Thursday, 26th December 2024

New RBI Governor: RBI ನೂತನ ಗವರ್ನರ್‌ ಆಗಿ ಸಂಜಯ್‌ ಮಲ್ಹೋತ್ರಾ ನೇಮಕ

RBI Governor

ಮುಂಬೈ: ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ(RBI)ದ ನೂತನ ಗವರ್ನರ್‌ ಆಗಿ (New RBI Governor) ಕಂದಾಯ ಕಾರ್ಯದರ್ಶಿ ಸಂಜಯ್‌ ಮಲ್ಹೋತ್ರಾ (Sanjay Malhotra) ಅವರು ಸೋಮವಾರ ನೇಮಕವಾಗಿದ್ದಾರೆ. ಮುಂದಿನ ಮೂರು ವರ್ಷಗಳ ಅವಧಿಗೆ ಅವರು ಆರ್‌ಬಿಐ ಗವರ್ನರ್‌ ಆಗಿ ಸೇವೆ ಸಲ್ಲಿಸಲಿದ್ದಾರೆ. ಡಿಸೆಂಬರ್‌ 11ರ ಬುಧವಾರ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಹಾಲಿ ಗವರ್ನರ್‌ ಶಕ್ತಿಕಾಂತ ದಾಸ್‌ ಅವರ ಅಧಿಕಾರಾವಧಿ ಡಿಸೆಂಬರ್‌ 10ಕ್ಕೆ ಮುಕ್ತಾಯವಾಗುತ್ತಿದೆ. ಶಕ್ತಿಕಾಂತ ದಾಸ್‌ ಅವರ ಅಧಿಕಾರಾವಧಿ ಮುಂದುವರಿಯಲಿದೆಯೇ ಇಲ್ಲವೇ ಎಂಬ ಗೊಂದಲಕ್ಕೆ ಇದೀಗ ತೆರೆ ಬಿದ್ದಿದೆ. ಸಂಜಯ್‌ ಮಲ್ಹೋತ್ರಾ ಅವರು ಆರ್‌ಬಿಐನ 26ನೇ ಗವರ್ನರ್‌ ಆಗಲಿದ್ದಾರೆ.

ಯಾರು ಈ ಸಂಜಯ್‌ ಮಲ್ಹೋತ್ರಾ?

  • ಸಂಜಯ್‌ ಮಲ್ಹೋತ್ರಾ ಅವರು ರಾಜಸ್ಥಾನ ಮೂಲದ 1990ರ ಬ್ಯಾಚ್‌ನ ಐಎಎಸ್‌ ಅಧಿಕಾರಿಯಾಗಿದ್ದಾರೆ. ಕಾನ್ಪುರದ ಐಐಟಿಯಿಂದ ಕಂಪ್ಯೂಟರ್‌ ವಿಜ್ಞಾನದಲ್ಲಿ ಪದವಿ ಗಳಿಸಿದ್ದಾರೆ. ಅಮೆರಿಕದಲ್ಲಿ ಸಾರ್ವಜನಿಕ ಆಡಳಿತ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನೂ ಗಳಿಸಿದ್ದಾರೆ.
  • ಐಎಎಸ್‌ ಅಧಿಕಾರಿಯಾಗಿ ಸಂಜಯ್ ಮಲ್ಹೋತ್ರಾ ಅವರು‌, ವಿದ್ಯುತ್‌, ಹಣಕಾಸು, ತೆರಿಗೆ, ಮಾಹಿತಿ ತಂತ್ರಜ್ಞಾನ, ಗಣಿಗಾರಿಕೆ ಇತ್ಯಾದಿ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
  • ಹಣಕಾಸು ಸಚಿವಾಲಯದಲ್ಲಿ ಕಂದಾಯ ಕಾರ್ಯದರ್ಶಿಯಾಗುವುದಕ್ಕೆ ಮುನ್ನ ಹಣಕಾಸು ಇಲಾಖೆಯಲ್ಲಿ ಕಾರ್ಯದರ್ಶಿಯಾಗಿದ್ದರು. ರಾಜ್ಯ ಮತ್ತು ಕೇಂದ್ರದಲ್ಲಿ ಹಣಕಾಸು ಮತ್ತು ತೆರಿಗೆ ಆಡಳಿತದಲ್ಲಿ ಅನುಭವವನ್ನು ಹೊಂದಿದ್ದಾರೆ. ನೇರ ಮತ್ತು ಪರೋಕ್ಷ ತೆರಿಗೆಗೆಳ ಸುಧಾರಣೆಯಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಿದ್ದಾರೆ.
  • ಕಳೆದ ಜುಲೈ-ಸೆಪ್ಟೆಂಬರ್‌ ಅವಧಿಯಲ್ಲಿ ದೇಶದ ಜಿಡಿಪಿ ಬೆಳವಣಿಗೆ ಇಳಿಕೆಯಾಗಿರುವುದರಿಂದ ಬೆಳವಣಿಗೆಗೆ ಒತ್ತು ನೀಡಬೇಕಾಗಿದೆ. ಜತೆಗೆ ಹಣದುಬ್ಬರವನ್ನೂ ನಿಯಂತ್ರಿಸಬೇಕಾಗಿದೆ. ಈ ಎರಡು ಗುರಿಗಳನ್ನು ಆರ್‌ಬಿಐ ಗವರ್ನರ್‌ ಆಗಿ ಸಂಜಯ್‌ ಮಲ್ಹೋತ್ರಾ ಹೇಗೆ ನಿರ್ವಹಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ದೊಡ್ಡ ಸವಾಲು ಅವರ ಮುಂದಿರುವುದಂತೂ ಹೌದು.
  • ಕಳೆದ ಶುಕ್ರವಾರ ನಡೆದ ಆರ್‌ಬಿಐ ಹಣಕಾಸು ಪರಾಮರ್ಶೆ ಸಮಿತಿ ಸಭೆಯಲ್ಲಿ ರೆಪೋ ದರವನ್ನು ಯಥಾಸ್ಥಿತಿಯಲ್ಲಿ ಇಡಲಾಗಿತ್ತು.

ಈ ಸುದಿಯನ್ನೂ ಓದಿ: Shaktikanta Das: RBI ಗವರ್ನರ್ ಶಕ್ತಿಕಾಂತ್‌ ದಾಸ್ ಆಸ್ಪತ್ರೆಗೆ ದಾಖಲು