Sunday, 15th December 2024

ಭಾರಿ ಮಳೆ: ಸಂಜೆಯವರೆಗೆ ವಿಮಾನಗಳ ಲ್ಯಾಂಡಿಂಗ್‌ಗೆ ನಿರ್ಬಂಧ

ಚೆನ್ನೈ: ತಮಿಳುನಾಡಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ವ್ಯಾಪಕ ಅನಾನು ಕೂಲ ಉಂಟಾಗಿದ್ದು, ಭಾರಿ ಮಳೆ ಮತ್ತು ಗಾಳಿ ಪರಿಣಾಮ ಸಂಜೆ 6ರವರೆಗೂ ವಿಮಾನಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.

ಚೆನ್ನೈ ವಿಮಾನ ನಿಲ್ದಾಣವು ಮಧ್ಯಾಹ್ನ 1.15 ರಿಂದ ಸಂಜೆ 6 ರವರೆಗೆ ಆಗಮಿಸುವ ಎಲ್ಲಾ ವಿಮಾನಗಳನ್ನು ಸ್ಥಗಿತಗೊಳಿಸಿದ್ದು, ನಿರ್ಗಮನವು ನಿಗದಿತವಾಗಿ ಮುಂದು ವರಿಯುತ್ತದೆ ಎಂದು ಟ್ವೀಟ್ ಮಾಡಿದೆ. ಪ್ರಯಾಣಿಕರ ಸುರಕ್ಷತೆಯ ಅಂಶ ಹಾಗೂ ಗಾಳಿಯ ತೀವ್ರತೆಯನ್ನು ಪರಿಗಣಿಸಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ವಿಮಾನ ನಿಲ್ದಾಣದ ನಿರ್ದೇಶ ಕರು ತಿಳಿಸಿದ್ದಾರೆ.

ಚೆನ್ನೈನಲ್ಲಿ ಇಳಿಯಬೇಕಿದ್ದ ವಿಮಾನಗಳನ್ನು ಬೇರೆ ನಿಲ್ದಾಣಗಳಿಗೆ ರವಾನಿಸಲಾಗಿದ್ದು, ಕೇವಲ ನಿಲ್ದಾಣಕ್ಕೆ ಆಗಮಿಸುವ ವಿಮಾನಗಳನ್ನು ರದ್ದು ಮಾಡಲಾಗಿದೆ. ಪ್ರಯಾಣಿಕರು ಪ್ರವಾಹದಲ್ಲಿ ನಿಲ್ಲದಂತೆ ತಡೆಯುವ ಉದ್ದೇಶದಿಂದ ವಿಮಾನಗಳ ಟೇಕ್ ಆಫ್ ಗೆ ಅನುಮತಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.