ನ್ಯೂಯಾರ್ಕ್: ಬಾಲಿವುಡ್ ನಟಿ ನರ್ಗಿಸ್ ಫಕ್ರಿ (Nargis Fakhri) ಅವರ ಸಹೋದರಿ, ಅಲಿಯಾ ಫಕ್ರಿಯನ್ನು (Alia Fakhri) ಕೊಲೆ ಕೇಸ್ ಮೇಲೆ ನ್ಯೂಯಾರ್ಕ್ (New York) ಪೊಲೀಸರು ಬಂಧಿಸಿದ್ದಾರೆ. ಮಾಜಿ ಗೆಳೆಯ ಎಡ್ವರ್ಡ್ ಜೇಕಬ್ಸ್ ಹಾಗೂ ಆತನ ಪ್ರೇಯಸಿ ಅನಸ್ತಾಸಿಯಾ ಸ್ಟಾರ್ ಎಟಿಯೆನ್ನೆ ಎಂಬುವವರನ್ನು ಕೊಲೆ ಮಾಡಿದ್ದಕ್ಕಾಗಿ ಆಕೆಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ವರದಿಯ ಪ್ರಕಾರ ಅಲಿಯಾ ಎರಡು ಅಂತಸ್ತಿನ ಗ್ಯಾರೇಜ್‌ಗೆ ಬೆಂಕಿ ಹಚ್ಚಿದ್ದಳು ಇದರ ಪರಿಣಾಮವಾಗಿ ಇಬ್ಬರು ಮೃತಪಟ್ಟಿದ್ದರು.
ಕೊಲೆಯ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು ಆರೋಪಿ ಉದ್ದೇಶಪೂರಿತವಾಗಿ ಬೆಂಕಿ ಹಚ್ಚಿದ್ದಾಳೆ. ಆಕೆಗೆ ತನ್ನ ಮಾಜಿ ಗೆಳೆಯನ ಮೇಲೆ ದ್ವೇಷವಿದ್ದರಿಂದ ಈ ಕೆಲಸ ಮಾಡಿದ್ದಾಳೆ ಎಂದು ತಿಳಿಸಿದ್ದಾರೆ. ಗ್ಯಾರೇಜ್‌ಗೆ ಬಂದ ಅಲಿಯಾ ಫಕ್ರಿ ಮುಖ್ಯ ಬಾಗಿಲಿಗೆ ಬೆಂಕಿ ಹಚ್ಚಿದ್ದಾಳೆ ಇದರಿಂದ ಕ್ಷಣಾರ್ಧದಲ್ಲೇ ಅಗ್ನಿ ಇಡೀ ಕಟ್ಟಡವನ್ನೇ ವ್ಯಾಪಿಸಿಕೊಂಡಿದೆ. ಈ ವೇಳೆ ಒಳಗಿದ್ದ ಇಬ್ಬರು ಹೊರಗೆ ಬರಲು ಸಾಕಷ್ಟು ಪ್ರಯತ್ನ ಪಟ್ಟರೂ ಹೊರಬರದೇ ಸಜೀವ ದಹನವಾಗಿದ್ದಾರೆ ಎಂದು ತಿಳಿಸಿದ್ದಾರೆ.
ಕೊಲೆಯ ಬಗ್ಗೆ ಪ್ರತಿಕ್ರಿಯಿಸಿರುವ ನರ್ಗಿಸ್ ತಾಯಿ ಅಲಿಯಾಳನ್ನು ಸಮರ್ಥಿಸಿಕೊಂಡಿದ್ದಾರೆ. ಅವಳು ಯಾರನ್ನಾದರೂ ಕೊಲ್ಲುತ್ತಾಳೆ ಎಂದು ನಾನು ಭಾವಿಸುವುದಿಲ್ಲ, ಅವಳು ಎಲ್ಲರನ್ನೂ ಕಾಳಜಿ ವಹಿಸುವ ವ್ಯಕ್ತಿ. ಎಲ್ಲರಿಗೂ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದಳು ಎಂದು ಹೇಳಿದ್ದಾರೆ. ಪ್ರತ್ಯಕ್ಷದರ್ಶಿಯೊಬ್ಬರ ಹೇಳಿಕೆಯ ಪ್ರಕಾರ , “ನಮಗೆ ಎನೋ ಸುಟ್ಟ ವಾಸನೆ ಬಂದಿತ್ತು. ಹೊರ ಬಂದು ನೋಡಿದರೆ ಬೆಂಕಿ ಹತ್ತಿಕೊಂಡು ಉರಿಯುತ್ತಿತ್ತು ಎಂದು ಹೇಳಿದ್ದಾರೆ.
ಘಟನೆಯ ಬಗ್ಗೆ ಎಡ್ವರ್ಡ್ ಅವರ ತಾಯಿ ಮಾತನಾಡಿದ್ದು, ಈ ಹಿಂದೆ ಎಡ್ವರ್ಡ್ ಹಾಗೂ ಆಲಿಯಾ ಪ್ರೀತಿಸುತ್ತಿದ್ದರು. ಆದರೆ ಒಂದು ವರ್ಷದ ಹಿಂದೆ ಬೇರ್ಪಟ್ಟಿದ್ದರು. ಅವರ ನಡುವಿನ ಸಂಬಂಧ ಮುರಿದ ಬಿದ್ದ ನಂತರವೂ ಆಲಿಯಾ ಆತನನ್ನು ಭೇಟಿಯಾಗಲು ಪ್ರಯತ್ನ ಪಡುತ್ತಿದ್ದಳು. ಅವಳಿಗೆ ಬ್ರೇಕ್‌ಅಪ್ ಮಾಡಿಕೊಂಡಿರುವುದು ಇಷ್ಟವಿರಲಿಲ್ಲ ಎಂದು ಹೇಳಿದ್ದಾರೆ.
ಜಾಕೋಬ್ ಪ್ಲಂಬರ್ ಆಗಿದ್ದು, ಗ್ಯಾರೇಜ್ ಅನ್ನು ಅಪಾರ್ಟ್ಮೆಂಟ್ ಆಗಿ ಪರಿವರ್ತಿಸಲು ಕೆಲಸ ಮಾಡುತ್ತಿದ್ದ ಎಂದು ಹೇಳಿದ್ದಾರೆ. ಎಡ್ವರ್ಡ್ ಹಾಗೂ ಆತನ ಜೊತೆ ಮೃತ ಪಟ್ಟಿರುವ ಎಟಿಯೆನ್ನೆ ಬಗ್ಗೆ ಮಾತನಾಡಿ ಅವರಿಬ್ಬರೂ ಉತ್ತಮ ಸ್ನೇಹಿತರಾಗಿದ್ದರು, ಅವರ ನಡುವೆ ಯಾವುದೇ ಪ್ರೇಮ ಸಂಬಂಧವಿರಲಿಲ್ಲ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ : Kichcha Sudeep: ಆಮೀರ್ ಖಾನ್- ಕಿಚ್ಚ ಸುದೀಪ್ ಒಟ್ಟಿಗೆ ಸಿನಿಮಾ ಮಾಡ್ತಿದಾರಾ?