ಮುಂಬೈ: ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ರಾತ್ರಿ ಕರ್ಫ್ಯೂ ಜಾರಿ ಮಾಡಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ.
ಸಂಜೆ 5 ಗಂಟೆಯಿಂದ ಮುಂಜಾನೆ 5 ಗಂಟೆಯವರೆಗೂ, 12 ಗಂಟೆಗಳ ನೈಟ್ ಕರ್ಫ್ಯೂ ಜಾರಿ ಮಾಡುವ ಕುರಿತು ಗಂಭೀರ ಚಿಂತನೆ ನಡೆಸಲಾಗಿದೆ. ಸಚಿವ ವಿಜಯ್ ವಾಡೆಟ್ಟಿವಾರ್, ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ನಿಯಂತ್ರಿಸುವ ನಿಟ್ಟಿನಲ್ಲಿ ಮುಂದಿನ ವಾರ ನಡೆಯಲಿರುವ ಸಭೆಯಲ್ಲಿ ನಿರ್ಧರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಮುಂದಿನ ವಾರ ಮುಂಬೈನಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸಭೆ ನಡೆಸಲಿದ್ದು, ಸಭೆಯಲ್ಲಿ ಆರೋಗ್ಯ ತಜ್ಞರು ಮತ್ತು ಅಧಿಕಾರಿಗಳು ಭಾಗವಹಿಸಲಿದ್ದಾರೆ. ಮಹಾರಾಷ್ಟ್ರದಲ್ಲಿ ಕೋವಿಡ್ ನಿಯಮಾವಳಿಗಳನ್ನು ಜಾರಿ ಮಾಡಲಾಗಿದ್ದು, ಮದುವೆ, ಸಾವು ಸೇರಿದಂತೆ ಯಾವುದೇ ರೀತಿಯ ಸಭೆ ಸಮಾರಂಭಗಳಲ್ಲಿ 50ಕ್ಕಿಂತ ಹೆಚ್ಚು ಮಂದಿ ಭಾಗವಹಿಸುವಂತಿಲ್ಲ ಎಂದು ನಿರ್ಬಂಧ ಹೇರಿದೆ.
ಕರ್ಫ್ಯೂ ಸಮಯದಲ್ಲಿ, ಮದುವೆ ಸಭಾಂಗಣಗಳು, ಮಾರುಕಟ್ಟೆಗಳು, ಸಿನೆಮಾ ಹಾಲ್‌ಗಳು ಮತ್ತು ಜನಸಂದಣಿಯು ಸೇರುವ ಇತರ ಸ್ಥಳಗಳೆಲ್ಲವೂ ಮುಚ್ಚಲ್ಪಡುತ್ತವೆ. ತರಕಾರಿ ಮಾರುಕಟ್ಟೆಗಳನ್ನುಸಹ ಮುಚ್ಚುವ ಸಂಬಂಧ ನಾವು ಯೋಚಿಸುತ್ತಿದ್ದೇವೆ ಎಂದು ಸಚಿವರು ಹೇಳಿದ್ದಾರೆ.