ನವದೆಹಲಿ: ಬಿಜೆಪಿ (BJP) ನೇತೃತ್ವದ ಎನ್ಡಿಎ (NDA) ಮೈತ್ರಿಕೂಟ 3ನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದೆ. ಸತತವಾಗಿ ಎನ್ಡಿಎ ಗದ್ದುಗೆಗೆ ಏರುವಲ್ಲಿ ಪ್ರಮುಖ ಪಾತ್ರವಹಿಸಿರುವ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ (J.P. Nadda) ಅವರ ಅಧಿಕಾರಾವಧಿ ಕಳೆದ ವರ್ಷವೇ ಪೂರ್ಣಗೊಂಡಿದ್ದು, 2024ರ ಜೂನ್ನಲ್ಲಿ ಮತ್ತೆ 6 ತಿಂಗಳಿಗೆ ವಿಸ್ತರಿಸಲಾಗಿತ್ತು. ಹೀಗಾಗಿ ಈ ತಿಂಗಳು ಕೇಸರಿ ಪಕ್ಷ ಹೊಸ ಅಧ್ಯಕ್ಷರನ್ನು ನೇಮಿಸಲಿದ್ದು, ಅದಕ್ಕಾಗಿ ಕಸರತ್ತು ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಸಮರ್ಥ ನಾಯಕರನ್ನು ಆಯ್ಕೆ ಮಾಡಲು ಮುಂದಾಗಿದೆ. ರಾಷ್ಟ್ರೀಯ ಅಧ್ಯಕ್ಷರ ಜತೆಗೆ ವಿವಿಧ ರಾಜ್ಯಗಳ ನಾಯಕತ್ವಕ್ಕೂ ಮೇಜರ್ ಸರ್ಜರಿ ನಡೆಯಲಿದೆ. ಹೊಸ ನಾಯಕತ್ವವು ಬಿಜೆಪಿಯ ಭವಿಷ್ಯದ ಕಾರ್ಯತಂತ್ರ ಮತ್ತು ಪಕ್ಷದ ಮೇಲೆ ಗಣನೀಯ ಪ್ರಮಾಣದಲ್ಲಿ ಪ್ರಭಾವ ಬೀರಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ವಿವಿಧ ರಾಜ್ಯಗಳಲ್ಲಿ ಪಕ್ಷದ ಉನ್ನತ ಹುದ್ದೆಯಲ್ಲಿರುವ ಪ್ರಮುಖರಿಗೆ ಭವಿಷ್ಯದಲ್ಲಿ ಹೊಸ ಜವಾಬ್ದಾರಿ ದೊರೆಯುವ ಅವಕಾಶವಿದೆ. ಜತೆಗೆ ಈ ವರ್ಷದ ಮಧ್ಯ ಭಾಗದಲ್ಲಿ ಕೇಂದ್ರ ಸಚಿವ ಸಂಪುಟಕ್ಕೆ ಹೊಸ ಸದಸ್ಯರು ಸೇರ್ಪಡೆಯಾಗುವ ಸಾಧ್ಯತೆಯೂ ಇದೆ (BJP Leadership).
