Thursday, 7th November 2024

Narendra Modi: ಕರೆ ಮಾಡಿ ಟ್ರಂಪ್‌ಗೆ ಅಭಿನಂದನೆ ಸಲ್ಲಿಸಿದ ಮೋದಿ; ಉಭಯ ನಾಯಕರ ಸಂಭಾಷಣೆ ಹೇಗಿತ್ತು?

ಹೊಸದಿಲ್ಲಿ: ಅಮೆರಿಕ ಅಧ್ಯಕ್ಷೀಯ ಚುನಾವಣೆ (US presidential elections)ಯಲ್ಲಿ ಕಮಲಾ ಹ್ಯಾರಿಸ್ (Kamala Harris) ಅವರನ್ನು ಮಣಿಸಿ ಡೋನಾಲ್ಡ್ ಟ್ರಂಪ್(Donald Trump) ಎರಡನೇ ಬಾರಿಗೆ ಅಧ್ಯಕ್ಷ ಸ್ಥಾನದ ಗದ್ದುಗೆ ಏರುವ ಮೂಲಕ ಇತಿಹಾಸ ಬರೆದಿದ್ದಾರೆ. ಅವರ ಈ ಐತಿಹಾಸಿಕ ಸಾಧನೆಗೆ ವಿಶ್ವದ ನಾನಾ ಕಡೆಯ ನಾಯಕರು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರೂ ಟ್ರಂಪ್‌ಗೆ ಕರೆ ಮಾಡಿ ಮಾತನಾಡಿದ್ದಾರೆ. ಇದೀಗ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA)ದ ವಕ್ತಾರರು ಉಭಯ ನಾಯಕರ ನಡುವಿನ ಸಂಭಾಷಣೆಯ ವಿವರಗಳನ್ನು ಹಂಚಿಕೊಂಡಿದ್ದಾರೆ.

“ಅಮೆರಿಕ ಜನರ ಆದೇಶವನ್ನು ಭಾರತ ಗೌರವಿಸುತ್ತದೆ” ಎಂದು ಎಂಇಎ ವಕ್ತಾರ ರಣಧೀರ್ ಜೈಸ್ವಾಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. “ಪ್ರಧಾನಿ ಮೋದಿ ಅವರು ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮಾತನಾಡಿದ್ದಾರೆ. ನಾವು ಅವರೊಂದಿಗೆ ನಿಕಟವಾಗಿ ಕೆಲಸ ಮಾಡಲು ಸಿದ್ಧರಿದ್ದೇವೆ ಎನ್ನುವ ಸಂದೇಶ ತಿಳಿಸಿದ್ದಾರೆ. ಸಂಭಾಷಣೆಯ ವೇಳೆ ಭಾರತ ಮತ್ತುಅಮೆರಿಕ ಎರಡೂ ದೇಶಗಳ ಜನರ ಸುಧಾರಣೆಗಾಗಿ ಮತ್ತು ಜಾಗತಿಕ ಶಾಂತಿ ಹಾಗೂ ಸಮೃದ್ಧಿಗಾಗಿ ಕೆಲಸ ಮಾಡುತ್ತೇವೆ ಎಂದು ಉಭಯ ನಾಯಕರು ಚರ್ಚೆ ನಡೆಸಿದ್ದಾರೆ” ಎಂದು ಜೈಸ್ವಾಲ್ ಹೇಳಿದ್ದಾರೆ.

