Thursday, 26th December 2024

Noida Airport: ಉತ್ತರ ಭಾರತದ ಪ್ರವಾಸಿ ಹೆಬ್ಬಾಗಿಲು ನೊಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಿತು ಮೊದಲ ವಿಮಾನ!

ನವದೆಹಲಿ: ದೇಶದಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ (International Airport) ಪಟ್ಟಿಗೆ ಇನ್ನೊಂದು ಹೊಸ ಸೇರ್ಪಡೆಯಾಗಿದೆ. ನೊಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು (Noida Airport) ತನ್ನ ಮೊದಲ ವಿಮಾನ ಹಾರಾಟ ಪ್ರಕ್ರಿಯೆಯನ್ನು ಇಂದು ಯಶಸ್ವಿಯಾಗಿ ನಿರ್ವಹಿಸಿದೆ. ಈ ಮೂಲಕ ಮುಂದಿನ ವರ್ಷದಲ್ಲಿ ಈ ವಿಮಾನ ನಿಲ್ದಾಣದಿಂದ ಅಂತರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಪ್ರಾರಂಭಿಸಲು ಅಧಿಕಾರಿಗಳಿಗೆ ಗ್ರೀನ್ ಸಿಗ್ನಲ್ ನೀಡಲು ಅನುವು ಮಾಡಿ ಕೊಟ್ಟಂತಾಗಿದೆ.

ದೆಹಲಿಯ (Delhi) ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ (Indira Gandhi International Airport) ಹೊರಟ ಇಂಡಿಗೋ ವಿಮಾನವು ಸೂಕ್ತ ಭದ್ರತಾ ತಪಾಸಣೆಗಳನ್ನು ಪೂರೈಸಿ ಇಲ್ಲಿನ ರನ್ ವೇನಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಯಿತು. ಈ ಸಂದರ್ಭದಲ್ಲಿ ವಿಮಾನದಲ್ಲಿ ಸಿಬ್ಬಂದಿಗಳು ಮಾತ್ರವೇ ಇದ್ದರು. ಹೀಗೆ ಸುರಕ್ಷಿತವಾಗಿ ಲ್ಯಾಂಡ್ ಆದ ಇಂಡಿಗೋ ವಿಮಾನಕ್ಕೆ ‘ವಾಟರ್ ಸೆಲ್ಯೂಟ್’ (water salute) ನೀಡುವ ಮೂಲಕ ಸ್ವಾಗತ ಕೋರಲಾಯಿತು.

ಈ ಹೊಸ ವಿಮಾನ ನಿಲ್ದಾಣವು ಉತ್ತರಪ್ರದೇಶದ ಗೌತಮ ಬುದ್ಧ ನಗರ ಜಿಲ್ಲೆಯಲ್ಲಿರುವ ಜೆವಾರ್ ನಲ್ಲಿದೆ. ಮುಂದಿನ ವರ್ಷದ ಎಪ್ರಿಲ್ ತಿಂಗಳಿನಲ್ಲಿ ಇಲ್ಲಿ ಅಂತರಾಷ್ಟ್ರೀಯ ವಿಮಾನಗಳ ಹಾರಾಟ ಪ್ರಾರಂಭಗೊಳ್ಳುವ ನಿರೀಕ್ಷೆಯಿದೆ. ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಕ ಇದು ನ್ಯಾಷನಲ್ ಕ್ಯಾಪಿಟಲ್ ರೀಜನ್ (NCR) ವ್ಯಾಪ್ತಿಗೆ ಬರಲಿರುವ ಎರಡನೇ ಪ್ರಮುಖ ವಿಮಾನ ನಿಲ್ದಾಣವೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

‘ಇದೊಂದು ಅತ್ಯಮೂಲ್ಯ ಪ್ರಾಜೆಕ್ಟ್ ಆಗಿತ್ತು. ಇಲ್ಲಿ ಇವತ್ತು ವಿಮಾನ ಲ್ಯಾಂಡ್ ಆಗಿರುವುದು ಒಂದು ದೊಡ್ಡ ಸಾಧನೆಯಾಗಿದೆ’ ಎಂದು ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಖುಷಿಯಿಂದ ಪ್ರತಿಕ್ರಿಯಿಸಿದ್ದಾರೆ.

ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕ್ರಿಸ್ಟೋಫ್ ಶ್ನೆಲ್ಮೆನ್ ಅವರು ನಾಗರಿಕ ವಿಮಾನಯಾನ ಸಚಿವಾಲಯ, ನಾಗರಿಕ ವಿಮಾನಯಾನ ಮಹಾನಿರ್ದೇಶಕರು ಮತ್ತು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಇದೇ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ನಾವು ದಾಖಲೆ ಸಮಯದಲ್ಲಿ ಇಲ್ಲಿನ ಕೆಲಸ ಕಾರ್ಯಗಳನ್ನು ಪೂರೈಸಿದ್ದೇವೆ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಜೇವಾರ್ ವಿಮಾನ ನಿಲ್ದಾಣಕ್ಕೆ 2021ರಲ್ಲಿ ಪ್ರದಾನಿ ನರೇಂದ್ರ ಮೋದಿ (Narendra Modi) ಅವರು ಶಿಲಾನ್ಯಾಸ ನೆರವೇರಿಸಿದ್ದರು. ಈ ವಿಮಾನ ನಿಲ್ದಾಣವನ್ನು ಸ್ವಿಸ್ ಕಂಪೆನಿಯಾಗಿರುವ ಜ್ಯೂರಿಚ್ ಏರ್ಪೋರ್ಟ್ ಇಂಟರ್ ನ್ಯಾಷನಲ್ ಎ.ಜಿ.ಯ ಸಹಸಂಸ್ಥೆಯಾಗಿರುವ ಯಮುನಾ ಇಂಟರ್ನ್ಯಾಷನಲ್ ಏರ್ಪೋರ್ಟ್ ಪ್ರೈವೇಟ್ ಲಿಮಿಟೆಡ್ ಅಭಿವೃದ್ಧಿಪಡಿಸಿದ್ದು, ನೋಯ್ಡಾ ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌ ಲಿಮಿಟೆಡ್ ಉತ್ತರಪ್ರದೇಶ ಸರಕಾರದ ಪರವಾಗಿ ಇದರ ಉಸ್ತುವಾರಿ ನೋಡಿಕೊಳ್ಳಲಿದೆ.