ಆಂತರಿಕ ಚುನಾವಣೆಗೆ ಪಕ್ಷ ಕ್ರಮ
ಜಗತ್ ಪ್ರಕಾಶ್ ನಡ್ಡಾ (ಜೆ.ಪಿ.ನಡ್ಡಾ) ಬಿಜೆಪಿಯ 11ನೇ ರಾಷ್ಟ್ರೀಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಅಧಿಕಾರಾವಧಿ ಈ ತಿಂಗಳಲ್ಲಿ ಕೊನೆಗೊಳ್ಳಲಿದೆ. ಹೀಗಾಗಿ ಹೊಸ ಅಧ್ಯಕ್ಷರ ಆಯ್ಕೆಗೆ ಆಂತರಿಕ ಚುನಾವಣೆ ನಡೆಸಲು ಪಕ್ಷ ಕ್ರಮ ಕೈಗೊಂಡಿದೆ. ಜತೆಗೆ 29 ರಾಜ್ಯಗಳಲ್ಲಿ ಹೊಸ ನಾಯಕನನ್ನು ನೇಮಿಸಲು ಚುನಾವಣಾಧಿಕಾರಿಗಳನ್ನು ನೇಮಿಸಿದೆ. ಸದ್ಯ ಸದಸ್ಯತ್ವ ಅಭಿಯಾನ ಪೂರ್ಣಗೊಂಡಿದ್ದು, ವಿವಿಧ ರಾಜ್ಯಗಳ ಜಿಲ್ಲಾಧ್ಯಕ್ಷರನ್ನು ಆಯ್ಕೆ ನಡೆಸುತ್ತಿದೆ. ರಾಜ್ಯಾಧ್ಯಕ್ಷರ ನೇಮಕವಾದ ಬಳಿಕ ರಾಷ್ಟ್ರೀಯ ಅಧ್ಯಕ್ಷರ ನೇಮಕ ನಡೆಯಲಿದೆ. ಮೂಲಗಳ ಪ್ರಕಾರ ಈ ಎಲ್ಲ ಪ್ರಕ್ರಿಯೆಗಳು ಜನವರಿ ಅಂತ್ಯದ ವೇಳೆಗೆ ಮುಕ್ತಾಯಗೊಳ್ಳಲಿದೆ. ತಿಂಗಳಾಂತ್ಯದ ವೇಳೆಗೆ ಅಥವಾ ಫೆಬ್ರವರಿ ಆರಂಭದಲ್ಲಿ ಪಕ್ಷಕ್ಕೆ ಹೊಸ ಅಧ್ಯಕ್ಷರು ನೇಮಕವಾಗಲಿದ್ದಾರೆ.
ಹೊಸ ಅಧ್ಯಕ್ಷರು ಅಧಿಕಾರ ಸ್ವಿಕರಿಸಿದ ನಂತರ ಹೊಸ ತಂಡವನ್ನು ಕಟ್ಟುವ ಸಾಧ್ಯತೆ ಇದೆ. ಈ ಮೂಲಕ ರಾಷ್ಟ್ರೀಯ ಅಧ್ಯಕ್ಷರಿಂದ ಹಿಡಿದು ಮಂಡಲ ಅಧ್ಯಕ್ಷರವರೆಗೆ ಇಡೀ ಪಕ್ಷವೇ ನವೀಕೃತಗೊಳ್ಳಲಿದೆ. ಇದು ಇತ್ತೀಚಿನ ವರ್ಷಗಳಲ್ಲಿ ನಡೆದ ಅತೀ ದೊಡ್ಡ ಬದಲಾವಣೆ ಎನಿಸಿಕೊಳ್ಳಲಿದೆ. ಪಕ್ಷವು ಕೇಂದ್ರದಲ್ಲಿ 3ನೇ ಅವಧಿಗೆ ಸರ್ಕಾರ ರಚಿಸಿರುವುದರಿಂದ ಈ ಬದಲಾವಣೆ ಮುಖ್ಯ ಎನಿಸಿಕೊಂಡಿದೆ ಮತ್ತು ಇದನ್ನು ಕಾಪಾಡಿಕೊಳ್ಳಲು ಸಂಘಟನೆಗೆ ಹೊಸ ಶಕ್ತಿಯನ್ನು ತುಂಬುವ ಅಗತ್ಯವಿದೆ ಎಂದು ಬಿಜೆಪಿ ನಾಯಕರು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯ ನಾಯಕತ್ವದಲ್ಲೂ ಬದಲಾವಣೆ