ಮೋದಿ-ಟ್ರಂಪ್‌ ಗೆಳೆತನ

ಇದೇ ವೇಳೆ ಉಭಯ ನಾಯಕರು ತಮ್ಮ ಹಿಂದಿನ ಭೇಟಿಯ ದಿನಗಳನ್ನು ಮೆಲುಕು ಹಾಕಿದ್ದಾರೆ. ಟ್ರಂಪ್‌ ಅವರ ಮೊದಲ ಅಧಿಕಾವಧಿಯಲ್ಲಿ ಅಮೆರಿಕದ ಹ್ಯೂಸ್ಟನ್‌ನಲ್ಲಿ ನಡೆದ ‘ಹೌಡಿ ಮೋದಿ’ ಕಾರ್ಯಕ್ರಮ ಮತ್ತು ಅಹಮದಾಬಾದ್‌ನಲ್ಲಿ ಆಯೋಜಿಸಿದ್ದ ‘ನಮಸ್ತೆ ಟ್ರಂಪ್’ ಕಾರ್ಯಕ್ರಮ ಸೇರಿದಂತೆ ತಮ್ಮ ನಡುವೆ ನಡೆದ ವಿವಿಧ ಸ್ಮರಣೀಯ ಸಂವಾದಗಳನ್ನು ಮೋದಿ ನೆನಪಿಸಿಕೊಂಡಿದ್ದಾರೆ. ಮೋದಿ ಅವರು ಸ್ನೇಹಿತ ಟ್ರಂಪ್ ಅವರೊಂದಿಗೆ ಉತ್ತಮ ಸಂಭಾಷಣೆ ನಡೆಸಿದ್ದಾಗಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ನಮೋ ಗುಣಗಾನ ಮಾಡಿದ ಟ್ರಂಪ್‌

ಅಮೆರಿಕದ ಮುಂದಿನ ಅಧ್ಯಕ್ಷರಾಗಿ ಟ್ರಂಪ್ ಅವರನ್ನು ಘೋಷಿಸಿದ 12 ಗಂಟೆಗಳ ಒಳಗೆ ಪ್ರಧಾನಿ ಮೋದಿ ಮತ್ತು ಟ್ರಂಪ್ ನಡುವೆ ಪೋನ್ ಸಂಭಾಷಣೆ ನಡೆದಿದ್ದು, ಇಬ್ಬರು ವಿಶ್ವನಾಯಕರು ಪರಸ್ಪರ ತಮ್ಮನ್ನು ಹೊಗಳಿಕೊಂಡಿದ್ದರು. ಇದೇ ವೇಳೆ ಟ್ರಂಪ್‌ ಅವರು ನರೇಂದ್ರ ಮೋದಿ ಅವರನ್ನು ಇಡೀ ಜಗತ್ತೇ ಪ್ರೀತಿಸುತ್ತದೆ ಎಂದಿದ್ದಾರೆ. ಅಲ್ಲದೇ ಮೋದಿ ಮಹಾನ್‌ ವ್ಯಕ್ತಿ ಹಾಗೂ ಭಾರತ ಅಮೋಘ ರಾಷ್ಟ್ರ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

47ನೇ ಅಧ್ಯಕ್ಷ

78 ವರ್ಷದ ಟ್ರಂಪ್‌ ತಮ್ಮ ರಾಜಕೀಯ ಎದುರಾಳಿ ಡೆಮಾಕ್ರಾಟಿಕ್‌ನ ಕಮಲಾ ಹ್ಯಾರಿಸ್‌ ಅವರನ್ನು ಪರಾಜಯಗೊಳಿಸುವ ಮೂಲಕ ಅಧಿಕಾರಕ್ಕೆ ಮರಳಿದ್ದಾರೆ. ಆ ಮೂಲಕ ಅಮೆರಿಕದ 47ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಟ್ರಂಪ್‌ ಈ ಹಿಂದೆ 45ನೇ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 2016ರ ಚುನಾವಣೆಯಲ್ಲಿ ಅವರು ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿದ್ದರು. ಮುಂದಿನ ವರ್ಷ ಜನವರಿರಿಂದ ಅವರ ಅಧಿಕಾರಾವಧಿ ಆರಂಭವಾಗಲಿದೆ. 2020ರಲ್ಲಿ ನಡೆದ ಚುನಾವಣೆಯಲ್ಲಿ ಅವರು ಜೋ ಬೈಡನ್‌ ವಿರುದ್ಧ ಸೋಲುಂಡಿದ್ದರು. 2021ರಿಂದ ಭಾರತದ ಮೂಲದ ಕಮಲಾ ಹ್ಯಾರೀಸ್‌ ಉಪಾಧ್ಯಕ್ಷೆಯಾಗಿದ್ದಾರೆ.

ಈ ಸುದ್ದಿಯನ್ನೂ ಓದಿ: Donald Trump: ನವೀಕರಿಸಬಹುದಾದ ಇಂಧನ ಯೋಜನೆ ಸ್ಥಗಿತ; ಟ್ರಂಪ್‌ ಘೋಷಣೆ ಬೆನ್ನಲ್ಲೇ ಷೇರುಪೇಟೆಯಲ್ಲಿ ತಲ್ಲಣ