ಪಾಟ್ನಾ: ಬಿಹಾರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದೆ. ರಾಜ್ಯದಲ್ಲಿ ಮಹತ್ವದ ಬೆಳವಣಿಗೆ ಆಗುವ ಸೂಚನೆ ಎದುರಾಗಿದೆ. ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ (Lalu Prasad Yadav) ಅವರು ಬಿಹಾರ ಮುಖ್ಯಮಂತ್ರಿ (Bihar CM) ನಿತೀಶ್ ಕುಮಾರ್ (Nitish Kumar) ಅವರಿಗೆ ʼಇಂಡಿಯಾʼ ಮೈತ್ರಿಕೂಟಕ್ಕೆ ಸೇರಲು ಆಫರ್ ನೀಡಿದ್ದಾರೆ. ಅವರ ಈ ಪ್ರಸ್ತಾಪಕ್ಕೆ ನಿತೀಶ್ ಕುಮಾರ್ ನಿಗೂಢವಾಗಿ ಪ್ರತಿಕ್ರಿಯಿಸಿದ್ದಾರೆ.
ಗುರುವಾರ (ಜ. 2) ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಪ್ರಮಾಣ ವಚನ ಸ್ವೀಕಾರ ಸಮಾರಂಭದ ನಂತರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಾಧ್ಯಮಗಳ ಪ್ರಶ್ನೆಗೆ ಯವುದೇ ಪ್ರತಿಕ್ರಿಯೆ ನೀಡದೆ ಇದೇನು ಹೇಳುತ್ತಿದ್ದೀರಿ ನೀವು ಎನ್ನುತ್ತಾ ಕೈ ಮುಗಿದು ಹೊರಟು ಹೋಗಿದ್ದಾರೆ. ಲಾಲು ಹೇಳಿಕೆಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಲಲ್ಲನ್ ಸಿಂಗ್, “ನಾವು ಎನ್‌ಡಿಎ ಜತೆಗಿದ್ದೇವೆ. ಜನರು ಏನು ಹೇಳುತ್ತಾರೆಂದು ನಾನು ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯವಿದೆ, ಜನರು ಏನು ಬೇಕಾದರೂ ಹೇಳಬಹುದುʼʼ ಎಂದು ಹೇಳಿದ್ದಾರೆ.
ಈ ಹಿಂದೆ ಸಿಎಂ ನಿತೀಶ್ ಕುಮಾರ್ ಕಳೆದ ಒಂದು ದಶಕದಲ್ಲಿ ಇಂಡಿಯಾ ಬ್ಲಾಕ್‌ನ ಅಂಗವಾಗಿರುವ ಆರ್‌ಜೆಡಿಯೊಂದಿಗೆ ಎರಡು ಬಾರಿ ಹೊಂದಾಣಿಕೆ ಮಾಡಿಕೊಂಡಿದ್ದರು. 2015ರಲ್ಲಿ ನಿತೀಶ್ ಕುಮಾರ್ ಸರ್ಕಾರ ರಚಿಸಲು ಆರ್‌ಜೆಡಿ-ಕಾಂಗ್ರೆಸ್ ಸಂಯೋಜನೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದರು. ನಂತರ 2017ರಲ್ಲಿ ಮೈತ್ರಿ ಮುರಿದು ಬಿದ್ದಿತ್ತು. 2022ರಲ್ಲಿ ಮರು ಮೈತ್ರಿಯಾಗಿತ್ತು. ಆದರೆ 2023ರ ಜುಲೈನಲ್ಲಿ ಆರ್‌ಜೆಡಿ ‘ಇಂಡಿಯಾ’ ಮೈತ್ರಿಕೂಟ ಸೇರಿತ್ತು.
ಲಾಲು ಪ್ರಸಾದ್ ಯಾದವ್ ಹೇಳಿದ್ದೇನು?
ಬಿಹಾರದಲ್ಲಿ ಈ ವರ್ಷದ ಅಕ್ಟೋಬರ್ – ನವೆಂಬರ್‌ನಲ್ಲಿ ಚುನಾವಣೆ ನಡೆಯಲಿದ್ದು, ಖಾಸಗಿ ಚಾನಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಲಾಲು ಪ್ರಸಾದ್ ಯಾದವ್ ನಿತೀಶ್ ಕುಮಾರ್ ಅವರು ‘ಇಂಡಿಯಾ’ ಮೈತ್ರಿಕೂಟಕ್ಕೆ ಬಂದರೆ ಅವರನ್ನು ಸ್ವಾಗತಿಸಲಾಗುವುದು. ಅವರು ನಮ್ಮೊಂದಿಗೆ ಸೇರಬಹುದು ಮತ್ತು ಒಟ್ಟಿಗೆ ಕೆಲಸ ಮಾಡಬಹುದು. ನಮ್ಮ ಬಾಗಿಲುಗಳು ಯಾವಾಗಲೂ ತೆರೆದಿರುತ್ತವೆ ಎಂದು ಹೇಳಿದ್ದರು. ಅವರ ಜತೆ ಮತ್ತೆ ಒಟ್ಟಿಗೆ ಕೆಲಸ ಮಾಡಲು ಯಾವುದೇ ಸಮಸ್ಯೆಗಳಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.
ಕೆಲವು ವಾರಗಳ ಹಿಂದೆ, ಆರ್‌ಜೆಡಿಯ ಹಿರಿಯ ನಾಯಕ ಮತ್ತು ಶಾಸಕ ಭಾಯಿ ಬೀರೇಂದ್ರ ಕೂಡ ಅಚ್ಚರಿಯ ಹೇಳಿಕೆಯನ್ನು ನೀಡಿದ್ದು, , ಜೆಡಿಯು ವರಿಷ್ಠ ಪಕ್ಷ ಬದಲಾಯಿಸಲು ನಿರ್ಧರಿಸಿದರೆ ಅವರಿಗೆ ನಾವು ಅದ್ಧೂರಿ ಸ್ವಾಗತವನ್ನು ನೀಡುತ್ತೇವೆ ಎಂದಿದ್ದರು.
ಮರು ಮೈತ್ರಿಯ ಬಗ್ಗೆ ಪ್ರತಿಕ್ರಿಯೆ ನೀಡಿದ ತೇಜಸ್ವಿ ಯಾದವ್ ನಾವು ಈಗಾಗಲೇ ಸ್ಪಷ್ಟಪಡಿಸಿದ್ದೇವೆ. ಮರು ಮೈತ್ರಿ ಸಾಧ್ಯವಿಲ್ಲ. ಪತ್ರಕರ್ತರ ಕುತೂಹಲ ತಣಿಸಲು ಲಾಲೂ ಪ್ರಸಾದ್ ಯಾದವ್ ಅವರು ಈ ರೀತಿ ಹೇಳಿರಬಹುದು ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ : Lalu Prasad Yadav: ಮಹಿಳೆಯರನ್ನು ನೋಡೋಕೆ ನಿತೀಶ್ ಯಾತ್ರೆ-ನಾಲಿಗೆ ಹರಿಬಿಟ್ಟ ಲಾಲೂ