ರಾಜ್ಯಗಳ ನಾಯಕತ್ವ ಬದಲಾವಣೆಯ ಚಿಂತನೆಯೂ ಪಕ್ಷದ ಮುಂದಿದೆ. ಬಿಜೆಪಿಯು ಪ್ರಾದೇಶಿಕ ನಾಯಕರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ. ಹಲವು ರಾಜ್ಯ ಮುಖಂಡರಿಗೆ ರಾಷ್ಟ್ರಮಟ್ಟದಲ್ಲಿ ಭಡ್ತಿ ನೀಡಲಾಗಿದೆ. ಇದಕ್ಕೆ ದೊಡ್ಡ ಉದಾಹರಣೆ ಪ್ರಧಾನಿ ನರೇಂದ್ರ ಮೋದಿ. ಅವರು ಗುಜರಾತ್ನಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಮುಖ್ಯಮಂತ್ರಿ ಎನಿಸಿಕೊಂಡಿದ್ದಾರೆ. ಬಿಜೆಪಿ ಸಂಸದೀಯ ಮಂಡಳಿ ಮತ್ತು ಪಕ್ಷದ ಕೇಂದ್ರ ಚುನಾವಣಾ ಸಮಿತಿಗೆ ಸೇರ್ಪಡೆಗೊಂಡ ಮೊದಲ ಬಿಜೆಪಿ ಮುಖ್ಯಮಂತ್ರಿ ಮೋದಿ. ಅದಾದ ಬಳಿಕ ಸಂಸದ, ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಕೂಡ ಬಿಜೆಪಿ ಸಂಸದೀಯ ಮಂಡಳಿ ಮತ್ತು ಪಕ್ಷದ ಕೇಂದ್ರ ಚುನಾವಣಾ ಸಮಿತಿಗೆ ಸೇರ್ಪಡೆಗೊಂಡಿದ್ದಾರೆ.
ಹೊಸ ಮುಖಗಳಿಗೆ ಮಣೆ
ಕಳೆದ ಕೆಲವು ವರ್ಷಗಳಿಂದ ಬಿಜೆಪಿ ಹಲವು ರಾಜ್ಯಗಳಲ್ಲಿ ಹೊಸ ಮುಖಗಳಿಗೆ ಮಣೆ ಹಾಕುತ್ತಿದೆ. ಹಲವು ಯುವ ಮತ್ತು ಮಹತ್ವಾಕಾಂಕ್ಷೆಯ ನಾಯಕರು ವಿವಿಧ ರಾಜ್ಯಗಳ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ ಮತ್ತು ಪಕ್ಷದ ಕಾರ್ಯತಂತ್ರ ಮತ್ತು ಭವಿಷ್ಯದ ಯೋಜನೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಧಾಮಿ, ಹರಿಯಾಣ ಮುಖ್ಯಮಂತ್ರಿ ನಯಾಬ್ ಸೈನಿ ಮತ್ತು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಎರಡನೇ ಅವಧಿಗೆ ಅಧಿಕಾರದಲ್ಲಿದ್ದಾರೆ.
ದೇವೇಂದ್ರ ಫಢ್ನವೀಸ್ ಸೇರಿದಂತೆ ಹಲವು ಮುಖ್ಯಮಂತ್ರಿಗಳು ಕೇಂದ್ರ ಚುನಾವಣಾ ಸಮಿತಿಯಲ್ಲಿದ್ದಾರೆ. ಈ ಮುಖಂಡರು ಬಿಜೆಪಿಯಲ್ಲಿ 2ನೇ ಹಂತದ ನಾಯಕತ್ವ ವಹಿಸಿಕೊಂಡಿದ್ದಾರೆ ಮತ್ತು ಭವಿಷ್ಯದಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಲು ಸಿದ್ಧರಾಗುತ್ತಿದ್ದಾರೆ. ಬಿಜೆಪಿಯ ಪ್ರಗತಿ ಮತ್ತು ವಿಸ್ತರಣೆಯು ಆಯಾ ರಾಜ್ಯಗಳಲ್ಲಿನ ಈ ನಾಯಕರ ಕಾರ್ಯಕ್ಷಮತೆಯನ್ನು ಅವಲಂಬಿಸಿದೆ. ಪಕ್ಷದ ಒಳಗೆ ಮತ್ತು ಹೊರಗಿನ ಈ ರೀತಿಯ ಪ್ರತಿಭಾನ್ವೇಷಣೆಯು ಹಿಂದೆಯೂ ಕ್ಯಾಬಿನೆಟ್ನಲ್ಲಿ ಕೆಲವು ಯಶಸ್ವಿ ಪ್ರಯೋಗಗಳಿಗೆ ಕಾರಣವಾಗಿದೆ. ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್ ಮತ್ತು ಎಸ್.ಜೈಶಂಕರ್ ಇದಕ್ಕೆ ಉತ್ತಮ ಉದಾಹರಣೆ. ಪಕ್ಷಕ್ಕೆ ಹೆಚ್ಚಿನ ಸಮಯವನ್ನು ಮೀಸಲಿಡಲು ಕೆಲವು ನಾಯಕರನ್ನು ಸರ್ಕಾರದ ಜವಾಬ್ದಾರಿಯಿಂದ ಹೊರಗಿಡುವ ಚಿಂತನೆಯೂ ಪರಿಶೀಲನೆಯಲ್ಲಿದೆ. ಸರ್ಕಾರ ಮತ್ತು ಪಕ್ಷ ಎರಡರಲ್ಲೂ ನಾಯಕರ ಸಮತೋಲನ ಕಾಪಾಡಲು ಬಿಜೆಪಿ ಮುಂದಾಗಿದೆ.
ಕೇಂದ್ರವು ‘ವಿಕಸಿತ್ ಭಾರತ್’ ಎಂಬ ಗುರಿಯನ್ನು ಸಾಧಿಸಲು ಕೆಲಸ ಮಾಡುವ ಜತೆಗೆ 15 ವರ್ಷಗಳ ನಂತರವೂ ತನ್ನ ಪ್ರಭಾವ ಬೀರಲು ಪಕ್ಷವು ತನ್ನನ್ನು ಬಲಪಡಿಸಿಕೊಳ್ಳುತ್ತಿದೆ. ಪ್ರಸ್ತುತ ಬಿಜೆಪಿಗೆ ಕಾರ್ಯಕ್ಷಮತೆಯೇ ಪ್ರಮುಖ ಮಾನದಂಡವಾಗಿದ್ದು, ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಗಳಲ್ಲಿ ಕಂಡು ಬಂದ ಅಭೂತಪೂರ್ವ ಯಶಸ್ಸಿನ ನಂತರ ಇನ್ನಷ್ಟು ಪ್ರಯೋಗ ನಡೆಸಲು ಮತ್ತುಷ್ಟು ಉತ್ತೇಜನ ಸಿಕ್ಕಿದೆ.
ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದ ಸುಮಾರು 1 ಲಕ್ಷ ಯುವ ಜನತೆಯನ್ನು ರಾಜಕೀಯಕ್ಕೆ ತರುವ ಗುರಿ ಹೊಂದಿರುವುದಾಗಿ ಇತ್ತೀಚೆಗೆ ಪ್ರಧಾನಿ ಮೋದಿ ಘೋಷಿಸಿದ್ದರು. ಅದರ ಭಾಗವಾಗಿ ಜ. 11 ಮತ್ತು 12ರಂದು ದಿಲ್ಲಿಯಲ್ಲಿ ಸರ್ಕಾರವು ‘ವಿಕಸಿತ್ ಭಾರತ್’ ಯುವ ನಾಯಕರ ಸಂವಾದವನ್ನು ಆಯೋಜಿಸಿದೆ. ಇದರಲ್ಲಿ ಮೋದಿ ಭಾಗವಹಿಸಲಿದ್ದಾರೆ. ದೇಶದ ವಿವಿಧ ಭಾಗಗಳ ಯುವ ನಾಯಕರು ಭಾರತದ ಬಗ್ಗೆ ತಾವು ಹೊಂದಿರುವ ಕಲ್ಪನೆ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಅವರು ಹೇಗೆ ಕೊಡುಗೆ ನೀಡಬಹುದು ಎಂಬುದರ ಬಗ್ಗೆ ಪ್ರಧಾನಿ ಮುಂದೆ ತಮ್ಮ ಚಿಂತನೆಯನ್ನು ತೆರೆದಿಡಲಿದ್ದಾರೆ. ರಾಜಕೀಯಕ್ಕೆ ಸೇರಬಲ್ಲ ಪ್ರತಿಭೆಗಳನ್ನು ಗುರುತಿಸುವುದು ಈ ಸಂವಾದದ ಮುಖ್ಯ ಉದ್ದೇಶ.
