Monday, 13th January 2025

Narendra Modi: ಝಡ್-‌ಮೋರ್ಹ್‌ ಸುರಂಗ ಮಾರ್ಗ ಪ್ರಧಾನಿ ನರೇಂದ್ರ ಮೋದಿಯಿಂದ ಉದ್ಘಾಟನೆ!

ಶ್ರೀನಗರ: ಪ್ರಧಾನಮಂತ್ರಿ ನರೇಂದ್ರ ಮೋದಿ(Narendra Modi) ಅವರು ಇಂದು(ಜ.13) ಕಾಶ್ಮೀರದ(Kashmir) ಗಾಂದರ್‌ಬಲ್(Ganderbal) ಜಿಲ್ಲೆಯಲ್ಲಿ 6.5 ಕಿಮೀ ಝಡ್-ಮೋರ್ಹ್ ಸುರಂಗವನ್ನು(Z-Morh Tunnel) ಉದ್ಘಾಟಿಸಿದರು.

ಬೆಳಗ್ಗೆ 10.45ರ ಸರಿ ಸುಮಾರಿಗೆ ಶ್ರೀನಗರ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಮೋದಿ ಅವರು ಆಯಕಟ್ಟಿನ ಸುರಂಗ ಮಾರ್ಗದ ಉದ್ಘಾಟನೆಗೆ ಸೋನ್ಮಾರ್ಗ್‌ಗೆ ತೆರಳಿದರು. ಮಹತ್ವದ ಯೋಜನೆಯನ್ನು ಮೋದಿ ಇಂದು ಉದ್ಘಾಟಿಸಿದ್ದಾರೆ. ಉದ್ಘಾಟನೆಯ ಸಂದರ್ಭದಲ್ಲಿ ಅವರೊಂದಿಗೆ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಉಪಸ್ಥಿತರಿದ್ದರು. ರಕ್ಷಣಾ ದೃಷ್ಟಿಯಿಂದಲೂ ಇದು ಮಹತ್ವದ್ದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಹತ್ವದ ಮೂಲಸೌಕರ್ಯ ಯೋಜನೆಯಾದ ಝಡ್‌-ಮೋರ್ಹ್ ಸುರಂಗವು ಕೇಂದ್ರ ಕಾಶ್ಮೀರದ ಗಾಂದರ್‌ಬಲ್‌ನ ಸೋನಾಮಾರ್ಗ್ ಗಿರಿಧಾಮದಲ್ಲಿದ್ದು, ಚಳಿಗಾಲದ ಪ್ರವಾಸೋದ್ಯಮ ಅವಕಾಶಗಳನ್ನು ತೆರೆಯಲು ಸಜ್ಜಾಗಿದೆ.

ಝಡ್-ಮೋರ್ಹ್‌ ಸುರಂಗದ ವಿಶೇಷತೆ ಏನು?

6.5 ಕಿಮೀ ಉದ್ದದ ಎರಡು ಪಥಗಳ ಸುರಂಗ ಮಾರ್ಗವನ್ನು ಗಾಂದರ್‌ಬಾಲ್ ಜಿಲ್ಲೆಯ ಗಗಂಗೀರ್ ಮತ್ತು ಸೋನಾಮಾರ್ಗ್ ಅನ್ನು ಸಂಪರ್ಕಿಸುವ ₹ 2,700 ಕೋಟಿಗೂ ಹೆಚ್ಚಿನ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಸಮುದ್ರ ಮಟ್ಟದಿಂದ 8,650 ಅಡಿಗಿಂತ ಹೆಚ್ಚು ಎತ್ತರದಲ್ಲಿ ನೆಲೆಗೊಂಡಿರುವ ಝಡ್-ಮೋರ್ಹ್ ಸುರಂಗವು ಶ್ರೀನಗರ ಮತ್ತು ಸೋನಾಮಾರ್ಗ್ ನಡುವೆ ಸಂಪರ್ಕ ಸಾಧಿಸುತ್ತದೆ. ಭೂಕುಸಿತ ಮತ್ತು ಹಿಮಕುಸಿತ ಪ್ರದೇಶಗಳನ್ನು ಬೈಪಾಸ್ ಮಾಡುವಾಗ ಲೇಹ್‌ಗೆ ಮಾರ್ಗವನ್ನು ಇದು ಸುಗಮಗೊಳಿಸುತ್ತದೆ.

ವಿಶೇಷವಾಗಿ ಸೋನಾಮಾರ್ಗ್ ಅಭಿವೃದ್ಧಿ ಪ್ರಾಧಿಕಾರ (ಎಸ್‌ಡಿಎ) ನಿರ್ಮಿಸಿರುವ ಅತ್ಯಾಧುನಿಕ ಐಸ್-ಸ್ಕೇಟಿಂಗ್ ರಿಂಕ್ ಚಳಿಗಾಲದ ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸುವ ಹೊಸ ಭರವಸೆಯನ್ನು ಹುಟ್ಟುಹಾಕಿದೆ. ಐಸ್-ಸ್ಕೇಟಿಂಗ್ ರಿಂಕ್, ಈಗಾಗಲೇ ಸಾವಿರಾರು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಚಳಿಗಾಲದ ಕ್ರೀಡಾ ತಾಣವಾಗಿ ಸೋನಾಮಾರ್ಗ್‌ ಹೊಸ ಯುಗಕ್ಕೆ ನಾಂದಿ ಹಾಡಿದೆ. ಇದು ಪ್ರವಾಸಿಗರನ್ನಷ್ಟೇ ಆಕರ್ಷಿಸದೇ ಸ್ಥಳೀಯ ಯುವಕರಿಗೆ ಅವಕಾಶಗಳನ್ನು ಸೃಷ್ಟಿಸುತ್ತಿದೆ.

ಕ್ರೀಡಾಪಟುಗಳು, ತರಬೇತುದಾರರು, ವೃತ್ತಿಪರವಾಗಿ ಚಳಿಗಾಲದ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಲು ಈ ರಿಂಕ್ ವೇದಿಕೆಯನ್ನು ಒದಗಿಸಲಿದೆ ಎಂದು ಎಸ್‌ಡಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಸೋನಾಮಾರ್ಗ್ ಬೇಸಿಗೆಯಲ್ಲಿ ಸ್ಥಳೀಯ ಮತ್ತು ಸ್ಥಳೀಯೇತರ ಪ್ರವಾಸಿಗರಿಂದ ತುಂಬಿ ತುಳುಕುತ್ತಿರುತ್ತದೆ. ಪ್ರತಿ ವರ್ಷ ಚಳಿಗಾಲದಲ್ಲಿ ಭಾರಿ ಹಿಮಪಾತದಿಂದಾಗಿ ಸಾರ್ವಜನಿಕರಿಗೆ ಮತ್ತು ಸಂಚಾರಕ್ಕೆ ಮುಚ್ಚಿರುತ್ತದೆ.

ಈ ಸುದ್ದಿಯನ್ನೂ ಓದಿ:Anita Anand: ಕೆನಡಾ ಪ್ರಧಾನಿ ರೇಸ್‌ನಿಂದ ಅನಿತಾ ಆನಂದ್‌ ಔಟ್!

Leave a Reply

Your email address will not be published. Required fields are marked *