ಒಟ್ಟು 1,334 ಹೆಕ್ಟೇರ್ ಪ್ರದೇಶದಲ್ಲಿ ಈ ಪ್ರಾಜೆಕ್ಟ್ ತಲೆ ಎತ್ತಲಿದ್ದು, ಇದೀಗ ಮೊದಲ ಹಂತದಲ್ಲಿ ಪ್ರತೀ ವರ್ಷ 1.2 ಕೋಟಿ ಪ್ರಯಾಣಿಕರು ಈ ವಿಮಾನ ನಿಲ್ದಾಣವನ್ನು ಬಳಸುವ ನಿರೀಕ್ಷೆಯಿದೆ. ಪ್ರಯಾಣಿಕರ ಸಂಖ್ಯೆ ಈ ದಶಕದ ಅಂತ್ಯಕ್ಕೆ 3 ಕೋಟಿ ಮತ್ತು ಆ ಬಳಿಕದ ಕೆಲ ವರ್ಷಗಳಲ್ಲಿ 7 ಕೋಟಿಗೆ ತಲುಪುವ ನಿರೀಕ್ಷೆಯನ್ನಿರಿಸಿಕೊಳ್ಳಲಾಗಿದೆ.

ಈ ಸುದ್ದಿಯನ್ನೂ ಓದಿ: Viral Video: ‘ಮುನ್ನಾ ಲಾಲ್ ಫುಲ್ ಮಾಲ್… ಮಾಲ್..’ ಕುಡಿದು ತೂರಾಡುತ್ತಾ ಸ್ಕೂಲಿಗೆ ಬಂದ ಪ್ರಿನ್ಸಿಪಾಲ್; ವಿಡಿಯೋ ಇದೆ

ಇದೀಗ ರನ್ ವೇ ಯನ್ನು ಪ್ರಾಯೋಗಿಕವಾಗಿ ತೆರೆಯಲಾಗಿದ್ದು, ಒಮ್ಮೆ ಇಲ್ಲಿ ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಣೆ ಪ್ರಾರಂಭಗೊಂಡಲ್ಲಿ, 10 ಏರೋ ಬ್ರಿಡ್ಜ್ ಗಳು ಹಾಗೂ ಮೂರು ಬಸ್ ಗೇಟ್ ಗಳು ಕಾರ್ಯನಿರ್ವಹಿಸಲಿವೆ. ಇಲ್ಲಿ ಎರಡು ರನ್ ವೇಗಳು ಕಾರ್ಯನಿರ್ವಹಿಸಲಿದ್ದು, ಈ ವಿಮಾನ ನಿಲ್ದಾಣದಲ್ಲಿ 28 ವಿಮಾನ ನಿಲುಗಡೆ ಜಾಗಗಳಿವೆ. ಭವಿಷ್ಯದಲ್ಲಿ ವಿಮಾನಗಳು ಮತ್ತು ಪ್ರಯಾಣಿಕ ಸಂಖ್ಯೆ ಹೆಚ್ಚಾದಂತೆ ಈ ವಿಮಾನ ನಿಲುಗಡೆ ಅವಕಾಶ 200ಕ್ಕೆ ಏರಿಕೆಯಾಗಲಿದೆ.

ಈ ವಿಮಾನ ನಿಲ್ದಾಣವು ಗ್ರೇಟರ್ ನೊಯ್ಡಾ, ನೋಯ್ಡಾ ಮತ್ತು ನವದೆಹಲಿಗಳನ್ನು ಸಿಗ್ನಲ್ ಮುಕ್ತ ಯಮುನಾ ಎಕ್ಸ್ ಪ್ರೆಸ್ ವೇ ಮೂಲಕ ಸಂಪರ್ಕಿಸಲಿದೆ. ಈ ವಿಮಾನ ನಿಲ್ದಾಣವು ಉತ್ತರ ಭಾರತಕ್ಕೆ ಆಗಮಿಸುವ ಪ್ರವಾಸಿಗರಿಗೆ ಹೆಬ್ಬಾಗಿಲಾಗಲಿದ್ದು, ಇಲ್ಲಿಂದ ಆಗ್ರಾದಲ್ಲಿರುವ ತಾಜ್ ಮಹಲ್ ಮತ್ತು ಹಿಂದುಗಳ ಧಾರ್ಮಿಕ ಕ್ಷೇತ್ರಗಳಾಗಿರುವ ಚಾರ್ ಧಾಮ ಯಾತ್ರೆ, ಕುಂಭ ಮೇಳ, ಮಥುರಾ-ವೃಂದಾವನ ಹಾಗೂ ಬೌದ್ಧ ಧರ್ಮದ ಪ್ರಮುಖ ಕೇಂದ್ರಗಳಾದ ಸರಸ್ವತಿ, ಕಪಿಲವಸ್ತು ಮತ್ತು ಖುಷಿನಗರಕ್ಕೂ ಸಂಪರ್ಕ ಸೇತುವಾಗಲಿದೆ.