ತೆರಿಗೆ ಪಾವತಿ ವೇಳೆ ಹೆಚ್ಚಿನ ಉಳಿತಾಯ ಮಾಡಬೇಕು ಎನ್ನುವುದು ಎಲ್ಲರ ಬಯಕೆ. ಇದಕ್ಕೆ ನೆರವಿಗೆ ಬರುವ ಹಲವಾರು ಯೋಜನೆಗಳಿವೆ. ತೆರಿಗೆ ಪ್ರಯೋಜನಗಳ (tax benefits) ಲಾಭ ಪಡೆಯಲು ಕೆಲವು ಉಳಿತಾಯ ಯೋಜನೆಗಳು (saving schemes) ಸಹಾಯ ಮಾಡುತ್ತದೆ. ಇದರಲ್ಲಿ ಸರ್ಕಾರದ ಬೆಂಬಲಿತ ಸುರಕ್ಷಿತ ಮತ್ತು ವಿಶ್ವಾಸಾರ್ಹ ಹೂಡಿಕೆ ಯೋಜನೆಯು (National Savings Certificate) ಒಂದು ಆಯ್ಕೆಯಾಗಿದೆ.
ಹಣಕಾಸಿನ ಭದ್ರತೆ, ಮಾನಸಿಕ ನೆಮ್ಮದಿ, ಆಕರ್ಷಕ ಆದಾಯ, ಕನಿಷ್ಠ ಅಪಾಯ ಹೊಂದಿರುವ ಹೂಡಿಕೆ ಯೋಜನೆಯು ಹೆಚ್ಚಿನ ಹೂಡಿಕೆದಾರರ ಪ್ರಮುಖ ಆಯ್ಕೆಯಾಗಿರುತ್ತದೆ. ಮಗುವಿನ ಶಿಕ್ಷಣ, ನಿವೃತ್ತಿಯಂತಹ ದೀರ್ಘಾವಧಿಯ ಗುರಿಗಳಿಗಾಗಿ, ಕಷ್ಟಪಟ್ಟು ಗಳಿಸಿದ ಹಣದ ಮೌಲ್ಯವನ್ನು ಗರಿಷ್ಠಗೊಳಿಸಲು ಬಯಸುವವರಿಗೆ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆ ಸೂಕ್ತವಾಗಿದೆ. ಈ ಯೋಜನೆಯು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ಪ್ರಯೋಜನವನ್ನು ಒದಗಿಸುತ್ತದೆ.
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) ಸರ್ಕಾರಿ ಬೆಂಬಲಿತ ಸ್ಥಿರ- ಆದಾಯ ಹೂಡಿಕೆ ಯೋಜನೆಯಾಗಿದೆ. ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯು ಪ್ರಾರಂಭಿಸಿದ ಈ ಯೋಜನೆಯು ಆಕರ್ಷಕ ಬಡ್ಡಿದರ ಹೊಂದಿದ್ದು, ದೀರ್ಘಾವಧಿಯ ಉಳಿತಾಯವನ್ನು ಉತ್ತೇಜಿಸುತ್ತದೆ. ಈ ಯೋಜನೆಯಡಿಯಲ್ಲಿ ಒಬ್ಬ ವ್ಯಕ್ತಿಯು ಕನಿಷ್ಠ 1,000 ರೂ. ಹೂಡಿಕೆ ಮಾಡಬಹುದು. ಗರಿಷ್ಠ ಠೇವಣಿ ಮಿತಿಯಿಲ್ಲದೆ 5 ವರ್ಷಗಳ ಅವಧಿಗೆ ಹೂಡಿಕೆ ಮಾಡಬಹುದು.
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಖಾತೆಗಳ ವಿಧಗಳು
ಇದರಲ್ಲಿ ವಯಸ್ಕರು ತಮಗಾಗಿ ಅಥವಾ ಅಪ್ರಾಪ್ತ, ಮಾನಸಿಕ ಅಸ್ವಸ್ಥ ವ್ಯಕ್ತಿಯ ಪರವಾಗಿ 10 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಅಪ್ರಾಪ್ತರಿಗಾಗಿ ತೆರೆಯಬಹುದು.
ಜಂಟಿ ಎ-ಟೈಪ್, ಜಂಟಿ ಬಿ- ಟೈಪ್ ಖಾತೆಯನ್ನು ಮೂವರು ವಯಸ್ಕರು ಜಂಟಿಯಾಗಿ ತೆರೆಯಬಹುದು.