ಇದು ಪಕ್ಷದ ಕಾರ್ಯಕ್ರಮವಲ್ಲ ಮತ್ತು ಇದರಲ್ಲಿ ಭಾಗವಹಿಸುವ ಯಾರನ್ನೂ ಬಿಜೆಪಿಗೆ ಸೇರಲು ಒತ್ತಾಯಿಸುವುದಿಲ್ಲ. ಯಾಕೆಂದರೆ ಅವರು ತಮ್ಮ ರಾಜಕೀಯ ನಿಲುಗಳನ್ನು ಮುಂದುವರಿಸುವ ಸ್ವಾತಂತ್ರ್ಯ ಹೊಂದಿದ್ದಾರೆ ಎಂದು ನಾಯಕರು ಸ್ಪಷ್ಟಪಡಿಸಿದ್ದಾರೆ. ಆದರೆ ಅತಿ ದೊಡ್ಡ ಪಕ್ಷವಾಗಿರುವುದರಿಂದ ಬಿಜೆಪಿಗೆ ಇದು ಇತರ ರಾಜಕೀಯ ಪಕ್ಷಗಳಿಗಿಂತ ಹೆಚ್ಚು ಪ್ರಯೋಜನಕಾರಿಯಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಬಿಜೆಪಿಯ ವ್ಯವಸ್ಥೆಯು ಸಂಕೀರ್ಣ ರಚನೆಯನ್ನು ಹೊಂದಿರುವ ಇತರ ರಾಜಕೀಯ ಪಕ್ಷಗಳಿಗಿಂತ ಭಿನ್ನವಾಗಿದ್ದು, ಹೊಸ ಆಲೋಚನೆಗಳು ಮತ್ತು ಹೊಸ ನಾಯಕರ ಪ್ರವೇಶಕ್ಕೆ ಮುಕ್ತವಾಗಿದೆ.
ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣದ ಪರಿಕಲ್ಪನೆಯನ್ನು ಇದರೊಂದಿಗೆ ಜೋಡಿಸುವ ಮೂಲಕ ಬಿಜೆಪಿ ಜಾಣ ನಡೆ ಪ್ರದರ್ಶಿಸಿದೆ. ಪಕ್ಷದ ಬಗ್ಗೆ ಕಡಿಮೆ ಮಾತನಾಡುವ ಮೂಲಕ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣದ ಗುರಿಯನ್ನು ಬಿಜೆಪಿ ನಾಯಕರು ಪುನರುಚ್ಚರಿಸುತ್ತಿದ್ದಾರೆ. ಅಂತಿಮವಾಗಿ ಇದೆಲ್ಲ ಪಕ್ಷದ ಪರವಾಗಿಯೇ ಕೆಲಸ ಮಾಡುತ್ತದೆ. ನಾಯಕತ್ವದ ಅನ್ವೇಷಣೆ ಮತ್ತು ಪ್ರಯೋಗದಲ್ಲಿ ಪಕ್ಷವು ಎಷ್ಟು ಯಶಸ್ಸು ಸಾಧಿಸಿದೆ ಎನ್ನುವುದು 2025ರಲ್ಲಿ ಗೊತ್ತಾಗಲಿದೆ.
ಈ ಸುದ್ದಿಯನ್ನೂ ಓದಿ: Modi Govt: ಹೊಸ ವರ್ಷಕ್ಕೆ ಬಡವರಿಗೆ ಮೋದಿ ಸರ್ಕಾರದಿಂದ ಗುಡ್ನ್ಯೂಸ್; ಹೆಚ್ಚುವರಿ 2 ಕೋಟಿ ಮನೆ ಒದಗಿಸಲು ಚಿಂತನೆ