Saturday, 4th January 2025

New Year Celebration: ಹೊಸ ವರ್ಷಕ್ಕೆ ಅದ್ಧೂರಿ ವೆಲ್‌ಕಮ್‌; ಭಾರತ ಸೇರಿ ವಿಶ್ವದಾದ್ಯಂತ ಆಚರಣೆ

New Year Celebration

ನವದೆಹಲಿ: ಭಾರತ ಸೇರಿದಂತೆ ಇಡೀ ವಿಶ್ವವೇ ಹೊಸ ವರ್ಷವನ್ನು ಅದ್ಧೂರಿಯಾಗಿ (New Year Celebration) ಬರಮಾಡಿಕೊಂಡಿದೆ. ಹೊಸ ವರ್ಷದ ಸಂಭ್ರಮದಲ್ಲಿ ಪಟಾಕಿ ಸಿಡಿಸಿ ಜನ ಸಂಭ್ರಮಿಸಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿ (Delhi) ಸೇರಿದಂತೆ ಬೆಂಗಳೂರು, ಕೊಲ್ಕತ್ತಾ, ಮುಂಬೈ ಹಾಗೂ ಚೆನ್ನೈನಲ್ಲಿ ಜನರು 2025ನ್ನು ಸ್ವಾಗತಿಸಿದ್ದಾರೆ.

ದೆಹಲಿಯ ಇಂಡಿಯಾ ಗೇಟ್‌ಗೆ ವಿದ್ಯುತ್‌ ಅಲಂಕಾರ ಮಾಡಲಾಗಿತ್ತು. ಚಳಿಯನ್ನೂ ಲೆಕ್ಕಿಸಿದೆ ವಿದ್ಯುತ್‌ ಅಲಂಕಾರವನ್ನು ನೋಡಲು ಸಾವಿರಾರು ಜನ ನೆರೆದಿದ್ದರು. ಮುಂಜಾಗ್ರತಾ ಕ್ರಮವಾಗಿ ದೆಹಲಿಯಾದ್ಯಂತ 20 ಸಾವಿರಕ್ಕೂ ಅಧಿಕ ಪೊಲೀಸರು ಹಾಗೂ ಅರೆ ಸೇನಾಪಡೆಗಳನ್ನು ನಿಯೋಜನೆ ಮಾಡಲಾಗಿತ್ತು. ಮುಂಬೈನಲ್ಲಿಯೂ ಹೊಸ ವರ್ಷದ ಸಂಭ್ರಮಾಚರಣೆ ಜೋರಾಗಿಯೇ ನಡೆಯಿತು. ಮುಂಬೈಯು ಜನಪ್ರಿಯ ಹಾಟ್‌ಸ್ಪಾಟ್‌ಗಳಾದ ಮರೈನ್ ಡ್ರೈವ್, ಗೇಟ್ ವೇ ಆಫ್ ಇನಿಡಾ ಮತ್ತು ಬಾಂದ್ರಾ-ವರ್ಲಿ ಸೀ ಲಿಂಕ್‌ಗಳಲ್ಲಿ ಜನರು ಸಂಗೀತ, ನೃತ್ಯ ಮತ್ತು ಪಟಾಕಿಗಳ ನಡುವೆ ಹೊಸ ವರ್ಷಕ್ಕೆ ಕಾಲಿಟ್ಟರು.

ಕೋಲ್ಕತ್ತಾ, ಚೆನ್ನೈ, ಬೆಂಗಳೂರು, ಲಕ್ನೋ, ಭೋಪಾಲ್, ಜೈಪುರ, ಪುಣೆ, ಅಹಮದಾಬಾದ್ ಮತ್ತು ಹೈದರಾಬಾದ್ ಹಲವು ನಗರಗಳಲ್ಲಿ ಅದ್ದೂರಿ ಹೊಸವರ್ಷ ಸಂಭ್ರಮಾಚರಣೆ ನಡೆಯಿತು.

ವಿದೇಶದಲ್ಲಿ ಭರ್ಜರಿ ವೆಲ್‌ಕಮ್‌

ವಿಶ್ವದಲ್ಲಿಯೇ ನ್ಯೂಜಿಲೆಂಡ್‌ ಹೊಸ ವರ್ಷಕ್ಕೆ ಕಾಲಿಟ್ಟ ಮೊದಲ ದೇಶವಾಗಿದೆ. ಅಲ್ಲಿನ ಜನರು ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತ ಮಾಡಿದ್ದಾರೆ. ಆಕ್ಲೆಂಡ್‌ನ ಗಗನ ಚುಂಬಿ ಐಕಾನಿಕ್‌ ಸ್ಕೈ ಟವರ್‌ ಮೇಲ್ಭಾಗದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಆಸ್ಟ್ರೇಲಿಯಾ ದೇಶದಲ್ಲಿಯೂ ಹೊಸ ವರ್ಷದ ಸಂಭ್ರಮಾಚರಣೆ ಜೋರಾಗಿಯೇ ಇತ್ತು. ಸಿಡ್ನಿ ಸೇತುವೆ ಮೇಲೆ ಪಟಾಕಿ ಸಿಡಿಸಿ ಆಸ್ಟ್ರೇಲಿಯನ್ನರು ಹೊಸ ವರ್ಷಕ್ಕೆ ಕಾಲಿಟ್ಟಿದ್ದಾರೆ.

ಜಪಾನ್‌ನಲ್ಲಿ ಸಾಂಪ್ರದಾಯಿಕ ಪದ್ಧತಿಯಂತೆ ಜೋಯಾ ನೋ ಕೇನ್ ಎಂದು ಕರೆಯಲ್ಪಡುವ ಆಚರಣೆಯಂತೆ 108 ಬಾರಿ ದೇವಾಲಯದ ಗಂಟೆಗಳನ್ನು ಹೊಡೆಯುವ ಮೂಲಕ ಹೊಸ ವರ್ಷಕ್ಕೆ ಕಾಲಿಟ್ಟಿದ್ದಾರೆ. ಕತಾರ್, ಥೈಲ್ಯಾಂಡ್, ಫಿಲಿಪೈನ್ಸ್ ಮತ್ತು ಚೀನಾದ ಹಾಂಗ್ ಕಾಂಗ್ ಮತ್ತು ಬೀಜಿಂಗ್‌ನಲ್ಲಿಯೂ ಸಹ ಸಂಭ್ರಮಾಚರಣೆಗಳು ಕಂಡುಬಂದವು.

ದಕ್ಷಿಣ ಕೊರಿಯಾದಲ್ಲಿ ನಡೆದಿದ್ದ ವಿಮಾನ ದುರಂತದ ನಂತರ ದೇಶದಲ್ಲಿ ಹೊಸ ವರ್ಷಾಚರಣೆಯನ್ನು ರದ್ದುಗೊಳಿಸಲಾಗಿದೆ. ಒಟ್ಟಿನಲ್ಲಿ ಜನರು ಹಳೆ ಕಹಿಯನ್ನು ಮರೆತು ಹೊಸ ವರ್ಷವನ್ನು ಖುಷಿಯಿಂದ ಸ್ವಾಗತಿಸಿಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ : Major Changes: ಹೊಸ ವರ್ಷಕ್ಕೆ ಹಲವು ಬದಲಾವಣೆ- ಇಲ್ಲಿದೆ ಡಿಟೇಲ್ಸ್‌