ಪ್ರಯೋಜನಗಳು
ವಾರ್ಷಿಕವಾಗಿ ಶೇ. 7.7 ಬಡ್ಡಿ ದರವನ್ನು ಮುಕ್ತಾಯದ ಸಮಯದಲ್ಲಿ ಪಾವತಿಸಲಾಗುತ್ತದೆ. ಗರಿಷ್ಠ ಠೇವಣಿಗೆ ಯಾವುದೇ ಮಿತಿ ಇಲ್ಲ. ಹೂಡಿಕೆ ಅವಧಿ 5 ವರ್ಷ. ಈ ಯೋಜನೆಯಡಿ ಸಾಲ ಸೌಲಭ್ಯ ಪಡೆಯುವ ಅವಕಾಶವಿದೆ.
ಯಾರು ತೆರೆಯಬಹುದು?
ಯಾವುದೇ ಭಾರತೀಯ ನಿವಾಸಿ ಈ ಖಾತೆಯನ್ನು ತೆರೆಯಬಹುದು. ಅಪ್ರಾಪ್ತ ವಯಸ್ಕರು ಅಥವಾ ಮಾನಸಿಕ ಅಸ್ವಸ್ಥರ ಪರವಾಗಿ ಅವರ ಪೋಷಕರು ಈ ಖಾತೆಯನ್ನು ತೆರೆಯಬಹುದು. ಖಾತೆ ತೆರೆಯಲು ಅಪ್ರಾಪ್ತರು ಕನಿಷ್ಠ 10 ವರ್ಷ ವಯಸ್ಸಿನವರಾಗಿರಬೇಕು.
ಕನಿಷ್ಠ 1,000 ರೂ. ಠೇವಣಿ ಮಾಡಬಹುದು. ಗರಿಷ್ಠ ಠೇವಣಿಗಳ ಮೇಲೆ ಮಿತಿ ಇಲ್ಲ. ಬಡ್ಡಿಯನ್ನು ವಾರ್ಷಿಕವಾಗಿ ನೀಡಿ ಮುಕ್ತಾಯದ ಸಮಯದಲ್ಲಿ ಪಾವತಿಸಲಾಗುತ್ತದೆ. ಮುಕ್ತಾಯದ ಅನಂತರ ಖಾತೆದಾರರು ಪಾವತಿಗಾಗಿ ನಿರ್ದಿಷ್ಟ ಅರ್ಜಿ ಸಲ್ಲಿಸಬೇಕು.
ನೋಂದಣಿ ಪ್ರಕ್ರಿಯೆ
ಹತ್ತಿರದ ಅಂಚೆ ಕಚೇರಿ ಅಥವಾ ಗೊತ್ತುಪಡಿಸಿದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬಹುದು. ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ ಅಥವಾ ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿ, ಭರ್ತಿ ಮಾಡಿ, ಅಗತ್ಯವಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ.
ಆರಂಭಿಕ ಹೂಡಿಕೆ ಮೊತ್ತದೊಂದಿಗೆ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಖಾತೆಯ ಪ್ರಾರಂಭವನ್ನು ದೃಢೀಕರಿಸುವ ಸ್ವೀಕೃತಿಯನ್ನು ಒದಗಿಸಲಾಗುತ್ತದೆ.
ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ ಖಾತೆಗಳನ್ನು ಅಕಾಲಿಕವಾಗಿ ಮುಚ್ಚಬಹುದು. ಉದಾಹರಣೆಗೆ ಖಾತೆದಾರರ ಸಾವು, ಗೆಜೆಟೆಡ್ ಅಧಿಕಾರಿಯಿಂದ ಮುಟ್ಟುಗೋಲು, ನ್ಯಾಯಾಲಯದ ಆದೇಶ.
ವರ್ಗಾವಣೆ ಮತ್ತು ನಾಮನಿರ್ದೇಶನ
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಖಾತೆಯನ್ನು ವರ್ಗಾವಣೆ ಮಾಡಬಹುದು. ಹೂಡಿಕೆದಾರರು ಇನ್ನೊಬ್ಬ ವ್ಯಕ್ತಿಗೆ ಪ್ರಮಾಣಪತ್ರಗಳನ್ನು ನಿಯೋಜಿಸಲು ಅಥವಾ ವರ್ಗಾಯಿಸಲು ಅವಕಾಶವಿದೆ.
Lottery Winner: 1,804 ಕೋಟಿ ರೂ. ಜಾಕ್‌ಪಾಟ್ ಗೆದ್ದ! ರಾತ್ರಿ ಬೆಳಗಾಗುವಷ್ಟರಲ್ಲಿ ದೇಶದ ಶ್ರೀಮಂತ!
ಅಗತ್ಯವಿರುವ ದಾಖಲೆಗಳು
ಪಾಸ್ ಪೋರ್ಟ್ ಗಾತ್ರದ ಫೋಟೋ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವಯಸ್ಸಿನ ದಾಖಲೆ, ಗುರುತು ಪತ್ರ, ವಿಳಾಸ ದಾಖಲೆ ಇತ್ಯಾದಿ.