ನವದೆಹಲಿ: ಫಾರೂಖ್ ಅಬ್ದುಲ್ಲಾ ಅವರ ನ್ಯಾಷನಲ್ ಕಾನ್ಫರೆನ್ಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದ ದೇವೇಂದ್ರ ರಾಣಾ ಮತ್ತು ಸುರ್ಜಿತ್ ಸಿಂಗ್ ಸ್ಲಾಥಿಯಾ ಸೋಮವಾರ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ಹರ್ದೀಪ್ ಸಿಂಗ್ ಹಾಗೂ ಜಿತೇಂದ್ರ ಸಿಂಗ್ ಸಮ್ಮುಖದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿ ರುವುದಾಗಿ ವರದಿ ತಿಳಿಸಿದೆ. ರಾಣಾ ಮಾಜಿ ಶಾಸಕ ಹಾಗೂ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರ ಸಹೋದರ. ರಾಣಾ ಅವರು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ನ್ಯಾಷನಲ್ ಕಾನ್ಫರೆನ್ಸ್ ನ ಒಮರ್ ಅಬ್ದುಲ್ಲಾ ಅವರ ರಾಜಕೀಯ ಸಲಹೆಗಾರರಾಗಿಯೂ ಕಾರ್ಯನಿರ್ವಹಿಸಿದ್ದರು.
ಇಬ್ಬರ ಸೇರ್ಪಡೆಯನ್ನು ಜಮ್ಮು-ಕಾಶ್ಮೀರದ ಭಾರತೀಯ ಜನತಾ ಪಕ್ಷದ ಪ್ರಧಾನ ಕಾರ್ಯದರ್ಶಿ ತರುಣ್ ಚುಂಗ್ ಮತ್ತು ಜಮ್ಮು-ಕಾಶ್ಮೀರ ಘಟಕದ ಅಧ್ಯಕ್ಷ ರವೀಂದ್ರ ರೈನಾ ಅವರು ಸ್ವಾಗತಿಸಿದ್ದಾರೆ.
2019ರಲ್ಲಿ ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿತ್ತು. ಬಳಿಕ ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಿತ್ತು.