ಚೆನ್ನೈ: ಕೇರಳದಲ್ಲಿ ಕರೋನಾ ಪ್ರಕರಣಗಳ ಏರಿಕೆ ಬೆನ್ನಲ್ಲೇ ತಮಿಳುನಾಡಿನಲ್ಲಿ ಮತ್ತೆ ನಿರ್ಬಂಧಗಳನ್ನು ಹೇರಲಾಗಿದೆ. ಭಾನುವಾರದಂದು ಸಾರ್ವಜನಿಕರಿಗೆ ಬೀಚ್‌ಗಳಿಗೆ ಪ್ರವೇಶ ನಿರ್ಬಂಧ ಘೋಷಿಸಿದ್ದು, ವಾರಾಂತ್ಯದಲ್ಲಿ ಧಾರ್ಮಿಕ ಉತ್ಸವಗಳ ಮೇಲೆ ನಿರ್ಬಂಧ ಹೇರಲಾಗಿದೆ.
ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸೆಪ್ಟೆಂಬರ್ 15, ಬೆಳಿಗ್ಗೆ 6ರವರೆಗೂ ಈ ನಿರ್ಬಂಧಗಳು ಜಾರಿಯಲ್ಲಿರುತ್ತದೆ ಎಂದು ಅಧೀಕೃತ ಪ್ರಕಟಣೆ ತಿಳಿಸಿದೆ.
ಕರೊನಾ ಹರಡುವಿಕೆ ನಿಯಂತ್ರಿಸಲು ಭಾನುವಾರ ಬೀಚ್‌ಗಳನ್ನು ಮುಚ್ಚಲಾಗುತ್ತದೆ. ಶುಕ್ರವಾರ, ಶನಿವಾರ ಹಾಗೂ ಭಾನುವಾರಗಳಂದು ಪೂಜಾ ಸ್ಥಳಗಳಿಗೆ ಭೇಟಿ ನೀಡುವುದನ್ನು ನಿಷೇಧಿಸಲಾಗುವುದು. ಧಾರ್ಮಿಕ ಹಬ್ಬಗಳನ್ನು ನಡೆಸುವುದನ್ನು ಕೂಡ ನಿಷೇಧಿಸಲಾಗಿದೆ’ ಎಂದು ಪ್ರಕಟಣೆ ತಿಳಿಸಿದೆ.
ಕಳೆದ ವರ್ಷದಂತೆಯೇ ಗಣೇಶ ಚತುರ್ಥಿಯನ್ನು ಸೆಪ್ಟೆಂಬರ್ 10ರಂದು ಅದ್ಧೂರಿಯಾಗಿ ಆಚರಿಸದೇ ಇರಲು ನಿರ್ಧರಿಸಲಾಗಿದೆ. ಮೆರವಣಿಗೆಯನ್ನು ಸಂಪೂರ್ಣ ವಾಗಿ ನಿಷೇಧಿಸಿದೆ. 9ರಿಂದ 12ನೇ ತರಗತಿವರೆಗೆ ಸೆಪ್ಟೆಂಬರ್ 1ರಿಂದ ಕಾಲೇಜುಗಳನ್ನು ತೆರೆಯುವ ತಮ್ಮ ಹಿಂದಿನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸರ್ಕಾರದ ಪ್ರಕಟಣೆ ಸ್ಪಷ್ಟಪಡಿಸಿದೆ.
ಕೇರಳದಲ್ಲಿ ಏರುತ್ತಿರುವ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು, ನೆರೆಯ ರಾಜ್ಯದಿಂದ ಬರುವ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಲಾಗಿದೆಯೇ ಎಂದು ಕಾಲೇಜು ಗಳು ಖಚಿತಪಡಿಸಿಕೊಳ್ಳಬೇಕು ಹಾಗೂ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಹೊಂದಿರಬೇಕು ಎಂದು ಸರ್ಕಾರ ಸೂಚನೆ ನೀಡಿದೆ.
ಸೋಮವಾರ ತಮಿಳುನಾಡಿನಲ್ಲಿ 1523 ಪ್ರಕರಣಗಳು ದಾಖಲಾಗಿವೆ. 21 ಮಂದಿ ಮೃತಪಟ್ಟಿದ್ದು, ಮರಣ ಹೊಂದಿದವರ ಸಂಖ್ಯೆ 34,899 ಆಗಿದೆ.