Friday, 22nd November 2024

ಹಕ್ಕಿ ಜ್ವರ ಭೀತಿ: ಜ.26ರವರೆಗೂ ಕೆಂಪು ಕೋಟೆಗೆ ಪ್ರವೇಶವಿಲ್ಲ

ನವದೆಹಲಿ: ದೆಹಲಿಯ ಕೆಂಪು ಕೋಟೆ ಬಳಿ ಕಾಗೆಗಳು ಸತ್ತುಬಿದ್ದಿದ್ದು, ಹಕ್ಕಿ ಜ್ವರದ ವೈರಸ್ ಇರುವುದು ದೃಢಪಟ್ಟಿದೆ. ಗಣರಾಜ್ಯೋತ್ಸವ ದಿನ ಸಮೀಪಿಸುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರಿಗೆ ಪ್ರವೇಶವನ್ನು ನಿರ್ಬಂಧಿಸ ಲಾಗಿದೆ.

ಜಲಂಧರ್ ಹಾಗೂ ಭೋಪಾಳ್ ನಲ್ಲಿ ಕಾಗೆಗಳ ಪರೀಕ್ಷೆ ನಡೆಸಿದ್ದು, ಅವುಗಳಲ್ಲಿ ಹಕ್ಕಿ ಜ್ವರದ ವೈರಸ್ ಇರುವುದು ಪತ್ತೆಯಾಗಿದೆ. ಹಕ್ಕಿ ಜ್ವರದ ಆತಂಕ ಎದುರಾಗಿರುವುದರಿಂದ ಜನವರಿ 19ರಿಂದ ಜನವರಿ 26ರವರೆಗೂ ಕೆಂಪು ಕೋಟೆಗೆ ಪ್ರವೇಶ ನಿಷೇಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿಯ ಮೃಗಾಲಯವೊಂದರಲ್ಲಿಯೂ ಬ್ರೌನ್ ಫಿಶ್‌ ಗೂಬೆ ಸತ್ತು ಬಿದ್ದಿದ್ದು, ಮೃಗಾಲಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ದೆಹಲಿ ಹಾಗೂ ದೆಹಲಿಯ ಇನ್ನಿತರ ಪ್ರದೇಶಗಳಲ್ಲಿ ಹಕ್ಕಿ ಜ್ವರದ ಭೀತಿ ಎದುರಾಗಿದ್ದು, ಘಾಜಿಪುರ ಪೌಲ್ಟ್ರಿ ಮಾರುಕಟ್ಟೆಯಲ್ಲಿ ಕೋಳಿಗಳನ್ನು ಕೊಲ್ಲುವ ಸಂಬಂಧ ಮಂಗಳವಾರ ಮನವಿಯೊಂದನ್ನು ಕೈಗೆತ್ತಿಕೊಂಡ ಹೈಕೋರ್ಟ್, ವಿಚಾರಣೆಯನ್ನು ಮಾರ್ಚ್ 8ಕ್ಕೆ ಮುಂದೂಡಿತು.