Saturday, 14th December 2024

ಮೂವರು ಶಂಕಿತ ಮಾವೋವಾದಿಗಳ ಹತ್ಯೆ

ಭುವನೇಶ್ವರ: ಮಲ್ಕನ್‌ಗಿರಿ ಜಿಲ್ಲೆಯ ತುಳಸಿ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಗೆ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಶಂಕಿತ ಮಾವೊವಾದಿಗಳು ಹತರಾಗಿದ್ದಾರೆ.

ವಿಶೇಷ ಕಾರ್ಯಾಚರಣೆ ತಂಡ ಮತ್ತು ಮಲ್ಕನ್‌ಗಿರಿ ಜಿಲ್ಲಾ ಸ್ವಯಂ ಸೇವಾ ಪಡೆಯವರು ಗುಪ್ತಚರ ಮಾಹಿತಿ ಆಧರಿಸಿ ಜಂಟಿಯಾಗಿ ಅರಣ್ಯ ಪ್ರದೇಶದಲ್ಲಿ ಶೋಧಕಾರ್ಯ ಕೈಗೊಂಡರು ಎಂದು ಡಿಜಪಿ ಅಭಯ್‌ ತಿಳಿಸಿದರು.

ಒಡಿಶಾ ಮತ್ತು ಆಂಧ್ರಪ್ರದೇಶ ಗಡಿಭಾಗದ ಕೆರಿಮಿಟಿ ಹಳ್ಳಿಯ ಸಮೀಪದ ಅರಣ್ಯ ಪ್ರದೇಶದಲ್ಲಿ ಕಾರ್ಯಾ ಚರಣೆ ನಡೆಸುತ್ತಿರುವುದನ್ನು ಖಚಿತಪಡಿಸಿ ಕೊಂಡ ಮಾವೊವಾದಿಗಳು, ಗುಂಡು ಹಾರಿಸಿದರು. ಭದ್ರತಾ ಪಡೆಗಳು ಪ್ರತಿ ಗುಂಡಿನ ದಾಳಿ ನಡೆಸಿದರು.

ಅರಣ್ಯ ಪ್ರದೇಶದಲ್ಲಿ ಇನ್ನೂ 30 ರಿಂದ 40 ಮಂದಿ ನಕ್ಸಲರಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದ್ದು, ಕಾರ್ಯಾಚರಣೆ ಮುಂದುವರಿಯಲಿದೆ’ ಎಂದು ಡಿಜಿಪಿ ತಿಳಿಸಿದರು. ಒಡಿಶಾದಲ್ಲಿ 2020ರಲ್ಲಿ ನಿಷೇಧಿತ ಸಿಪಿಐ(ಮಾವೊವಾದಿ)ನ 16 ಸದಸ್ಯರನ್ನು ಭದ್ರತಾ ಪಡೆಗಳು ಗುಂಡಿಕ್ಕಿ ಕೊಂದಿದ್ದವು.