ನವದೆಹಲಿ: ದೆಹಲಿಯ ಶಾಸಕರ ಮಾಸಿಕ ವೇತನ ಹೆಚ್ಚಿಸಲು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ಸರ್ಕಾರವು ಕೇಂದ್ರ ಸರ್ಕಾರ ಮಾಡಿದ್ದ ಶಿಫಾರಸ್ಸಿಗೆ ಮಂಗಳವಾರ ಅನುಮೋದನೆ ನೀಡಿದೆ.
ಇನ್ನು ಮುಂದೆ ದೆಹಲಿಯ ಶಾಸಕರು ವೇತನ ಮತ್ತು ಭತ್ಯೆ ಸೇರಿ ತಿಂಗಳಿಗೆ ₹90 ಸಾವಿರ ಪಡೆಯುತ್ತಾರೆ. ಇದಕ್ಕೂ ಮುನ್ನ ಪ್ರತಿ ತಿಂಗಳು ₹53 ಸಾವಿರ ವೇತನ ಪಡೆಯುತ್ತಿದ್ದರು. ಇದರಲ್ಲಿ ₹12 ಸಾವಿರ ವೇತನವಾದರೆ, ಉಳಿದ ಹಣವನ್ನು ಇತರೆ ಭತ್ಯೆಗಳ ರೂಪದಲ್ಲಿ ನೀಡಲಾಗುತ್ತಿತ್ತು ಎಂದು ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.
ಪರಿಷ್ಕೃತ ವೇತನದಿಂದಾಗಿ ತಿಂಗಳಿಗೆ ₹30 ಸಾವಿರವನ್ನು ವೇತನವಾಗಿ ಹಾಗೂ ₹60 ಸಾವಿರ ಹಣವನ್ನು ಭತ್ಯೆಗಳ ರೂಪದಲ್ಲಿ ಪಡೆಯಲಿದ್ದಾರೆ ಎಂದು ಸರ್ಕಾರ ತಿಳಿಸಿದೆ.
ಕಳೆದ ಹತ್ತು ವರ್ಷಗಳಿಂದ ದೆಹಲಿ ಶಾಸಕರ ವೇತನವನ್ನು ಹೆಚ್ಚಿಸಿರಲಿಲ್ಲ. ಇತ್ತೀಚೆಗೆ ಕೇಜ್ರಿವಾಲ್ ಸರ್ಕಾರ ಶಾಸಕರ ವೇತನವನ್ನು ಹೆಚ್ಚಿಸುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಮನವಿ ಸಲ್ಲಿಸಿತ್ತು.