Friday, 22nd November 2024

NIA Raid: ಜೆಡಿಯು ನಾಯಕಿ ನಿವಾಸ ಸೇರಿ ಬಿಹಾರದ 5 ಕಡೆಗಳಲ್ಲಿ NIA ರೇಡ್‌

NIA Raid

ಭುವನೇಶ್ವರ: ನಿಷೇಧಿತ ಸಂಘಟನೆ ಸಿಪಿಐ (ಮಾವೋವಾದಿ) ವಿರುದ್ಧದ ಕಾರ್ಯಾಚರಣೆ ಕೈಗೆತ್ತಿಕೊಂಡಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (NIA Raid) ಬಿಹಾರದ ಐದು ಸ್ಥಳಗಳಲ್ಲಿ ರೇಡ್‌ ನಡೆಸಿದೆ. ಮಾಜಿ ಜೆಡಿಯು ಎಂಎಲ್‌ಸಿ ನಿವಾಸ ಸೇರಿದಂತೆ ಒಟ್ಟು ಐದು ಕಡೆಗಳಲ್ಲಿ ಎನ್‌ಐಎ ತೀವ್ರ ಶೋಧ ಕಾರ್ಯಾಚರಣೆ ನಡೆಸಿದೆ.

ಅಧಿಕೃತ ಮೂಲಗಳ ಪ್ರಕಾರ, ಗಯಾದ ಎಪಿ ಕಾಲೋನಿ ಪ್ರದೇಶದಲ್ಲಿರುವ ಜೆಡಿಯು ನಾಯಕಿ ಮನೋರಮಾ ದೇವಿ ನಿವಾಸದಲ್ಲಿ ಬೆಳಿಗ್ಗೆ 4 ಗಂಟೆಯಿಂದ ಎನ್ಐಎ ಶೋಧ ನಡೆಸುತ್ತಿದೆ. ಮಾಧ್ಯಮದವರೊಂದಿಗೆ ಮಾತನಾಡಿದ ಗಯಾ ಎಸ್‌ಎಸ್‌ಪಿ ಆಶಿಶ್ ಭಾರ್ತಿ, ರೇಡ್‌ ನಡೆಸಲು ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ಪೂರೈಕೆ ಮಾಡುವಂತೆ ಎನ್‌ಐಎ ಮನವಿ ಮಾಡಿತ್ತು ಎಂದು ಮಾಹಿತಿ ನೀಡಿದ್ದಾರೆ.

ಆಗಸ್ಟ್ 7, 2023 ಮತ್ತು ಸೆಪ್ಟೆಂಬರ್ 26, 2023 ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ರೇಡ್‌ ನಡೆದಿದೆ ಎನ್ನಲಾಗಿದೆ. ಮಹಾದ್ ಪ್ರದೇಶದಲ್ಲಿ ಸಂಘಟನೆಯನ್ನು ಪುನರುಜ್ಜೀವನಗೊಳಿಸಲು ಮತ್ತು ಬಲಪಡಿಸಲು ಮಾವೋವಾದಿಗಳು ಸಂಚು ರೂಪಿಸಿದ್ದಾರೆ ಎಂದು ಎನ್ಐಎ ತನಿಖೆ ನಡೆಸುತ್ತಿದೆ. ದಾಳಿ ನಡೆಸುತ್ತಿರುವ ಐದು ಸ್ಥಳಗಳ ಪೈಕಿ ಮೂರು ಗಯಾದಲ್ಲಿ ಮತ್ತು ತಲಾ ಒಂದು ರೋಹ್ತಾಸ್ ಮತ್ತು ಔರಂಗಾಬಾದ್‌ನಲ್ಲಿವೆ.

ಸೆಪ್ಟೆಂಬರ್ 2023 ರಲ್ಲಿ, ಗಯಾ ಜಿಲ್ಲೆಯ ಕೋಚ್‌ನಲ್ಲಿರುವ ಮಾಜಿ ಜಿಲ್ಲಾ ಕೌನ್ಸಿಲರ್ ಮತ್ತು ಮನೋರಮಾ ದೇವಿ ಅವರ ನಿಕಟವರ್ತಿ ರಾಜು ಜಾಟ್ ಅವರ ಮನೆಯ ಮೇಲೆ ಎನ್‌ಐಎ ದಾಳಿ ಮಾಡಿದ್ದು, ಅಲ್ಲಿಂದ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿತ್ತು. ಬಳಿಕ ಎನ್‌ಐಎ ದೆಹಲಿಯಲ್ಲಿ ಎಫ್‌ಐಆರ್‌ ದಾಖಲಿಸಿತ್ತು.

ಮೂಲಗಳಿಂದ ಬಂದಿರುವ ಮಾಹಿತಿಯ ಪ್ರಕಾರ, ವಶಪಡಿಸಿಕೊಂಡ ಮೊಬೈಲ್‌ಗಳ ಆಧಾರದ ಮೇಲೆ ಈ ಸ್ಥಳಗಳಲ್ಲಿ ದಾಳಿ ನಡೆಯುತ್ತಿದೆ. ಈ ಐದು ಸ್ಥಳಗಳಲ್ಲಿ ನಡೆದ ದಾಳಿಯಲ್ಲಿ ಯಾವುದೇ ಸರಕುಗಳನ್ನು ವಶಪಡಿಸಿಕೊಂಡ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಗಯಾದಲ್ಲಿರುವ ಎಂಎಲ್‌ಸಿ ಮನೋರಮಾ ದೇವಿ ಅವರ ನಿವಾಸದ ಮೇಲೆ ಎನ್‌ಐಎ ದಾಳಿಯ ಭಾಗವಾಗಿ, ಎಸ್‌ಬಿಐ ಬ್ಯಾಂಕ್‌ನಿಂದ ನೋಟು ಡ್ರಾಪ್ ಯಂತ್ರವನ್ನು ಕೊಂಡೊಯ್ದಿದೆ. ​​ಮನೋರಮಾ ದೇವಿ ಅವರ ನಿವಾಸದೊಳಗೆ ಈ ಯಂತ್ರವನ್ನು ತೆಗೆದುಕೊಂಡು ಹೋಗಲಾಗಿದೆ ಎಂಬ ಮಾಹಿತಿ ದೊರೆತಿದೆ.

ಈ ಸುದ್ದಿಯನ್ನೂ ಓದಿ: Kolkata blast: ಕೋಲ್ಕತ್ತಾದಲ್ಲಿ ಏನಾಗ್ತಿದೆ? ಒಂದೆಡೆ ವೈದ್ಯರ ಪ್ರೊಟೆಸ್ಟ್‌, ಮತ್ತೊಂದೆಡೆ ಭಾರೀ ಬ್ಲಾಸ್ಟ್‌; NIA ತನಿಖೆಗೆ ಆಗ್ರಹ