಸಿಖಂದರ್ʼ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ: Narendra Modi: ಪ್ರಧಾನಿ ನರೇಂದ್ರ ಮೋದಿ ವಿಮಾನದಲ್ಲಿ ತಾಂತ್ರಿಕ ದೋಷ